Narendra Modi Udupi Visit: ಉಡುಪಿಯಲ್ಲಿ ʼಲಕ್ಷ ಕಂಠ ಗೀತಾ ಪಾರಾಯಣʼಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ; ಕಾರ್ಯಕ್ರಮದ ಫೋಟೊಗಳು ಇಲ್ಲಿವೆ
Udupi Laksha Kantha Geetha Parayana: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಆಯೋಜಿಸಿದ್ದ ʼಲಕ್ಷ ಕಂಠ ಗೀತಾ ಪಾರಾಯಣʼದಲ್ಲಿ ಭಾಗಿಯಾಗಲು ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದರು. ಉಡುಪಿ ರಥಬೀದಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಪ್ರಧಾನಿಗೆ, ಬಿಜೆಪಿ ಕಾರ್ಯಕರ್ತರು ಹೂಮಳೆ, ಜೈಕಾರಗಳಿಂದ ಅದ್ಧೂರಿಯಾಗಿ ಸ್ವಾಗತಿಸಿದರು.
ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಆಯೋಜಿಸಿದ್ದ ʼಲಕ್ಷ ಕಂಠ ಗೀತಾ ಪಾರಾಯಣʼದಲ್ಲಿ ಭಾಗಿಯಾಗಲು ಮೊದಲ ಬಾರಿಗೆ ಕೃಷ್ಣನೂರು ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಆಗಮಿಸಿದ್ದರು.
ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಆಗಮಿಸಿದ ಮೋದಿ ಅವರು, ಬಳಿಕ ಕಾರಿನಲ್ಲಿ ಉಡುಪಿ ರಥಬೀದಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಪ್ರಧಾನಿಗೆ ಬಿಜೆಪಿ ಕಾರ್ಯಕರ್ತರು ಹೂಮಳೆ, ಜೈಕಾರಗಳಿಂದ ಅದ್ಧೂರಿಯಾಗಿ ಸ್ವಾಗತಿಸಿದರು.
ರೋಡ್‌ಶೋ ಬಳಿಕ ಮಠದೊಳಗಿನ ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡು ಶ್ರೀಕೃಷ್ಣನ ದರ್ಶನ ಪಡೆದರು. ಕೃಷ್ಣಮಠದಲ್ಲಿ ಸುವರ್ಣ ಕನಕನ ಕಿಂಡಿ ಉದ್ಘಾಟಿಸಿ, ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿಗಳು, ಪುತ್ತಿಗೆ ಮಠದಲ್ಲಿ ಸುವರ್ಣ ತೀರ್ಥ ಮಂಟಪ ಲೋಕಾರ್ಪಣೆಗೊಳಿಸಿದರು.
ಶ್ರೀಕೃಷ್ಣನ ಎದುರು ಪುತ್ತಿಗೆ ಶ್ರೀಗಳಿಂದ ಗೀತಾ ಲೇಖನ ಯಜ್ಞ ದೀಕ್ಷೆಯನ್ನು ಮೋದಿ ಸ್ವೀಕರಿಸಿದರು. ನಂತರ, ಚಂದ್ರಶಾಲೆಯಲ್ಲಿ ಪೇಜಾವರ ಶ್ರೀಗಳು ಮತ್ತು ಅಷ್ಟ ಮಠಾಧೀಶರನ್ನು ಭೇಟಿ ಮಾಡಿ, ಪ್ರಸಾದ ಸ್ವೀಕರಿಸಿದರು.
