PM Modi in Adichunchanagiri: ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಯಲ್ಲಿ ಪಿಸುಗುಟ್ಟಿದ ಪ್ರಧಾನಿ ನರೇಂದ್ರ ಮೋದಿ; ಫೋಟೊ ವೈರಲ್
PM Modi Karnataka Visit: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿಯಲ್ಲಿ ನಿರ್ಮಾಣವಾಗಿರುವ ಭೈರವೈಕ್ಯ ಮಂದಿರವನ್ನು ಬುಧವಾರ (ಏಪ್ರಿಲ್ 15) ಉದ್ಘಾಟಿಸಿದರು. ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಬಂದಿಳಿದ ನರೇಂದ್ರ ಅವರನ್ನು ಮುಖ್ಯಮಂತ್ರಿ ಆತ್ಮೀಯವಾಗಿ ಸ್ವಾಗತಿಸಿದರು. ರಾಜಕೀಯ ಮರೆತು ಇಬ್ಬರು ನಾಯಕರು ಆತ್ಮೀಯವಾಗಿ ನಗುತ್ತ ಮಾತನಾಡಿದ್ದು ಗಮನ ಸೆಳೆಯಿತು.
ಹಾರ ಹಾಕಿ ಸ್ವಾಗತಿಸಿದ ಸಿದ್ದರಾಮಯ್ಯ
ಬೆಂಗಳೂರಿಗೆ ಬಂದಿಳಿದ ಮೋದಿ ಅವರಿಗೆ ಹಾರ ಹಾಕಿ ಸಿದ್ದರಾಮಯ್ಯ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಸಚಿವ ಕೃಷ್ಣಬೈರೇಗೌಡ, ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮತ್ತಿತರರು ಹಾಜರಿದ್ದರು.
ಸಿದ್ದರಾಮಯ್ಯ ಕಿವಿಯಲ್ಲಿ ಪಿಸುಗುಟ್ಟಿದ ಪ್ರಧಾನಿ
ಆತ್ಮೀಯವಾಗಿ ಸ್ವಾಗತಿಸಿದ ಸಿದ್ದರಾಮಯ್ಯ ಅವರ ಕಿವಿಯಲ್ಲಿ ಮೋದಿ ಪಿಸುಗುಟ್ಟಿದ್ದು ಗಮನ ಸೆಳೆಯಿತು. ಬಳಿಕ ಮೋದಿ ಹೆಲಿಕ್ಯಾಪ್ಟರ್‌ನಲ್ಲಿ ಮೋದಿ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಗೆ ತೆರಳಿದರು. ಸದ್ಯ ಪ್ರಧಾನಿ ಮತ್ತು ಮುಖ್ಯಮಂತ್ರಿಯ ಆತ್ಮೀಯ ಸಂಭಾಷಣೆಯ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪೂಜೆ ಸಲ್ಲಿಸಿದ ಮೋದಿ
ನರೇಂದ್ರ ಮೋದಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಪವಿತ್ರ ಕ್ಷೇತ್ರ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಮೊದಲು ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿದರು.
ಹಲವು ಗಣ್ಯರ ಉಪಸ್ಥಿತಿ
ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪ್ರಧಾನಿ ಮೋದಿ ಅವರನ್ನು ಗೌರವಿಸಿ ಮಾರ್ಗದರ್ಶನ ನೀಡಿದರು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತಿತರರು ಈ ವೇಳೆ ಹಾಜರಿದ್ದರು.
ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ
ಮಂದಿರವನ್ನು ಉದ್ಘಾಟಿಸಿದ ಬಳಿಕ ನೆರೆದ ಬೃಹತ್ ಜನ ಸಮೂಹವನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಈ ವೇಳೆ ಅವರು ಕನ್ನಡದಲ್ಲೇ ಮಾತು ಆರಂಭಿಸಿದ್ದು ವಿಶೇಷ.