ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ: ಒಂದು ವರ್ಷದ ಬಳಿಕ ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?

ಹರಿಯಾಣದ ಸೋನಿಪತ್‌ನಲ್ಲಿ ಪ್ರೀತಮ್ ಪ್ರಕಾಶ್ ಎಂಬಾತನ ಕೊಲೆ ಪ್ರಕರಣಕ್ಕೆ (Murder Case) ಸಂಬಂಧಿಸಿ ಆತನ ಪತ್ನಿ ಸೋನಿಯಾ, ಆಕೆಯ ಗೆಳೆಯ ರೋಹಿತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿ ವಿಜಯ್ ಎಂಬಾತ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ: ವರ್ಷದ ಬಳಿಕ ಪ್ರಕರಣ ಬೆಳಕಿಗೆ

ಚಂಡೀಗಢ: ವಿವಾಹದಲ್ಲಿ ವಂಚನೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ. ಹರಿಯಾಣದ (Haryana) ಸೋನಿಪತ್‌ನಲ್ಲಿ (Sonipat) ಒಂದು ವರ್ಷದ ಹಿಂದೆ ನಡೆದಿರುವ ಇಂತಹ ಒಂದು ಪ್ರಕರಣವನ್ನು ದೆಹಲಿ ಪೊಲೀಸರು (Delhi Police) ಇದೀಗ ಬೇಧಿಸಿದ್ದಾರೆ. ಪ್ರಿಯಕರನೊಂದಿಗೆ ಸೇರಿ ಮಹಿಳೆಯೊಬ್ಬಳು ಪತಿಯನ್ನು ಕೊಲೆ (murder case) ಮಾಡಿ ಮೃತದೇಹವನ್ನು ಚರಂಡಿಗೆ ಎಸೆದಿದ್ದು, ಇದೀಗ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಪೊಲೀಸರಿಗೆ ಸುಳಿವು ನೀಡಿದ್ದು ಕೊಲೆಯಾದ ವ್ಯಕ್ತಿಯ ಮೊಬೈಲ್ ಫೋನ್. ಸುಮಾರು ಒಂದು ವರ್ಷದ ಬಳಿಕ ಅದು ಮತ್ತೆ ಸಕ್ರಿಯಾವಾಗಿದ್ದು ತನಿಖೆಗೆ ಸಹಕಾರಿಯಾಯ್ತು.

ಹರಿಯಾಣದ ಸೋನಿಪತ್‌ನಲ್ಲಿ ಪ್ರೀತಮ್ ಪ್ರಕಾಶ್ (42) ಎಂಬಾತನನ್ನು ಕೊಲೆಗೈದು ಚರಂಡಿಗೆ ಎಸೆದ ಆರೋಪದ ಮೇರೆಗೆ ದೆಹಲಿಯ ಅಲಿಪುರ ನಿವಾಸಿ ಸೋನಿಯಾ (34) ಮತ್ತು ಸೋನಿಪತ್ ಮೂಲದ ಆಕೆಯ ಗೆಳೆಯ ರೋಹಿತ್ (28) ಎಂಬವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನೋರ್ವ ಆರೋಪಿ ವಿಜಯ್ ಎಂಬಾತ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಉಪ ಪೊಲೀಸ್ ಆಯುಕ್ತ (ಅಪರಾಧ) ಹರ್ಷ್ ಇಂದೋರಾ, ಪ್ರೀತಮ್ ಪ್ರಕಾಶ್ ವಿರುದ್ಧ ಕೂಡ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ವಿವಿಧ ಪ್ರಕರಣದಲ್ಲಿ ಆತನನ್ನು ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದೆ.

ಪ್ರೀತಮ್ ಪ್ರಕಾಶ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ, ಮಾದಕ ದ್ರವ್ಯ ಕಾಯ್ದೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ 10 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಹರ್ಷ್ ತಿಳಿಸಿದರು.

2024ರ ಜುಲೈ 5ರಂದು ಸೋನಿಯಾಳ ಸಹೋದರಿಯನ್ನು ಕರೆದುಕೊಂಡು ಹೋಗಲು ಪ್ರೀತಮ್ ಸೋನಿಪತ್‌ನ ಗನ್ನೌರ್‌ನಲ್ಲಿರುವ ಮನೆಗೆ ಬಂದಿದ್ದಾನೆ. ಈ ವೇಳೆ ಸೋನಿಯಾ ಜತೆ ಜಗಳ ಮಾಡಿ ಅಲ್ಲಿಂದ ಹೊರಟುಹೋಗಿದ್ದಾನೆ. ಅದೇ ದಿನ ಸೋನಿಯಾ ತನ್ನ ಸಹೋದರಿಯ ಸೋದರ ಮಾವ ವಿಜಯ್‌ಗೆ ತನ್ನ ಪತಿಯನ್ನು ಕೊಲ್ಲಲು 50,000 ರೂ.ಗಳನ್ನು ನೀಡಿದ್ದಾಳೆ. ಅನಂತರ ಪ್ರೀತಮ್ ಹಿಂತಿರುಗಿ ಬಂದಾಗ ಅವಳು ಅವನನ್ನು ಮನೆಯಲ್ಲಿಯೇ ಇರಲು ಹೇಳಿದಳು.

ಅದೇ ದಿನ ರಾತ್ರಿ ಅವನು ಟೆರೇಸ್‌ನಲ್ಲಿ ಮಲಗಿದ್ದಾಗ ವಿಜಯ್ ಆತನನ್ನು ಕೊಂದು ಅಗ್ವಾನ್‌ಪುರ ಬಳಿಯ ಚರಂಡಿಯಲ್ಲಿ ಶವವನ್ನು ಎಸೆದಿದ್ದಾನೆ. ಅಲ್ಲದೇ ಸಾಮಾಜಿಕ ಮಾಧ್ಯಮದ ಮೂಲಕ ಅವನ ಶವದ ವಿಡಿಯೊವನ್ನು ಸೋನಿಯಾಗೆ ಕಳುಹಿಸಿದನು. ಇದಾದ 15 ದಿನಗಳ ಬಳಿಕ ಸೋನಿಯಾ ತನ್ನ ಪತಿ ಹೊರಗೆ ಹೋಗಿದ್ದು, ಮರಳಿ ಬಂದಿಲ್ಲ ಎಂದು ಅಲಿಪುರ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಳು.

ಹಲವಾರು ವಾರಗಳವರೆಗೆ ಈ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಯಾವುದೇ ಕುರುಹು ಸಿಗಲಿಲ್ಲ. ಬಳಿಕ ಅಧಿಕಾರಿಗಳು ಪ್ರೀತಮ್‌ನ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿದರು. ಅದು ಸುಮಾರು ಒಂದು ವರ್ಷದ ಬಳಿಕ ಸಕ್ರಿಯವಾಗಿರುವುದು ಕಂಡು ಬಂದಿದ್ದರಿಂದ ಅವರು ಅದರ ಬೆನ್ನು ಹಿಡಿದು ಸೋನಿಪತ್‌ಗೆ ತೆರಳಿದರು. ಆ ಫೋನ್ ರೋಹಿತ್ ಬಳಿ ಇತ್ತು. ಆತನನ್ನು ವಿಚಾರಣೆ ನಡೆಸಿದಾಗ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ ಪ್ರಕರಣದ ಸಂಪೂರ್ಣ ವಿವರವನ್ನು ಪೊಲೀಸರಿಗೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೀತಮ್ ಸತ್ತು ಕೆಲವು ದಿನಗಳ ಬಳಿಕ ಹರಿಯಾಣ ಪೊಲೀಸರು ಶವವನ್ನು ಪತ್ತೆಹಚ್ಚಿದ್ದರು. ಆದರೆ ಅವರಿಗೆ ಅದನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ದೆಹಲಿ ಪೊಲೀಸರು ಸುಮಾರು ಒಂದು ವರ್ಷದ ಅನಂತರ ಅವರನ್ನು ಸಂಪರ್ಕಿಸುವವರೆಗೂ ಇದು ಅಪರಿಚಿತ ಶವ ಎಂದೇ ಪ್ರಕರಣ ದಾಖಲಾಗಿತ್ತು.

ಪ್ರೀತಮ್‌ನನ್ನು ಕೊಲೆಗೈದ ಬಳಿಕ ಸೋನಿಯಾ ಆತನ ಆಟೋ ರಿಕ್ಷಾವನ್ನು 4.5 ಲಕ್ಷ ರೂ.ಗೆ ಮಾರಾಟ ಮಾಡಿದ್ದಳು. ರೋಹಿತ್‌ಗೆ ಆತನ ಮೊಬೈಲ್ ಫೋನ್ ಅನ್ನು ಹಸ್ತಾಂತರಿಸಿದ್ದಳು. ಹರಿಯಾಣ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಸಂಗ್ರಹಿಸಲಾದ ಡಿಎನ್‌ಎ ಮಾದರಿಗಳಿಂದ ಇದೀಗ ಶವವನ್ನು ಖಚಿತವಾಗಿ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋನಿಯಾ ಸುಮಾರು 15 ವರ್ಷದವಳಿದ್ದಾಗ ಪ್ರೀತಮ್‌ನನ್ನು ಪ್ರೀತಿಸಿ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಆತನನ್ನು ಮದುವೆಯಾಗಿದ್ದಳು. ಈ ಬಗ್ಗೆ ಪೊಲೀಸರಿಗೆ ಅಧಿಕೃತವಾಗಿ ವರದಿಯಾಗಿರಲಿಲ್ಲ. ಆದರೆ ಕುಟುಂಬಗಳು ಅಂತಿಮವಾಗಿ ಅವರನ್ನು ಒಪ್ಪಿಕೊಂಡಿತ್ತು. ಅವರಿಗೆ 16 ವರ್ಷದ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಮೂವರು ಮಕ್ಕಳಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತರು (ಡಿಸಿಪಿ) ತಿಳಿಸಿದ್ದಾರೆ.

ಇದನ್ನೂ ಓದಿ: Car crash: ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರು ಹಿರಿಯ ನಾಗರಿಕರ ಮೃತದೇಹ ಪತ್ತೆ

ರೋಹಿತ್ ಈ ಹಿಂದೆ ಕೊಲೆ ಮತ್ತು ಶಸ್ತ್ರಾಸ್ತ್ರ ಸ್ವಾಧೀನಕ್ಕೆ ಸಂಬಂಧಿಸಿದ ನಾಲ್ಕು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪ್ರಸ್ತುತ ಮೂರನೇ ಆರೋಪಿ ವಿಜಯ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ.