13ನೇ ಬಾರಿ ಭದ್ರತಾ ಸಿಬ್ಬಂದಿ ಜತೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ; ಒಂದುಕಾಲದಲ್ಲಿ ನಕ್ಸಲರ ಸ್ವರ್ಗವಾಗಿದ್ದ ಬಸ್ತಾರ್ನಲ್ಲಿ ಅರ್ಥಪೂರ್ಣ ಆಚರಣೆ
Narendra Modi Diwali: 13 ದೀಪಾವಳಿ. 13 ಭದ್ರತಾ ಸಿಬ್ಬಂದಿ ತಂಡ. 1 ಭರವಸೆ- ಪ್ರಧಾನಿ ನರೇಂದ್ರ ಮೋದಿ ಅವರ ದೀಪಾವಳಿ ಆಚರಣೆಯನ್ನು ಹೀಗೆ ಬಣ್ಣಿಸಬಹುದು. ಹೌದು, ಈ ಬಾರಿಯೂ ನರೇಂದ್ರ ಮೋದಿ ದೀಪಾವಳಿಯನ್ನು ಭದ್ರತಾ ಸಿಬ್ಬಂದಿ ಜತೆ ಆಚರಿಸಿಕೊಂಡಿದ್ದಾರೆ. ಆ ಮೂಲಕ 13ನೇ ಬಾರಿಯೂ ತಮ್ಮ ವಿಶಿಷ್ಟ ಆಚರಣೆಯನ್ನು ಮುಂದುವರಿಸಿದ್ದಾರೆ. ಈ ಬಾರಿ ಅವರು ಆಯ್ದುಕೊಂಡಿದ್ದು ಒಂದುಕಾಲದಲ್ಲಿ ನಕ್ಸಲೀಯರ ಸ್ವರ್ಗ ಎನಿಸಿಕೊಂಡಿದ್ದ ಛತ್ತೀಸ್ಗಢದ ಬಸ್ತಾರ್ ಪ್ರದೇಶವನ್ನು. ಇದೀಗ ನಕ್ಸಲ್ಮುಕ್ತವಾಗಿರುವ ಬಸ್ತಾರ್ಗೆ ಭಾನುವಾರ ಆಗಮಿಸಿದ ಮೋದಿ ಅಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ಹಬ್ಬ ಆಚರಿಸಿ, ಅವರಿಗೆ ಸಿಹಿ ತಿನ್ನಿಸಿ ದೀಪಾವಳಿಯನ್ನು ಸ್ಮರಣೀಯಗೊಳಿಸಿದರು.
ನಕ್ಸಲ್ಮುಕ್ತ ಬಸ್ತಾರ್
ಒಂದುಕಾಲದಲ್ಲಿ ಕೆಂಪು ಉಗ್ರರ ಸ್ವರ್ಗ ಎನಿಸಿಕೊಂಡಿದ್ದ ಛತ್ತೀಸ್ಗಢದ ಬಸ್ತಾರ್ ಸದ್ಯ ನಕ್ಸಲ್ಮುಕ್ತವಾಗಿದೆ. ಆ ಮೂಲಕ ಈ ದೀಪಾವಳಿ ವಿಶೇಷ ಎನಿಸಿಕೊಂಡಿದೆ ಎಂದು ಮೋದಿ ಬಣ್ಣಿಸಿದರು. ಬಸ್ತಾರ್ ಜತೆಗೆ ದೇಶದಲ್ಲೇ ನಕ್ಸಲಿಸಂ ನಿರ್ಮೂಲನೆಯಾಗಿದ್ದು, ಭಯಮುಕ್ತರಾಗಿ ಎಲ್ಲರೂ ದೀಪಾವಳಿ ಆಚರಿಸುತ್ತಿದ್ದಾರೆ ಎಂದು ತಿಳಿಸಿದರು.
ಅಭಿವೃದ್ಧಿಯ ಬೆಳಕು
ʼʼಒಂದುಕಾಲದಲ್ಲಿ ನಕ್ಸಲಿಸಂನ ಕರಿನೆರಳಲ್ಲಿ ಬಳಲುತ್ತಿದ್ದ ಬಸ್ತಾರ್ನಲ್ಲಿ ಇದೀಗ ಅಭಿವೃದ್ಧಿಯ ಬೆಳಕು ಮೂಡುತ್ತಿದೆ. ಇದಕ್ಕೆಲ್ಲ ಕಾರಣವಾಗಿದ್ದು ನಿಮ್ಮ ತ್ಯಾಗ ಮತ್ತು ಕಾರ್ಯ ವೈಖರಿʼʼ ಎಂದು ಭದ್ರತಾ ಸಿಬ್ಬಂದಿಗೆ ಮೆಚ್ಚುಗೆ ಸೂಚಿಸಿದರು.
ಭಯಮುಕ್ತ ದೀಪಾವಳಿ
ʼʼದೇಶವು ನಕ್ಸಲ್ಮುಕ್ತವಾಗಲು ಮುಖ್ಯ ಕಾರಣ ನೀವು. ನಿಸ್ಸಂಶಯವಾಗಿ ಇದು ಅತೀ ದೊಡ್ಡ ಸಾಧನೆ. ಯೋಧರು ಮತ್ತು ಮತ್ತು ಭದ್ರತಾ ಪಡೆಯಲ್ಲಿ ನಿಮ್ಮಂತಹ ಧೈರ್ಯವಂತ ಪುರುಷ ಮತ್ತು ಮಹಿಳೆಯರಿದ್ದಾರೆ. ಹೀಗಾಗಿ ನಿಮ್ಮೊಂದಿಗೆ ದೀಪಾವಳಿ ಆಚರಿಸುತ್ತಿದ್ದೇನೆʼʼ ಎಂದು ತಿಳಿಸಿದರು.
ಹಸಿರು ದಟ್ಟ ಕಾಡುಗಳಲ್ಲಿ ಕೆಂಪು ಹೆಜ್ಜೆ
ಛತ್ತೀಸ್ಗಢದ ಬಸ್ತಾರ್ನ ದಟ್ಟ ಕಾಡುಗಳಲ್ಲಿ ಹಲವು ದಶಕಗಳಿಂದ ನಕ್ಸಲರು ಬೀಡು ಬಿಟ್ಟಿದ್ದರು. ಇಲ್ಲಿಗೆ ತೆರಳಲೇ ಜನರು ಭಯ ಬೀಳುತ್ತಿದ್ದರು. ಕೆಂಪು ಉಗ್ರರು ಎಂದು ಕರೆಯಲ್ಪಡುವ ನಕ್ಸಲರು ಭದ್ರತಾ ಸಿಬ್ಬಂದಿ ಅಲ್ಲದೆ ಮುಗ್ಧ ನಾಗರಿಕರನ್ನು ಹತ್ಯೆಗೈಯ್ಯುತ್ತ ಭಯದ ವಾತಾವರಣ ಮೂಡಿಸಿದ್ದರು. ಇದೀಗ ಕೇಂದ್ರ ಸರ್ಕಾರ ಇದಕ್ಕೆಲ್ಲ ಬ್ರೇಕ್ ಹಾಕಿದೆ.
ಹೊಸ ಪದ್ಧತಿಗೆ ನಾಂದಿ ಹಾಡಿದ ಮೋದಿ
2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮೋದಿ ಸೈನಿಕರು ಮತ್ತು ಭದ್ರತಾ ಸಿಬ್ಬಂದಿ ಜತೆ ದೀಪಾವಳಿ ಆಚರಿಸುತ್ತಿದ್ದಾರೆ. ಹಿಂದಿನ ಪ್ರಧಾನಿಗಳೆಲ್ಲ ದೆಹಲಿಯಲ್ಲಿ ದೀಪಾವಳಿ ಆಚರಿಸಿದರೆ ಮೋದಿ ಗಡಿ ಪ್ರದೇಶಗಳಿಗೆ ತೆರಳುತ್ತಾರೆ. ಪ್ರಧಾನಿ ಮೋದಿ ಅವರ 13 ದೀಪಾವಳಿಗಳ ಪೈಕಿ 5 ಜಮ್ಮು ಮತ್ತು ಕಾಶ್ಮೀರ, ಲಡಾಖ್ ಯೋಧರ ಜತೆಗೆ ಇತ್ತು ಎನ್ನುವುದು ವಿಶೇಷ. ಪ್ರಪಂಚದ ಅತೀ ಎತ್ತರ ಯುದ್ಧ ಭೂಮಿ ಎನಿಸಿಕೊಂಡಿರುವ ಸಿಯಾಚಿನ್ ಬೇಸ್ ಕ್ಯಾಂಪ್ನಲ್ಲಿ 2014ರಲ್ಲಿ ಹಬ್ಬ ಆಚರಿಸುವ ಮೂಲಕ ಮೋದಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.