ಬೆಚ್ಚನೆ ಅಪ್ಪುಗೆ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಆತ್ಮೀಯ ಸ್ವಾಗತ ಕೋರಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್
PM Narendra Modi: ಜಿ7 ದೇಶಗಳ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಫ್ರಾನ್ಸ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ಫ್ರಾನ್ಸ್‌ನ ನೈಸ್‌ನಲ್ಲಿ ನಡೆದ ಭಾರತ್ ಇನ್ನೋವೇಟ್ಸ್ ಶೃಂಗಸಭೆಯನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಿದಾಗ ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಆತ್ಮೀಯ ಅಪ್ಪುಗೆಯೊಂದಿಗೆ ಬರಮಾಡಿಕೊಂಡರು. ಭಾರತ್ ಇನ್ನೋವೇಟ್ಸ್ 2026- ಭಾರತ, ಫ್ರಾನ್ಸ್ ಮತ್ತು ಇತರ ದೇಶಗಳಿಂದ ಉನ್ನತ ಮಟ್ಟದ ನಾವೀನ್ಯತೆ ಸ್ಟಾರ್ಟ್‌ಅಪ್‌ಗಳು ಮತ್ತು ವೆಂಚರ್ ಕ್ಯಾಪಿಟಲ್ ನಿಧಿಗಳನ್ನು ಒಂದುಗೂಡಿಸುವ ಸಮಾವೇಶ.
ಭಾರತದೊಂದಿಗಿನ ಸಂಬಂಧ ಶ್ಲಾಘಿಸಿದ ಫ್ರೆಂಚ್ ಅಧ್ಯಕ್ಷ
ನೈಸ್‌ನಲ್ಲಿ ಆಯೋಜಿಸಿದ ಭಾರತ್ ಇನ್ನೋವೇಟ್ಸ್ 2026 ಸಮಾವೇಶದಲ್ಲಿ ಪಾಲ್ಗೊಂಡ ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಭಾರತದೊಂದಿಗಿನ ಸಂಬಂಧವನ್ನು ಶ್ಲಾಘಿಸಿದರು. ಭಾರತವು ಸಂಶೋಧನೆಗಳ ದೇಶ. 2 ದೇಶಗಳು ಪ್ರಮುಖ ಕ್ಷೇತ್ರಗಳಾದ ಎಐ ಮತ್ತು ಹವಾಮಾನ ಬದಲಾವಣೆಯ ವಿಚಾರದಲ್ಲಿ ಜತೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದರು. ʼʼಮೇಕ್ ಇಂಡಿಯಾ ಯೋಜನೆಯನ್ನು ನಾವು ಗೌರವಿಸುತ್ತೇವೆ. ಫ್ರಾನ್ಸ್ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅದರ ಭಾಗವಾಗಲಿದೆ" ಎಂದು ಮ್ಯಾಕ್ರನ್ ಹೇಳಿದ್ದಾರೆ.
ಸಹಕಾರ ವಿಸ್ತರಿಸಲು ಅವಕಾಶ
"ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ಕ್ಷೇತ್ರ ಸೇರಿ ನಾಗರಿಕ ಪರಮಾಣು ಇಂಧನ ವಲಯದಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸಲು ಅವಕಾಶವಿದೆ" ಎಂದು ಮ್ಯಾಕ್ರನ್ ತಿಳಿಸಿದ್ದಾರೆ. ಭಾರತ್ ಇನ್ನೋವೇಟ್ಸ್-2026 ಭಾರತ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಜಾಗತಿಕ ವೇದಿಕೆಯಲ್ಲಿ ದೇಶದ ಸಂಶೋಧನೆಗೆ ಜಾಗ ಒದಗಿಸಲು ಅವಕಾಶ ಕಲ್ಪಿಸುತ್ತದೆ.
ಸುಸ್ಥಿರ ಪರಿಹಾರ
ಭಾರತವು ತನ್ನ ನಾಗರಿಕರಿಗೆ ಮಾತ್ರವಲ್ಲದೆ ಜಾಗತಿಕ ಸಮುದಾಯಕ್ಕೂ ಪ್ರಯೋಜನಕಾರಿಯಾದ ಸುಸ್ಥಿರ ಪರಿಹಾರಗಳನ್ನು ಸೃಷ್ಟಿಸುವತ್ತ ಗಮನಹರಿಸುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ. "ಭಾರತವು ವೇಗದಲ್ಲಿ ನಾವೀನ್ಯತೆಯನ್ನು ಕಂಡುಕೊಳ್ಳುತ್ತದೆ. ಸುಸ್ಥಿರ ಭವಿಷ್ಯಕ್ಕಾಗಿ ಭಾರತವು ಕಾರ್ಯ ನಿರ್ವಹಿಸುತ್ತಿದೆ" ಎಂದು ಮೋದಿ ವಿವರಿಸಿದ್ದಾರೆ.
ನಾವೀನ್ಯತೆ ಭಾರತದ ಡಿಎನ್‌ಎಯಲ್ಲಿದೆ
ತಾಂತ್ರಿಕ ಅಭಿವೃದ್ಧಿಯ ಕಡೆಗೆ ಭಾರತದ ದೃಷ್ಟಿಕೋನವನ್ನು ಒತ್ತಿ ಹೇಳಿದ ಪ್ರಧಾನಿ, ದೇಶದ ಆದ್ಯತೆ ಮಾನವೀಯತೆಗಾಗಿ ತಂತ್ರಜ್ಞಾನ ಮತ್ತು ಮಾನವ ಕೇಂದ್ರಿತ ನಾವೀನ್ಯತೆ ಎಂದು ಪ್ರತಿಪಾದಿಸಿದ್ದಾರೆ. ನಾವೀನ್ಯತೆ ಭಾರತದ ಸಂಸ್ಕೃತಿ ಮತ್ತು ಆಲೋಚನಾ ವಿಧಾನದಲ್ಲಿ ಆಳವಾಗಿ ಹುದುಗಿದೆ ಎಂದು ಅವರು ಹೇಳಿದ್ದಾರೆ. "ನಾವೀನ್ಯತೆ ಭಾರತದ ಡಿಎನ್‌ಎಯಲ್ಲಿದೆ" ಎಂದಿದ್ದಾರೆ.
ಭಾರತೀಯರತ್ತ ಕೈಬೀಸಿದ ಮೋದಿ
ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ ಭಾರತೀಯ ಸಮುದಾಯವರ ಜತೆ ಮೋದಿ ಕೆಲ ಹೊತ್ತು ಕಳೆದರು. ಅವರತ್ತ ಕೈ ಬೀಸಿ ಒಂದಷ್ಟು ಹೊತ್ತು ಹರಡೆ ಹೊಡೆದರು. ಇದಾದ ಬಳಿಕ ಮೋದಿ ಸ್ಲೊವೇಕಿಯಾಕ್ಕೆ ತೆರಳಲಿದ್ದಾರೆ. 1993ರಲ್ಲಿ ಸ್ಲೊವೇಕಿಯಾ ಸ್ವಾತಂತ್ರಗೊಂಡ ಬಳಿಕ ಅಲ್ಲಿಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಮೋದಿ.