ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Padma Awards 2026: ಡಾ. ಪ್ರಭಾಕರ್ ಕೋರೆ ಸೇರಿ ರಾಜ್ಯದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ (ಜೂನ್‌ 23) ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಐವರು ಸೇರಿ ಒಟ್ಟು 65 ಮಂದಿಗೆ 2ನೇ ಹಂತದ 2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಮತ್ತಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಬಾರಿ ಒಟ್ಟು 131 ಮಂದಿಗೆ ಪದ್ಮ ಪ್ರಶಸ್ತಿ ಘೋಷಿಸಲಾಗಿತ್ತು. ಈ ಪೈಕಿ ಮೊದಲ ಹಂತದಲ್ಲಿ ಮೇ 25ರಂದು 66 ಸಾಧಕರಿಗೆ ಪ್ರಶಸ್ತಿ ವಿತರಿಸಲಾಗಿತ್ತು.

ರಾಷ್ಟ್ರಪತಿ ದ್ರೌಪದಿ ಮುರ್ಮು (ಸಂಗ್ರಹ ಚಿತ್ರ)
1/6

ಒಟ್ಟು 8 ಕರುನಾಡ ಸಾಧಕರಿಗೆ ಪ್ರಶಸ್ತಿ

ಈ ಬಾರಿ ಒಟ್ಟು 8 ಮಂದಿ ಕರುನಾಡ ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಿಸಲಾಗಿತ್ತು (1 ಪದ್ಮಭೂಷಣ ಮತ್ತು 7 ಪದ್ಮಶ್ರೀ). ಶತಾವಧಾನಿ ಡಾ. ಆರ್. ಗಣೇಶ್ – ಸಾಹಿತ್ಯ ಮತ್ತು ಸಂಸ್ಕೃತಿ (ಪದ್ಮಭೂಷಣ), ಅಂಕೇಗೌಡ – ಸಮಾಜಸೇವೆ, ಡಾ. ಸುರೇಶ್ ಹನಗವಾಡಿ – ವೈದ್ಯಕೀಯ, ಡಾ. ಎಸ್.ಜಿ. ಸುಶೀಲಮ್ಮ – ಸಮಾಜಸೇವೆ, ಪ್ರಭಾಕರ ಕೋರೆ – ಶಿಕ್ಷಣ, ಶುಭಾ ಅಯ್ಯಂಗಾರ್ – ವಿಜ್ಞಾನ, ಶಶಿ ಶೇಖರ ವೆಂಪಟಿ – ಶಿಕ್ಷಣ, ಟಿ.ಟಿ. ಜಗನ್ನಾಥನ್ – ಕೈಗಾರಿಕೆ (ಪದ್ಮಶ್ರೀ). ಈ ಪೈಕಿ ಡಾ. ಆರ್. ಗಣೇಶ್, ಅಂಕೇಗೌಡ ಎಂ., ಡಾ. ಎಸ್. ಜಿ. ಸುಶೀಲಮ್ಮ ಅವರಿಗೆ ಮೇ 25ರಂದು ಮೊದಲ ಹಂತದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

2/6

ಡಾ. ಪ್ರಭಾಕರ್ ಕೋರೆ

ಖ್ಯಾತ ಶಿಕ್ಷಣ ತಜ್ಞ ಮತ್ತು ಗ್ರಾಮೀಣಾಭಿವೃದ್ಧಿಯ ಹರಿಕಾರ ಡಾ. ಪ್ರಭಾಕರ್ ಬಸವಪ್ರಭು ಕೋರೆ 'ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ'ಯ ಅಧ್ಯಕ್ಷರಾಗಿದ್ದಾರೆ. ಇವರು 5,500 ಹಾಸಿಗೆಗಳ ಆಸ್ಪತ್ರೆ ಸೇರಿ ಶಿಕ್ಷಣ, ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನಾ ಕ್ಷೇತ್ರಗಳಲ್ಲಿ ಬೃಹತ್ ಸಂಖ್ಯೆಯ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಡಾ. ಪ್ರಭಾಕರ ಕೋರೆ ಶಿಕ್ಷಣವನ್ನು ಸಾಮಾಜಿಕ ಪರಿವರ್ತನೆಯ ಶಕ್ತಿಶಾಲಿ ಸಾಧನವೆಂದು ನಂಬಿ, ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಕೆಎಲ್‌ಇ ಸಂಸ್ಥೆಯ ಮೂಲಕ ವೈದ್ಯಕೀಯ, ತಾಂತ್ರಿಕ, ವೈದ್ಯಕೀಯ ಸಂಶೋಧನೆ, ಇಂಜಿನಿಯರಿಂಗ್ ಹಾಗೂ ಸಾಮಾನ್ಯ ಶಿಕ್ಷಣ ಕ್ಷೇತ್ರಗಳಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡಿದ್ದಾರೆ. ಶಿಕ್ಷಣದ ಜತೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉತ್ತೇಜನಕ್ಕೂ ವಿಶೇಷ ಕೊಡುಗೆ ನೀಡಿದ್ದಾರೆ.

3/6

ಡಾ. ಶುಭಾ ವೆಂಕಟೇಶ ಅಯ್ಯಂಗಾರ್

ವಿಮಾನಯಾನ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಖ್ಯಾತ ವೈಮಾನಿಕ ವಿಜ್ಞಾನಿ ಡಾ. ಶುಭಾ ವೆಂಕಟೇಶ ಅಯ್ಯಂಗಾರ್ 'ದೃಷ್ಟಿ-ಗೋಚರತೆ ಮಾಪನ ವ್ಯವಸ್ಥೆ' ಮತ್ತು 'ಏವಿಯೇಷನ್ ವೆದರ್ ಅಬ್ಸರ್ವೇಶನ್ ಸಿಸ್ಟಮ್'ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೆ ಭಾರತದ ಕ್ಷಿಪಣಿ ಕಾರ್ಯಕ್ರಮಗಳು ಹಾಗೂ ರಾಮ್‌ಜೆಟ್-ಸ್ಕ್ರ್ಯಾಮ್‌ಜೆಟ್ ಎಂಜಿನ್ ಯೋಜನೆಗಳಿಗೆ ಗಣನೀಯ ನೀಡಿದ್ದಾರೆ. ಸುಮಾರು 40 ವರ್ಷಗಳ ಕಾಲ ಎನ್‍ಎಎಲ್‍ನಲ್ಲಿ ಸಂಶೋಧಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

4/6

ಡಾ. ಸುರೇಶ್ ಹನಗವಾಡಿ

ದಾವಣಗೆರೆಯ ಡಾ. ಸುರೇಶ್ ಹನಗವಾಡಿ ಕಾಯಿಲೆಗೆ ಬಲಿಯಾದ ಮಾವನಿಗೆ ಕೊಟ್ಟ ಮಾತಿನಂತೆ ಡಾಕ್ಟರ್‌ ಆಗಿ ಹಿಮೋಫೀಲಿಯಾ ಸೊಸೈಟಿ ಕಟ್ಟಿದ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಸ್ವತಃ ಹೆಮೋಫಿಲಿಯಾದಿಂದ ಬಳಲುತ್ತಿರುವ ಅವರು, ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಹೆಮೋಫಿಲಿಯಾದಿಂದ ಬಾಧಿತರಾದ ಸಾವಿರಾರು ವ್ಯಕ್ತಿಗಳ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ದಾವಣಗೆರೆ ನಗರದಲ್ಲಿ 1990ರಲ್ಲಿ ಜನ್ಮ ತಳೆದ ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ಮೂರು ದಶಕಗಳಿಂದ ಹಿಮೋಫೀಲಿಯಾ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದೆ.

5/6

ಶಶಿಶೇಖರ್ ವೆಂಪಟಿ

ಪದ್ಮಶ್ರೀ ಪುರಸ್ಕೃತರಾದ ಶಶಿಶೇಖರ್ ವೆಂಪಟಿ, 'ಡೀಪ್ ಟೆಕ್ ಫಾರ್ ಭಾರತ್ ಫೌಂಡೇಶನ್'ನ ಸಹ-ಸಂಸ್ಥಾಪಕರೂ ಹೌದು. ಪ್ರಸಾರ ಭಾರತಿಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಅವರು, ದೂರದರ್ಶನ ಮತ್ತು ಆಕಾಶವಾಣಿಯನ್ನು ಆಧುನೀಕರಿಸಿದ್ದಲ್ಲದೆ, ಪ್ರಸಾರ ಸೇವೆಯನ್ನು 92 ದೇಶಗಳಿಗೆ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

6/6

ಟಿ.ಟಿ. ಜಗನ್ನಾಥನ್ (ಮರಣೋತ್ತರ)

ಕಳೆದ ವರ್ಷ ನಿಧನ ಹೊಂದಿದ ಪ್ರೆಶರ್ ಕುಕ್ಕರ್ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್‌ನ ನಿವೃತ್ತ ಅಧ್ಯಕ್ಷ ಟಿ.ಟಿ. ಜಗನ್ನಾಥನ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರು ಟಿಟಿಕೆ ಗ್ರೂಪ್‌ನ ಸ್ಥಾಪಕ ಮತ್ತು ಕೇಂದ್ರದ ಮಾಜಿ ಹಣಕಾಸು ಸಚಿವ ಟಿ.ಟಿ. ಕೃಷ್ಣಮಾಚಾರಿ ಅವರ ಸೋದರಳಿ ಕೂಡ ಹೌದು. ಜಗನ್ನಾಥನ್ ಅವರನ್ನು ‘ದಿ ಕಿಚನ್ ಮೊಗಲ್’ ಎಂದು ಕರೆಯಲಾಗುತ್ತದೆ. ದಶಕಗಳ ಕಾಲ ಟಿಟಿಕೆ ಪ್ರೆಸ್ಟೀಜ್ ಸಂಸ್ಥೆಯನ್ನು ಮುನ್ನಡೆಸಿದ ಇವರು, ಜಿಆರ್‌ಎಸ್ ಪ್ರೆಶರ್ ಕುಕ್ಕರ್ ಸುರಕ್ಷತಾ ವ್ಯವಸ್ಥೆಯನ್ನು ಕಂಡುಹಿಡಿದರು ಮತ್ತು ಭಾರತೀಯ ಅಡುಗೆ ಪಾತ್ರೆಗಳ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಿದರು. ಇವರು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸಾಮಾಜಿಕ ಕಾರ್ಯಗಳಿಗೆ ಮಹತ್ತರವಾದ ಕೊಡುಗೆ ನೀಡಿದ್ದಾರೆ.

Ramesh Ballamoole

View all posts by this author