ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

5 ವಿಧಾನಸಭಾ ಚುನಾವಣೆಗಳ ರಿಸಲ್ಟ್‌ ಘೋಷಣೆಗೆ ದಿನಗಣನೆ; ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕೋಟೆಯಲ್ಲಿ ಕಮಲ ಕಮಾಲ್‌? ಕೇರಳಂನಲ್ಲಿ ಎಡರಂಗದ ಆಡಳಿತ ಅಂತ್ಯ? ಟಿವಿಕೆಗೆ ʼವಿಜಯʼ?

Assembly Election Result 2026: ಬಹುನಿರೀಕ್ಷಿತ 5 ವಿಧಾನಸಭೆಗಳ ಚುನಾವಣೆ ಮುಕ್ತಾಯಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿ ಸ್ಟ್ರಾಂಗ್‌ ರೂಂ ಸೇರಿದೆ. ಉತ್ತರದ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ, ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕೇರಳಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಚುನಾವಣೆ ನಡೆದಿದ್ದು, ಈಗಾಗಲೇ ಎಕ್ಸಿಟ್‌ ಪೋಲ್‌ ರಿಪೋರ್ಟ್‌ ಹೊರ ಬಿದ್ದು ಫಲಿತಾಂಶದ ಅಸ್ಪಷ್ಟ ಚಿತ್ರ ಲಭಿಸಿದೆ. ಮೇ 4ರಂದು 8 ಗಂಟೆ ಆಗುತ್ತಿದ್ದಂತೆ ಮತ ಎಣಿಕೆ ಆರಂಭವಾಗಲಿದ್ದು, ಯಾವ ರಾಜ್ಯ ಯಾರಿಗೆ ಒಲಿಯಲಿದೆ ಎನ್ನುವುದರ ಸ್ಪಷ್ಟ ಚಿತ್ರಣ ದೊರೆಯಲಿದೆ. ಹೀಗಾಗಿ ಇಡೀ ದೇಶದ ಚಿತ್ತ ಫಲಿತಾಂಶದತ್ತ ನೆಟ್ಟಿದ್ದು, ಅದಾದ ಬಳಿಕ ರಾಷ್ಟ್ರ ರಾಜಕೀಯದಲ್ಲೇ ಒಂದಷ್ಟು ಸ್ಥಿತ್ಯಂತರ ನಡೆಯುತ್ತ ಎನ್ನುವ ಕುತೂಹಲ ಮೂಡಿದೆ. ಹಾಗಾದರೆ ಯಾವ ರಾಜ್ಯದಲ್ಲಿ ಸದ್ಯದ ಟ್ರೆಂಡ್‌ ಹೇಗಿದೆ? ಯಾರಿಗೆ ಗೆಲುವಿನ ಅವಕಾಶ ಅಧಿಕವಾಗಿದೆ? ಎಕ್ಸಿಟ್‌ ಪೋಲ್‌ ವರದಿ ಏನು ಹೇಳುತ್ತಿವೆ? ಎನ್ನುವುದನ್ನು ನೋಡಿಕೊಂಡು ಬರೋಣ.