ಇದೇ ವೇಳೆ ಗೀತಾ ಮಂದಿರದಲ್ಲಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆ ಅನಾವರಣ ಮಾಡಿದ ಮೋದಿ, ಧ್ಯಾನ ಮಂದಿರದ ಗೋಡೆಯ ಶಿಲೆಯಲ್ಲಿ ಭಗವದ್ಗೀತೆ ಬರಹ ಹಾಗೂ ಧ್ಯಾನ ಮಂದಿರವನ್ನು ವೀಕ್ಷಣೆ ಮಾಡಿದರು. ಅಲ್ಲದೆ ಶ್ರೀ ಕೃಷ್ಣನ ಪಾರಂಪರಿಕ ಚಿನ್ನಾಭರಣಗಳು, ಚಿನ್ನದ ಪಲ್ಲಕ್ಕಿಗಳನ್ನು ವೀಕ್ಷಿಸಿ, ಸರ್ವಜ್ಞ ಪೀಠದ ದರ್ಶನ ಪಡೆದರು.
ನಂತರ ಪರ್ಯಾಯ ಮದುಪೇಂದ್ರ ತೀರ್ಥ ಸಂಸ್ಥಾನ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಆಯೋಜಿಸಿದ್ದ ‘ಲಕ್ಷ ಕಂಠ ಗೀತಾ ಪಾರಾಯಣ’ದಲ್ಲಿ ಪಾಲ್ಗೊಂಡು ಭಗವದ್ಗೀತೆಯ 15ನೇ ಅಧ್ಯಾಯವನ್ನು ಪಠಿಸಿದರು.
ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಒಂದು ಕೋಟಿಗೂ ಅಧಿಕ ಭಕ್ತರಿಂದ ಭಗವದ್ಗೀತೆ ಲೇಖನ ಅಭಿಯಾನವನ್ನು ನಡೆಸಿದ್ದು, ಅದರ ಕೃಷ್ಣಾರ್ಪಣೆಯಂಗವಾಗಿ ಶುಕ್ರವಾರ ಒಂದು ಲಕ್ಷಕ್ಕೂ ಅಧಿಕ ಮಂದಿ ಭಗವದ್ಗೀತೆಯನ್ನು ಪಠಿಸಿದರು.
ವೇದಿಕಯಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಅನುಗ್ರಹಪೂರ್ವಕವಾಗಿ ʼಭಾರತ ಭಾಗ್ಯ ವಿಧಾತʼ ಎಂದು ಬಿರುದನ್ನು ಪ್ರಧಾನಿ ಮೋದಿ ಅವರಿಗೆ ಶ್ರೀಗಳು ನೀಡಿದರು. ಮೋದಿಯವರ ಕೈಗೆ ಕಂಕಣವನ್ನು ಕಟ್ಟಿ, ಶ್ರೀಕೃಷ್ಣ ದೇವರ ಚಿತ್ರವನ್ನು ನೀಡಿ ರಾಷ್ಟ್ರ ರಕ್ಷಣೆಯ ದೀಕ್ಷೆಯನ್ನು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ನೀಡಿದರು. ವಿಶಿಷ್ಟವಾಗಿ ಅಲಂಕೃತವಾದ ನವಿಲುಗರಿ ಇರುವ ಕಿರೀಟವನ್ನು ಮೋದಿಯವರಿಗೆ ಶ್ರೀಪಾದರು ಧರಿಸಿ, ಬಿರುದನ್ನು ನೀಡಿದರು.
ನರೇಂದ್ರ ಎಂದರೆ ಅರ್ಜುನ ಎಂದರ್ಥ. ಶ್ರೀ ಕೃಷ್ಣನ ಬಳಿ ಪ್ರಧಾನಿ ಮೋದಿ ಅರ್ಜುನನಾಗಿ ಬಂದಿದ್ದಾರೆ. ಅಯೋಧ್ಯೆಯಲ್ಲಿ ಶ್ರೀ ರಾಮನನ್ನು ಸ್ಥಾಪಿಸಿ ಶ್ರೀ ಕೃಷ್ಣನ ಕ್ಷೇತ್ರಕ್ಕೆ ಮೋದಿ ಆಗಮಿಸಿದ್ದಾರೆ. 14 ವರ್ಷದ ಮೇಲೆ ಶ್ರೀರಾಮ ಅಯೋಧ್ಯೆಗೆ ಮರಳಿದ್ದ. ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ 14 ವರ್ಷದ ಹಿಂದೆ ನರೇಂದ್ರ ಮೋದಿಯವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಂದಿದ್ದರು. ಆಗಲೂ ನಮ್ಮ ಪರ್ಯಾಯ ನಡೆಯುತ್ತಿತ್ತು. ನಮ್ಮದು ಇಂದ್ರ ಪರ್ಯಾಯ, ನಾನು ಸುಗುಣೇಂದ್ರ ಅವರು ನರೇಂದ್ರ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಈ ವೇಳೆ ಪ್ರಧಾನಿ ಮೋದಿ ಅವರು ಮಾತನಾಡಿ, ಉಡುಪಿಯಲ್ಲಿ ಶ್ರೀಕೃಷ್ಣನ ದಿವ್ಯ ದರ್ಶನದಿಂದ ಸಿಗುವ ಸಂತೃಪ್ತಿ, ಶ್ರೀಮದ್ಭಗವದ್ಗೀತೆಯ ಶ್ಲೋಕ ಪಠಣೆಯ ಆಧ್ಯಾತ್ಮಿಕ ಅನುಭವ, ಹಲವಾರು ಪೂಜ್ಯ ಸಂತರು ಮತ್ತು ಗುರುಗಳ ಉಪಸ್ಥಿತಿ ನನಗೆ ಒಂದು ದೊಡ್ಡ ಸೌಭಾಗ್ಯ ದೊರೆತಂತಾಗಿದ್ದು, ಇಂದು ಅಸಂಖ್ಯಾತ ಸದ್ಗುಣಗಳನ್ನು ಪಡೆದಂತಾಗಿದೆ. ಇದನ್ನು ಪದಗಳಲ್ಲಿ ವರ್ಣಿಸಲಸಾಧ್ಯ. ನನ್ನೊಳಗಿನ ಈ ಭಾವನೆಗಳಿಂದ ನಾನು ವಿನಮ್ರನಾಗಿದ್ದೇನೆ ಮತ್ತು ನನಗೆ ನೀಡಿದ ಆಶೀರ್ವಾದಗಳಿಗೆ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದರು.
ಪವಿತ್ರ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆಯುವಾಗ ಕನಕದಾಸರ ಅನುಭೂತಿಯ ಭಾಸವಾಗುತ್ತದೆ. ಕೇವಲ ಮೂರು ದಿನಗಳ ಹಿಂದೆ ನಾನು ಗೀತೆಯ ನಾಡು ಕುರುಕ್ಷೇತ್ರದಲ್ಲಿದ್ದೆ. ಇಂದು ಶ್ರೀಕೃಷ್ಣ ಪರಮಾತ್ಮನಿಂದ ಆಶೀರ್ವದಿಸಲ್ಪಟ್ಟ ಮತ್ತು ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಪ್ರಸಿದ್ಧವಾದ ಈ ಭೂಮಿಗೆ ಭೇಟಿ ನೀಡಿ ಕೃತಾರ್ಥನಾಗಿದ್ದೇನೆ.
ಈ ಶುಭ ಸಂದರ್ಭದಲ್ಲಿ ಲಕ್ಷಾಂತರ ಜನರು ಏಕಕಾಲದಲ್ಲಿ ಭಗವದ್ಗೀತೆ ಶ್ಲೋಕಗಳನ್ನು ಪಠಿಸುವಾಗ ಸಂಪೂರ್ಣ ವಿಶ್ವದ ಜನರು ಭಾರತದ ಸಹಸ್ರ ವರ್ಷಗಳ ದಿವ್ಯತೆಯ ಸಾಕ್ಷಾತ್ ದರ್ಶನ ಪಡೆದಂತಾಗಿದೆ.
