Kerala Assembly Polls 2026: ಗಡಿನಾಡು ಕಾಸರಗೋಡಿನಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕ ತೇಜಸ್ವಿ ಸೂರ್ಯ ಅಬ್ಬರ; ಕನ್ನಡತಿ, ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಪರ ಮತ ಯಾಚನೆ
ಕೇರಳಂನಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಘೋಷಣೆಯಾಗಲಿದೆ. ಹೀಗಾಗಿ ರಾಜ್ಯಾದ್ಯಂತ ಪ್ರಚಾರದ ಕಾವು ಜೋರಾಗಿದೆ. ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್ ಸತತ 3ನೇ ಬಾರಿಗೆ ಆಡಳಿತಕ್ಕೆ ಬರುವ ಕನಸು ಕಾಣುತ್ತಿದ್ದರೆ, ಕಾಂಗ್ರೆಸ್ ಮುಂದಾಳತ್ವದ ಯುಡಿಎಫ್ ಶತಾಯ ಗತಾಯ ಸರ್ಕಾರ ರಚಿಸಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಈ ಮಧ್ಯೆ ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದಲ್ಲಿ ಮತ್ತೊಮ್ಮೆ ಮತದಾರರ ಮೇಲೆ ಪ್ರಭಾವ ಬೀರಲು ಮುಂದಾಗಿದೆ. ಅದರಲ್ಲಿಯೂ ಗಡಿನಾಡು ಕಾಸರಗೋಡಿನಲ್ಲಿ ಎನ್‌ಡಿಎ ಪ್ರಚಾರ ಜೋರಾಗಿದೆ. ಸಂಸದ, ಯುವ ನಾಯಕ ಸಂಸದ ತೇಜಸ್ವಿ ಸೂರ್ಯ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಅಖಾಡಕ್ಕಿಳಿದಿದ್ದಾರೆ. ಕಾಸರಗೋಡು ಎನ್‌ಡಿಎ ಅಭ್ಯರ್ಥಿ, ಕನ್ನಡತಿ ಎಂ.ಎಲ್. ಅಶ್ವಿನಿ ಪರ ಕ್ಷೇತ್ರದಾದ್ಯಂತ ಓಡಾಡಿ ಮತ ಯಾಚಿಸಿದರು.
ಎಡನೀರು ಮಠಕ್ಕೆ ಭೇಟಿ
ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಪರ ಪ್ರಚಾರಕ್ಕೆ ಗಡಿನಾಡು ಕಾಸರಗೋಡಿಗೆ ಆಗಮಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬದಿಯಡ್ಕ ಸಮೀಪದ ಐತಿಹಾಸಿಕ ಎಡನೀರು ಮಠಕ್ಕೆ ಭೇಟಿ ನೀಡಿ ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಬಳಿಕ ಬಿಜೆಪಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.
400 ವರ್ಷಗಳ ಇತಿಹಾಸ
ʼʼಸುಮಾರು 400 ವರ್ಷಗಳ ಇತಹಾಸ ಹೊಂದಿರುವ ಎಡನೀರು ಮಠ ಹಲವು ವರ್ಷಗಳಿಂದ ಕನ್ನಡಿಗರಿಗಾಗಿ, ಹಿಂದೂಗಳಿಗಾಗಿ ಹೋರಾಡುತ್ತಲೇ ಬಂದಿದೆʼʼ ಎಂದು ತೇಜಸ್ವಿ ಸೂರ್ಯ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಸುಮಾರು 60 ವರ್ಷಗಳ ಹಿಂದೆಯೇ ಶ್ರೀ ಈಶ್ವರಾನಂದ ಭಾರತೀ ಸ್ವಾಮೀಜಿ ಕನ್ನಡ ಪ್ರೌಢ ಶಾಲೆಯನ್ನು ಆರಂಭಿಸಿ ಆ ಮೂಲಕ ಕನ್ನಡದ ಅಸ್ಮಿತೆಯನ್ನು ಉಳಿಸುವಂತಹ ಕಾರ‍್ಯವನ್ನು ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಮಾಡಿದ್ದರು. ಮಾತ್ರವಲ್ಲ ಕೇಶವಾನಂದ ಶ್ರೀಗಳ ಅವಧಿಯಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಪ್ರಾರಂಭವಾಗಿತ್ತು. ಪ್ರಸ್ತುತ ಶ್ರೀ ಎಡನೀರು ಮಠಾಧೀಶರಾದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕೂಡ ಕನ್ನಡ ನಾಡು-ನುಡಿ ಸಂಸ್ಕೃತಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದು, ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಭಾರಿ ಮಳೆಯಲ್ಲೂ ಜನಸ್ತೋಮ
ತೇಜಸ್ವಿ ಸೂರ್ಯ ಭಾಗವಹಿಸಿದ್ದ ರ‍್ಯಾಲಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಕ್ಷೇತ್ರದಾದ್ಯಂತ ಅವರು ಮಿಂಚಿನ ಸಂಚಾರ ನಡೆಸಿದ್ದು, ಎಲ್ಲೆಡೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದರು. ವಿಶೇಷ ಎಂದರೆ ಕೆಲವೆಡೆ ಅಕಾಲಿಕವಾಗಿ ಮಳೆ ಸುರಿದರೂ ಹಿಂಜರಿಯದೆ ತೇಜಸ್ವಿ ಸೂರ್ಯ, ಅಶ್ವಿನಿ ಸೇರಿದಂತೆ ಬಿಜೆಪಿ ನಾಯಕರು ಮೆರವಣಿಗೆ ಮೂಲಕ ಸಾಗಿ ಗಮನ ಸೆಳೆದರು.
ಎಲ್‌ಡಿಎಫ್-ಯುಡಿಎಫ್ ಒಂದೇ ನಾಣ್ಯದ 2 ಮುಖಗಳು
ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ ಸೂರ್ಯ ಎಲ್‌ಡಿಎಫ್-ಯುಡಿಎಫ್ ಒಂದೇ ನಾಣ್ಯದ 2 ಮುಖಗಳು ಎಂದು ಕಿಡಿಕಾರಿದರು. ʼʼಕೇರಳದ ಜನತೆ ಎಲ್‌ಡಿಎಫ್-ಯುಡಿಎಫ್ ಆಡಳಿತದಿಂದ ಬೇಸತ್ತಿದ್ದು ಬದಲಾವಣೆ ಬಯಸಿದ್ದಾರೆ ಎನ್ನುವುದಕ್ಕೆ ನಮಗೆ ದೊರೆತ ಅಭೂತಪೂರ್ವ ಬೆಂಬಲವೇ ಸಾಕ್ಷಿ. ಸುರಿಯುವ ಮಳೆಯನ್ನೂ ಲೆಕ್ಕಿಸದೇ ಕಾಸರಗೋಡಿನ ಜನತೆ ನಮ್ಮೊಂದಿಗೆ ಹೆಜ್ಜೆ ಹಾಕಿದ್ದಾರೆ. ವಿಕಸಿತ ಕೇರಳಂಗಾಗಿ ಮತದಾರರು ಎನ್‌ಡಿಎಗೆ ವೋಟು ಹಾಕಬೇಕುʼʼ ಎಂದು ಕರೆ ನೀಡಿದರು.
ಅಶ್ವಿನಿ ಮೂಲತಃ ಬೆಂಗಳೂರಿನವರು
ಕಾಸರಗೋಡಿನ ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಮೂಲತಃ ಬೆಂಗಳೂರಿನವರು. ಹೌದು, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅಶ್ವಿನಿ ಮದುವೆಯಾದ ಬಳಿಕ ಕಾಸರಗೋಡಿನ ಸೊಸೆಯಾದರು. ಕನ್ನಡ, ತುಳು ಮತ್ತು ಮಲಯಾಳಂ ಭಾಷೆಯಲ್ಲಿ ಹಿಡಿತ ಹೊಂದಿರುವುದು ಅಶ್ವಿನಿ ಅವರ ದೊಡ್ಡ ಪ್ಲಸ್ ಪಾಯಿಂಟ್. ಭಾಷಾ ವೈವಿಧ್ಯತೆ ಹೊಂದಿರುವ ಕಾಸರಗೋಡಿನಲ್ಲಿ ಅವರು ಮತದಾರರ ಭಾಷೆಯಲ್ಲೇ ಮತಯಾಚಿಸುತ್ತಿದ್ದು, ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಅವರು ಎನ್‌ಡಿಎ ಪರವಾಗಿ ಕಣಕ್ಕಿಳಿದಿದ್ದರು.