ಸಾಂದರ್ಭಿಕ ಚಿತ್ರ
1/5

ಪಶ್ಚಿಮ ಬಂಗಾಳ

ಸದ್ಯ ಚುನಾವಣೆ ನಡೆದ ವಿಧಾನಸಭೆಗಳಲ್ಲೇ ಅತೀ ದೊಡ್ಡದು ಎನಿಸಿಕೊಂಡಿರುವ ಪಶ್ಚಿಮ ಬಂಗಾಳ ದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. 15 ವರ್ಷಗಳಿಂದ ಇಲ್ಲಿ ಟಿಎಂಸಿ ಅಧಿಕಾರದಲ್ಲಿದೆ. ಆದರೆ ಈ ಬಾರಿ ಆಡಳಿತರೂಢ ಸರ್ಕಾರ ಕುಸಿದು ಬೀಳಲಿದೆ ಎನ್ನಲಾಗಿದ್ದು, 4ನೇ ಬಾರಿಗೆ ಮುಖ್ಯಮಂತ್ರಿಯಾಗುವ ಮಮತಾ ಬ್ಯಾನರ್ಜಿ ಕನಸಿಗೆ ಬ್ರೇಕ್‌ ಬೇಳುವ ಸಾಧ್ಯತೆ ಇದೆ. ಟಿಎಂಸಿ ಕೋಟೆ ಒಡೆದು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇಲ್ಲಿ ಒಟ್ಟು 294 ಕ್ಷೇತ್ರಗಳಿದ್ದು, ಮ್ಯಾಜಿಕ್‌ ನಂಬರ್‌ 148. ಟುಡೇಸ್‌ ಚಾಣಕ್ಯ, ಪ್ರಜಾ ಪೋಲ್‌, ಪಿ-ಮಾರ್ಕ್‌, ಮ್ಯಾಟ್ರಿಜ್‌, ಜೆವಿಸಿ, ಚಾಣಕ್ಯ, ಪೋಲ್‌ ಡೈರಿ ಸಮೀಕ್ಷೆಗಳು ಬಿಜೆಪಿ ಸರ್ಕಾರ ರಚಿಸಲಿದೆ ಎಂದಿದ್ದು, 142ರಿಂದ 200 ಸೀಟ್‌ ಲಭಿಸುವ ಸಾಧ್ಯತೆ ಇದೆ. ಇನ್ನು ಜೆವಿಸಿ, ಚಾಣಕ್ಯ, ಪೀಪಲ್ಸ್‌ ಪಲ್ಸ್‌, ಜನ್‌ಮಾತಾ ಪೋಲ್ಸ್‌ ಟಿಎಂಸಿ ಸರ್ಕಾರದತ್ತ ಬೊಟ್ಟು ಮಾಡಿವೆ.

2/5

ಅಸ್ಸಾಂ

126 ಕ್ಷೇತ್ರಗಳ ಪುಟ್ಟ ರಾಜ್ಯ ಅಸ್ಸಾಂನಲ್ಲಿ ಸರ್ಕಾರ ರಚಿಸಲು ಅಗತ್ಯವಾದ ಮ್ಯಾಜಿಕ್‌ ನಂಬರ್‌ 64. 2 ಅವಧಿಯಲ್ಲಿ ಇಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಹ್ಯಾಟ್ರಿಕ್‌ ಸಾಧನೆ ಮಾಡಲಿದೆ ಎಂದೇ ಬಹುತೇಕ ಎಲ್ಲ ಸಮೀಕ್ಷೆಗಳು ತಿಳಿಸಿವೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಮತ್ತೊಮ್ಮೆ ಪಟ್ಟಕ್ಕೇರುವುದು ಬಹುತೇಕ ಖಚಿತವಾದಂತಿದೆ. ಬಿಜೆಪಿ 68ರಿಂದ 102 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಎಕ್ಸಿಟ್‌ ಪೋಲ್‌ಗಳು ಹೇಳಿವೆ. ಕಾಂಗ್ರೆಸ್‌ಗೆ ಗರಿಷ್ಠ 40 ಸೀಟ್‌ಗಳಲ್ಲಷ್ಟೇ ವಿಜಯಲಕ್ಷ್ಮೀ ಒಲಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

