ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ; ಮಗಳ ಮದುವೆಗೆ ಆಹ್ವಾನ
Basavaraj S Bommai: ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಎಸ್. ಬೊಮ್ಮಾಯಿ ಭಾನುವಾರ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಪುತ್ರಿ ಅದಿತಿಯ ವಿವಾಹದ ಆಮಂತ್ರಣ ಪತ್ರಿಕೆಯನ್ನು ನೀಡಿ, ಮದುವೆಗೆ ಆಹ್ವಾನಿಸಿದರು. ಕುಟುಂಬ ಸಮೇತ ಬೊಮ್ಮಾಯಿ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಮೋದಿ ಭೇಟಿಯ ಫೋಟೊವನ್ನು ಬೊಮ್ಮಾಯಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆತ್ಮೀಯ ಮಾತುಕತೆ
ಬೊಮ್ಮಾಯಿ ಮತ್ತು ಅವರ ಕುಟುಂಬ ಸದಸ್ಯರನ್ನು ಸ್ವಾಗತಿಸಿದ ಪ್ರಧಾನಿ ಮೋದಿ ಅವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಜತೆಗೆ ಬೊಮ್ಮಾಯಿ ಅವರ ಮೊಮ್ಮಗನೊಂದಿಗೆ ಹರಟಿದರು.
ಮೋದಿಯೊಂದಿಗೆ ಮಿಂಚಿದ ಪುಟಾಣಿ
ಮಗುವನ್ನು ಹತ್ತಿರದಲ್ಲಿ ಕೂರಿಸಿಕೊಂಡು ಮೋದಿ ಖುಷಿಯಿಂದ ಒಂದಷ್ಟು ಹೊತ್ತು ಹರಟಿದರು. ಸದ್ಯ ಈ ವಿಶೇಷ ಕ್ಷಣದ ಫೋಟೊ ನೆಟ್ಟಿಗರ ಗಮನ ಸೆಳೆದಿದೆ.
ಮಾಹಿತಿ ಹಂಚಿಕೊಂಡ ಬೊಮ್ಮಾಯಿ
ಈ ಬಗ್ಗೆ ಬೊಮ್ಮಾಯಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ʼʼಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ನಮ್ಮ ಮಗಳಾದ ಅದಿತಿಯ ವಿವಾಹದ ಶುಭ ಆಮಂತ್ರಣ ಪತ್ರಿಕೆಯನ್ನು ನೀಡಿ, ಮದುವೆಗೆ ಆತ್ಮೀಯವಾಗಿ ಆಹ್ವಾನಿಸಿದೆವು. ಈ ಸಂದರ್ಭದಲ್ಲಿ ನಮ್ಮ ಕುಟುಂಬದ ಸದಸ್ಯರನ್ನು ಅತ್ಯಂತ ಪ್ರೀತಿ ಮತ್ತು ಆತ್ಮೀಯತೆಯಿಂದ ಮಾತನಾಡಿಸಿ, ಕುಟುಂಬದ ಯೋಗಕ್ಷೇಮ ವಿಚಾರಿಸಿದರು. ವಿಶೇಷವಾಗಿ ನಮ್ಮ ಮೊಮ್ಮಗನೊಂದಿಗೆ ಕೆಲಕಾಲ ಆತ್ಮೀಯವಾಗಿ ಸಮಯ ಕಳೆದು, ನಮ್ಮ ಮಗಳು ಅದಿತಿಗೆ ಆಶೀರ್ವದಿಸಿ, ಶುಭಕೋರಿದರು. ನಮ್ಮ ಕುಟುಂಬದ ಪಾಲಿಗೆ ಸದಾ ನೆನಪಿನಲ್ಲಿ ಉಳಿಯುವ ಈ ಸುಂದರ ಕ್ಷಣಗಳು ನಿಜಕ್ಕೂ ಅವಿಸ್ಮರಣೀಯ. ಅವರ ಪ್ರೀತಿ ಮತ್ತು ಆಶೀರ್ವಾದಕ್ಕೆ ಹೃತ್ಪೂರ್ವಕ ಧನ್ಯವಾದಗಳುʼʼ ಎಂದು ತಿಳಿಸಿದ್ದಾರೆ.
ಅಮಿತ್ ಶಾ ಅವರಿಗೂ ಆಹ್ವಾನ ಪತ್ರಿಕೆ
ಇದೇ ವೇಳೆ ಬೊಮ್ಮಾಯಿ ಮತ್ತು ಕುಟುಂಬ ಸದಸ್ಯರು ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗಿ ಮದುವೆಗೆ ಆಹ್ವಾನಿಸಿದರು.
2021ರಲ್ಲಿ ಮುಖ್ಯಮಂತ್ರಿ ಪಟ್ಟ
ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ 2021ರ ಜುಲೈಯಲ್ಲಿ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಗೃಹ ಸಚಿವರಾಗಿದ್ದರು. ಸದ್ಯ ಹಾವೇರಿ-ಗದಗ ಕ್ಷೇತ್ರದ ಸಂಸದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದಿತಿ ಬೊಮ್ಮಾಯಿ ಮತ್ತು ರೋಷನ್ ಸುಧೀರ್ ಅವರ ನಿಶ್ಚಿತಾರ್ಥ ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನೆರವೇರಿತ್ತು.