ಉಡುಪಿಯು ಜನಸಂಘ ಮತ್ತು ಬಿಜೆಪಿಯ ಉತ್ತಮ ಆಡಳಿತದ ಕರ್ಮಭೂಮಿಯಾಗಿದೆ. 1968 ರಲ್ಲಿ ಉಡುಪಿಯ ಜನರು ನಮ್ಮ ಜನಸಂಘದ ನಾಯಕರಾದ ವಿ. ಎಸ್. ಆಚಾರ್ಯ ಅವರನ್ನು ಇಲ್ಲಿನ ಪುರಸಭೆಗೆ ಆಯ್ಕೆ ಮಾಡಿದರು. ಆ ಮುಖೇನ ಉಡುಪಿ ಹೊಸ ಆಡಳಿತ ಮಾದರಿಗೆ ಅಡಿಪಾಯ ಹಾಕಿತು. ಇಂದು ನಡೆಯುತ್ತಿರುವ ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಕೂಡ ಐದು ದಶಕಗಳ ಹಿಂದೆಯೇ ಉಡುಪಿಯಲ್ಲಿ ಆರಂಭಗೊಂಡಿತ್ತು. ಅಲ್ಲದೇ 1970 ರ ದಶಕದಲ್ಲೇ ಉಡುಪಿಯು ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ಹೊಸ ಮಾದರಿಯನ್ನು ಪ್ರಸ್ತುತಪಡಿಸಿತ್ತು.
ಗೀತೆಯ ಪವಿತ್ರ ಶ್ಲೋಕಗಳ ಪಠಣವು ಶತಮಾನಗಳಿಂದಲೂ ಮು೦ದುವರಿದುಕೊಂಡು ಬಂದಿದೆ. ಆದರೆ ಒಂದು ಲಕ್ಷ ಕಂಠಗಳು ಈ ಶ್ಲೋಕಗಳನ್ನು ಒಟ್ಟಿಗೆ ಒಂದೇ ಸಮಯದಲ್ಲಿ ಪಠಿಸಿದಾಗ ಒಂದು ವಿಶಿಷ್ಟ ಶಕ್ತಿ ಉದ್ಭವಿಸುತ್ತದೆ. ಇದು ಮನಸ್ಸನ್ನು ಬಲಪಡಿಸುತ್ತದೆ ಮತ್ತು ಆಂತರ್ಯವನ್ನು ಸ್ಥಿರಗೊಳಿಸುತ್ತದೆ. ಇದು ಆಧ್ಯಾತ್ಮಿಕತೆಯನ್ನು ಪೋಷಿಸುವ ಮತ್ತು ಸಾಮಾಜಿಕ ಏಕತೆಯನ್ನು ಬಲಪಡಿಸುವ ಶಕ್ತಿಯಾಗಿದೆ. ಇಂತಹ ಅದ್ಭುತ ಕಾರ್ಯಕ್ರಮದ ಆಯೋಜನೆಗಾಗಿ ನಾನು ಶ್ರೀಮಠವನ್ನು ಶ್ಲಾಘಿಸುತ್ತೇನೆ.
ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ 9 ಸಂಕಲ್ಪ ಮಾಡುವಂತೆ ಮನವಿ ಮಾಡಿದರು. ಆ ಸಂಕಲ್ಪಗಳೆಂದರೆ ಜಲ ಸಂರಕ್ಷಣೆ, ಗಿಡಗಳನ್ನು ನೆಡುವುದು, ಒಬ್ಬ ಬಡವನ ಜೀವನವನ್ನು ಸುಧಾರಿಸಲು ಶ್ರಮಿಸುವುದು, ಸ್ವದೇಶಿಯನ್ನು ಅಳವಡಿಸಿಕೊಳ್ಳುವುದು, ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳವುದು, ಯೋಗವನ್ನು ಜೀವನದ ಭಾಗವಾಗಿಸುವುದು, ಕನಿಷ್ಠ 25 ತಾಣಗಳಿಗೆ ಭೇಟಿ ನೀಡುವುದು, ಹಸ್ತಪ್ರತಿಗಳನ್ನು ಸಂರಕ್ಷಿಸುವುದು ಆಗಿದೆ.