3/5

ಕೇರಳಂ

ದೇವರ ಸ್ವಂತ ನಾಡು ಎಂದು ಕರೆಲ್ಪಡುವ ಕೇರಳಂ ವಿಧಾನಸಭೆ ಚುನಾವಣೆ ಸದ್ಯ ಕುತೂಹಲದ ಕೇಂದ್ರಬಿಂದು ಎನಿಸಿಕೊಂಡಿದೆ. ಇಲ್ಲಿ ಒಟ್ಟು 140 ಕ್ಷೇತ್ರಗಳಿದ್ದು, ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಕನಿಷ್ಠ 71 ಕಡೆಗಳಲ್ಲಿ ಜಯ ಗಳಿಸಬೇಕು. ಪ್ರತಿ 5 ವರ್ಷಕ್ಕೊಮ್ಮೆ ಎಡಪಕ್ಷಗಳ ಮೈತ್ರಿಕೂಟ ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಧಿಕಾರಕ್ಕೆ ಬರುವುದು ರೂಢಿ. ಆದರೆ ಕಳೆದ 10 ವರ್ಷಗಳಿಂದ ಅಂದರೆ ಸತತ 2 ಬಾರಿ ಎಲ್‌ಡಿಎಫ್‌ ಸರ್ಕಾರ ರೂಪುಗೊಂಡಿದೆ. ಈ ಬಾರಿ ಮತ್ತೆ ಅಧಿಕಾರ ಹಿಡಿಯಲೇಬೇಕು ಎನ್ನುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕನಸಿಗೆ ಯುಡಿಎಫ್‌ ಅಡ್ಡಗಾಲು ಹಾಕುವುದು ಬಹುತೇಕ ನಿಶ್ಚಿತ ಎಂದು ಚುನಾವಣೋತ್ತರ ಸಮೀಕ್ಷೆಗಳ ವರದಿ ತಿಳಿಸಿದೆ. ಜತೆಗೆ ಮೊದಲ ಬಾರಿಗೆ ಬಿಜೆಪಿ 3ರಿಂದ 5 ಸೀಟ್‌ಗಳಲ್ಲಿ ಜಯ ಗಳಿಸಲಿದೆ ಎನ್ನಲಾಗಿದೆ. ಇಂಡಿಯಾ ಟುಡೆ-ಆಕ್ಸಿಸ್‌ ಮೈ ಇಂಡಿಯಾ, ವೋಟ್‌ ವೈಬ್‌, ಪಿ-ಮಾರ್ಕ್‌, ಟೈಮ್ಸ್‌ ನೌ-ಜೆವಿಸಿ, ಮ್ಯಾಟ್ರಿಜ್‌, ಪೀಪಲ್ಸ್‌ ಪಲ್ಸ್‌, ಪೀಪಲ್ಸ್‌ ಇನ್‌ಸೈಟ್‌, ಪೋಲ್‌ ಆಫ್‌ ಎಕ್ಸಿಟ್‌ ಪೋಲ್ಸ್‌ ಸಮೀಕ್ಷೆಗಳು ಯುಡಿಎಫ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದಿದ್ದು, 70ರಿಂದ 90ರ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದಿವೆ. ಟುಡೇಸ್‌ ಚಾಣಕ್ಯ ಮಾತ್ರ ಎಲ್‌ಡಿಎಫ್‌ ಪರ ಜನರ ಒಲವಿದೆ ಎಂದಿದೆ. ಹೀಗಾಗಿ ದೇಶದ ಏಕೈಕ ಎಡರಂಗದ ಸರ್ಕಾರ ಈ ಬಾರಿ ಪತನವಾಗುವುದು ನಿಶ್ಚಿತವಾದಂತಿದೆ.

