ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನ, ವಜ್ರ ಅರ್ಪಿಸಿದ ಚೆನ್ನೈ ದಂಪತಿ; ಆಭರಣದ ಫೋಟೊ ಇಲ್ಲಿದೆ
ತಿರುಮಲ ತಿರುಪತಿ ದೇವಸ್ಥಾನಕ್ಕೆ ಮಹಾ ದಾನವೊಂದು ಸಮರ್ಪಣೆಯಾಗಿದೆ. ದೇಗುಲದ ಇತಿಹಾಸದಲ್ಲೇ ಅತೀ ದೊಡ್ಡ ದಾನ ಇದಾಗಿದ್ದು, ಬರೋಬ್ಬರಿ 207 ಕೋಟಿ ರೂಪಾಯಿ ಮೌಲ್ಯದ 121 ಕೆಜಿ ಚಿನ್ನ ಮತ್ತು ವಜ್ರ ಆಭರಣವನ್ನು ಚೆನ್ನೈ ದಂಪತಿ ವರ್ಧಮಾನ್-ರಾಧಿಕಾ ಜೈನ್ ಗುರುವಾರ ದೇಗುಲಕ್ಕೆ ಹಸ್ತಾಂತರಿಸಿದರು. ಈ ವೇಳೆ ಅಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೇಗುಲದ ಆಡಳಿತ ಸಿಬ್ಬಂದಿ ಹಾಜರಿದ್ದರು. ಈ ಬೃಹತ್ ಉಡುಗೊರೆಯಲ್ಲಿ ಒಟ್ಟು 47 ಬಗೆಯ ಚಿನ್ನದ ಆಭರಣಗಳಿವೆ.
ವಿಶೇಷ ಆಭರಣ
ತಿರುಪತಿ ತಿರುಮಲ ದೇವಸ್ಥಾನಕ್ಕೆ ಚೆನ್ನೈ ಮೂಲದ ಉದ್ಯಮಿ ದಂಪತಿ ಬರೋಬ್ಬರಿ 121 ಕೆಜಿ ಚಿನ್ನ, ವಜ್ರಾಭರಣವನ್ನು ಸಮರ್ಪಿಸಿದೆ. ಈ ಮಹಾದಾನವು ದೇವರನ್ನು ಶಿರದಿಂದ ಪಾದದವರೆಗೆ ಅಲಂಕರಿಸಲು ವಿಶೇಷವಾಗಿ ತಯಾರಿಸಲಾದ ಆಭರಣಗಳನ್ನು ಒಳಗೊಂಡಿದೆ.
ಅತಿ ದೊಡ್ಡ ದಾನ
ದೇಗುಲದ ಇತಿಹಾಸದಲ್ಲೇ ಇದು ಅತೀ ದೊಡ್ಡ ಕೊಡುಗೆ ಎಂದು ಟಿಟಿಡಿ ತಿಳಿಸಿದೆ. ಆಭರಣಗಳನ್ನು ಅಧಿಕೃತವಾಗಿ ಹಸ್ತಾಂತರಿಸಿದ ಬಳಿಕ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಧನ್ಯವಾದ ಅರ್ಪಿಸಿದರು.
ಯಾವೆಲ್ಲ ಆಭರಣಗಳಿವೆ?
ಈ ದಾನದಲ್ಲಿ ಸುಮಾರು 47 ಬಗೆಯ ಚಿನ್ನದ ಆಭರಣಗಳಿವೆ. ಚಿನ್ನಾಭರಣಗಳ ತೂಕ ಸುಮಾರು 106 ಕೆಜಿ. ಅಲ್ಲದೆ ಪದ್ಮಾವತಿ ದೇವಿಗೆ 15 ಕೆಜಿ ಚಿನ್ನ. ಇದರಲ್ಲಿ 3 ಬಗೆಯ ಚಿನ್ನದ ಪಾದರಕ್ಷೆ ಮತ್ತು ಕಾಲ್ಗೆಜ್ಜೆಗಳಿವೆ. ಸೊಂಟ ಪಟ್ಟಿ, ಅಷ್ಟೋತ್ತರ ಕಸುಲ ಮಾಲೆ, ಲಕ್ಷ್ಮೀ ನೆಕ್ಲೆಸ್, ಚಿನ್ನದ ಕಿರೀಟ, 5 ಲೇಯರ್‌ನ ನೆಕ್ಲೆಸ್, ಪದಕ, ಕಿವಿಯೋಲೆ ಮತ್ತು ಸಾಲಿಗ್ರಾಮ ನೆಕ್ಲೆಸ್ ಇದೆ.
9 ಸೆಟ್‌ಗಳ ಆಭರಣ
ಆಗಮ ಶಾಸ್ತ್ರದ ನಿಯಮಗಳು ಹಾಗೂ ಟಿಟಿಡಿ ಸಂಪ್ರದಾಯಕ್ಕೆ ಅನುಗುಣವಾಗಿ ಚೆನ್ನೈ ಮೂಲದ ಜಿಆರ್‌ಟಿ ಜ್ಯುವೆಲ್ಲರ್ಸ್‌ನಲ್ಲಿ 9 ಸೆಟ್‌ಗಳ ಆಭರಣ ತಯಾರಿಸಲಾಗಿದೆ.
ದೈವಿಕ ಪ್ರೇರಣೆ
ದೈವಿಕ ಪ್ರೇರಣೆಯಿಂದ ದೇಣಿಗೆ ನೀಡಿರುವುದಾಗಿ ಆ ದಂಪತಿ ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ಚಂದ್ರಬಾಬು ನಾಯ್ಡು ತಿಳಿಸಿದರು. ತಿರುಮಲವು ನಂಬಿಕೆ, ಭಕ್ತಿ ಮತ್ತು ಆಧ್ಯಾತ್ಮಿಕ ಪರಿಪೂರ್ಣತೆಯ ಸಂಕೇತ ಎಂದು ಅವರು ಬಣ್ಣಿಸಿದರು.
ಕುಟುಂಬ ಭಾಗಿ
ದಾನ ಸಮರ್ಪಣೆ ವೇಳೆ ಜೈನ್ ದಂಪತಿಯ ಕುಟುಂಬ ಭಾಗವಹಿಸಿತು. ಭಾರಿ ಭದ್ರತೆಯಲ್ಲಿ ಆಭರಣ ದೇಗುಲಕ್ಕೆ ತರಲಾಯಿತು.