ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Auto LPG shortage: ಬೆಂಗಳೂರಿನಲ್ಲಿ ಎಲ್‌ಪಿಜಿಗೆ ಹಾಹಾಕಾರ; ಬಂಕ್‌ಗಳ ಮುಂದೆ ಕಿ.ಮೀ.ಗಟ್ಟಲೇ ಆಟೋಗಳ ಕ್ಯೂ!

Auto LPG shortage: ರಾಜ್ಯದಲ್ಲಿ ಗ್ಯಾಸ್‌ ಕೊರತೆ ಹಿನ್ನೆಲೆಯಲ್ಲಿ ಆಟೋ ಎಲ್‌ಪಿಜಿ ದರವು ಪೆಟ್ರೋಲ್‌ ಬೆಲೆಯನ್ನೂ ಮೀರಿಸಿದೆ. ಆಟೋ ಗ್ಯಾಸ್‌ 105 ರೂ.ಗೆ ಹೆಚ್ಚಳವಾಗಿದ್ದು, ಆಟೋ ಚಾಲಕರು ಪರದಾಡುವಂತಾಗಿದೆ. ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕು ಎಂದು ಚಾಲಕರು ಆಗ್ರಹಿಸಿದ್ದಾರೆ.

ಬೆಂಗಳೂರಿನ ಕೆಂಗೇರಿಯಲ್ಲಿ ಬಂಕ್‌ ಬಳಿ ಸಾಲುಗಟ್ಟಿ ನಿಂತಿರುವ ಆಟೋಗಳು. (ಫೋಟೊಗಳು: ಸುಧಾಕರ್‌ ದೇವರಾಜ್‌, ವಿಶ್ವವಾಣಿ)
1/9

ರಾಜಧಾನಿ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಆಟೋ ಗ್ಯಾಸ್‌ಗೆ ಹಾಹಾಕಾರ ಉಂಟಾಗಿದೆ. ಎಲ್‌ಪಿಜಿ ಕೊರತೆಯಿಂದ ಗ್ಯಾಸ್​​ ಸ್ಟೇಷನ್​ಗಳ ಮುಂದೆ ನೂರಾರು ಆಟೋಗಳು ಕ್ಯೂ ನಿಂತಿರುವುದು ಸಾಮಾನ್ಯವಾಗಿದ್ದು, ಅನಿಲಕ್ಕಾಗಿ ಐದಾರು ಗಂಟೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

2/9

ಇನ್ನು ಶುಕ್ರವಾರ ಕೂಡ ನಗರದ ನಂದಿನಿ ಲೇಔಟ್‌, ಕೆಂಗೇರಿ ಸೇರಿ ಹಲವು ಕಡೆ ಬಂಕ್‌ಗಳ ಮುಂದೆ ಆಟೋಗಳು ಸರದಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು. ಗಂಟೆಗಟ್ಟಲೇ ಕಾದರೂ ಗ್ಯಾಸ್‌ ಸಿಗದ ಹಿನ್ನೆಲೆಯಲ್ಲಿ ಆಟೋ ಚಾಲಕರು ಕಂಗಾಲಾಗಿದ್ದಾರೆ.

3/9

ನಂದಿನಿ ಲೇಔಟ್‌, ಕೆಂಗೇರಿ ಸೇರಿ ನಗರದ ವಿವಿಧೆಡೆ ಆಟೋ ಎಲ್‌ಪಿಜಿ ಬಂಕ್‌ಗಳ ಬಳಿ ಕಿ.ಮೀ.ಗಟ್ಟಲೇ ಆಟೋಗಳು ನಿಂತಿರುವುದು ಕಂಡುಬಂದಿದೆ. ಇನ್ನು ಹಲವೆಡೆ ಎಲ್‌ಪಿಜಿ ಖಾಲಿ ಆಗಿದ್ದರಿಂದ ಚಾಲಕರು ಆಟೋಗಳನ್ನು ತಳ್ಳುತ್ತಾ ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು.

4/9

ಕಮರ್ಷಿಯಲ್ ಸಿಲಿಂಡರ್​ ರೀತಿಯಲ್ಲೇ ಆಟೋ ಗ್ಯಾಸ್ ಕೊರತೆ ಕಂಡುಬಂದಿದೆ. ಇದರಿಂದ ಹಲವೆಡೆ ಆಟೋ ಚಾಲಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ದಾರೆ.

5/9

ಗ್ಯಾಸ್‌ ಕೊರತೆ ಹಿನ್ನೆಲೆಯಲ್ಲಿ ಆಟೋಗಳು ನಿಂತಲ್ಲೇ ನಿಂತಿರುವುದು ಹಲವೆಡೆ ಕಂಡುಬಂದಿದೆ. ಹೀಗಾಗಿ ಆದಾಯ ಇಲ್ಲದೆ ಆಟೋ ಚಾಲಕರು ಆತಂಕಗೊಂಡಿದ್ದಾರೆ.

6/9

ಮತ್ತೊಂದೆಡೆ ಪ್ರತಿ ನಿತ್ಯ ಆಟೋಗಳ ಮೇಲೆ ಅವಲಂಬಿತರಾಗಿದ್ದ ಜನರಿಗೂ ಇದರ ಬಿಸಿ ತಟ್ಟಿದೆ. ಓಲಾ, ಉಬರ್‌ ಆ್ಯಪ್‌ ಮೂಲಕ ಬುಕ್‌ ಮಾಡಿದರೂ ಆಟೋಗಳು ಸಿಗದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ.

7/9

ನಗರದ ಯಾವುದೇ ಬಂಕ್‌ ಮುಂದೆ ನಿಂತರೂ ಆಟೋ ಎಲ್‌ಪಿಜಿ ಸಿಗುತ್ತಿಲ್ಲ. ಬೆಳಗ್ಗೆ 3ಗಂಟೆಗೆ ಎದ್ದು ಬಂಕ್‌ಗಳ ಮುಂದೆ ನಿಂತರೂ ಗ್ಯಾಸ್‌ ಸಿಗುತ್ತಿಲ್ಲ. ಇದರಿಂದ ಸಂಕಷ್ಟ ಎದುರಿಸುವಂತಾಗಿದೆ ಎಂದು ಆಟೋ ಚಾಲಕರೂ ಅಳಲು ತೋಡಿಕೊಳ್ಳುತ್ತಿದ್ದಾರೆ.

8/9

ಆಟೋ ಓಡದಿದ್ದರೆ ನಮ್ಮ ಜೀವನ ಸಾಗಲ್ಲ. ಕೊರತೆ ಹಿನ್ನೆಲೆ ಆಟೋ ಎಲ್‌ಪಿಜಿ ಬೆಲೆ ಹೆಚ್ಚಳವಾಗಿದ್ದು, ಲೀಟರ್‌ಗೆ 105 ರೂ. ಕೊಡಬೇಕಾಗಿದೆ. ಆಟೋ ಓಡಿಸಿಯೇ ನಾವು ಜೀವನ ಸಾಗಿಸಬೇಕಾಗಿದೆ. ಗ್ಯಾಸ್‌ ಪಡೆಯಲು ಗಂಟೆಗಟ್ಟಲೇ ಕಾಯುವಂತಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

9/9

ಇನ್ನು ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿರುವ ಕೆಲ ಬಂಕ್‌ ಮಾಲೀಕರು ಬೇಕಾಬಿಟ್ಟಿ ದರ ಏರಿಕೆ ಮಾಡಿರುವ ಆರೋಪಗಳು ಕೇಳಿಬಂದಿವೆ.