4/5

ತಮಿಳುನಾಡು

ಕಾಲಿವುಡ್‌ ಸೂಪರ್‌ ಸ್ಟಾರ್‌ ದಳಪತಿ ವಿಜಯ್‌ ಟಿವಿಕೆ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಧುಮುಕುವ ಮೂಲಕ ತಮಿಳುನಾಡು ವಿಧಾನಸಭಾ ಚುನಾವಣೆ ಮತ್ತಷ್ಟು ಗಮನ ಸೆಳೆದಿದೆ. ಸದಾ ಸ್ಥಳೀಯ ಪಕ್ಷಗಳಿಗೆ ಮಣೆ ಹಾಕುವ ತಮಿಳಿಗರು ಮತ್ತೊಮ್ಮೆ ಆ ಪರಂಪರೆ ಮುಂದುವರಿಸುವುದು ಬಹುತೇಕ ಫಿಕ್ಸ್‌ ಆಗಿದೆ. ಇಲ್ಲಿ ಒಟ್ಟು 234 ಕ್ಷೇತ್ರಗಳಿದ್ದು ಮ್ಯಾಜಿಕ್‌ ನಂಬರ್‌ 118. ಎಕ್ಸಿಟ್‌ ಪೋಲ್‌ ಪ್ರಕಾರ ಆಡಳಿತರೂಢ ಡಿಎಂಕೆ ಮತ್ತೊಮ್ಮೆ ಅಧಿಕಾರಕ್ಕೇರುವುದು ಖಚಿತ. ಜತೆಗೆ ಟಿವಿಕೆ ಚೊಚ್ಚಲ ಸ್ಪರ್ಧೆಯಲ್ಲೇ ಕಿಂಗ್‌ ಮೇಕರ್‌ ಆಗಿ ಹೊರ ಹೊಮ್ಮಲಿದೆ. ಟುಡೇಸ್‌ ಚಾಣಕ್ಯ, ಚಾಣಕ್ಯ ಸ್ಟ್ರಾಟಜೀಸ್‌, ಮ್ಯಾಟ್ರಿಜ್‌, ಪೀಪಲ್ಸ್‌ ಪಲ್ಸ್‌, ಪೋಲ್ಸ್‌ ಆಫ್‌ ಎಕ್ಸಿಟ್‌ ಪೋಲ್ಸ್‌, ಪಿ-ಮಾರ್ಕ್‌, ಪೀಪಲ್ಸ್‌ ಇನ್‌ಸೈಟ್‌ ಸಮೀಕ್ಷೆ ಡಿಎಂಕೆ ಸರ್ಕಾರ ರಚಿಸಲಿದೆ ಎಂದಿದೆ. ಇನ್ನು ವೋಟ್‌ ವೈಬ್‌, ಟೈಮ್ಸ್‌ ನೌ-ಜೆವಿಸಿ ಎಕ್ಸಿಟ್‌ ಪೋಲ್‌ ಎಐಎಡಿಎಂಕೆ ಅಧಿಕಾರಕ್ಕೆ ಬರುವ ಬಗ್ಗೆ ಭವಿಷ್ಯ ನುಡಿದಿವೆ. ಇನ್ನು ಇಂಡಿಯಾ ಟುಡೆ-ಎಕ್ಸಿಸ್‌ ಮೈ ಇಂಡಿಯಾ ಟಿವಿಕೆ 98-120 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ ಎಂದಿದೆ.

5/5

ಪುದುಚೇರಿ

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ 30 ಕ್ಷೇತ್ರಗಳಿದ್ದು, ಅಧಿಕಾರಕ್ಕೆ ಬರಲು 16 ಸೀಟ್‌ಗಳಲ್ಲಿ ಜಯ ಗಳಿಸಬೇಕು. ಈಗಾಗಲೇ ಇಲ್ಲಿ ರಂಗಸಾಮಿ ನೇತೃತ್ವದ ಎನ್‌ಡಿಎ ಅಧಿಕಾರದಲ್ಲಿದ್ದು, ಮತ್ತೊಮ್ಮೆ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ. ಇಂಡಿಯಾ ಟುಡೆ-ಆಕ್ಸಿಸ್‌ ಮೈ ಇಂಡಿಯಾ, ಪೀಪಲ್ಸ್‌ ಪಲ್ಸ್‌, ಟೈಮ್ಸ್‌ ನೌ-ಜೆವಿಸಿ, ಪ್ರಜಾ ಪೋಲ್‌, ಪೋಲ್‌ ಆಫ್‌ ಎಕ್ಸಿಟ್‌ ಪೋಲ್ಸ್‌ ಮತ್ತು ಕಾಮಾಖ್ಯ ಅನಾಲಿಟಿಕ್ಸ್‌ ಚುನಾವಣೋತ್ತರ ಸಮೀಕ್ಷಾ ವರದಿಗಳು ಎನ್‌ಡಿಎ ಅಧಿಕಾರ ಉಳಿಸಿಕೊಳ್ಳಲಿದೆ ಎಂದಿವೆ.

Ramesh Ballamoole

View all posts by this author