West Bengal Assembly Polls: ಮಾತುವಾ ದೇಗುಲಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ರಾಜಕೀಯ ಬದಲಾವಣೆ ಇಲ್ಲಿಂದಲೇ ಆರಂಭವಾಗುತ್ತ?
Narendra Modi: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿದಿದ್ದು, ದಾಖಲೆಯ ಶೇಕಡಾ 92ರಷ್ಟು ಹಕ್ಕು ಚಲಾವಣೆಯಾಗಿದೆ. ಎರಡನೇ ಮತ್ತು ಅಂತಿಮ ಹಂತ ಏಪ್ರಿಲ್ 29ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೊನೆಯ ಹಂತದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಏಪ್ರಿಲ್ 26) ವಿವಿಧ ಕಡೆ ಆಯೋಜಿಸಿದ್ದ ಬಿಜೆಪಿ ರ‍್ಯಾಲಿಯಲ್ಲಿ ಭಾಗವಹಿಸಿ ಆಡಳಿತರೂಢ ಟಿಎಂಸಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಮೋದಿ ಉತ್ತರ 24 ಪರಗಣ ಜಿಲ್ಲೆಯ ಠಾಕೂರ್ ನಗರದಲ್ಲಿರುವ ಠಾಕೂರ್ಬರಿ ಮಾತುವಾ ಮಹಾಸಂಘದ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಮಾತುವಾ ಪಶ್ಚಿಮ ಬಂಗಾಳದಲ್ಲಿ ನಿರ್ಣಾಯಕ ಸಮುದಾಯವಾಗಿದ್ದು, ಕನಿಷ್ಠ 34 ವಿಧಾನಸಭಾ ಕ್ಷೇತ್ರಗಳ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಈ ಸಮುದಾಯದಿಂದ ಉತ್ತಮ ಬೆಂಬಲ ಲಭಿಸಿತ್ತು. ಹೀಗಾಗಿ ಪ್ರಧಾನಿ ಮೋದಿ ಭೇಟಿ ರಾಜಕೀಯವಾಗಿ ಮಹತ್ವದ ತಿರುವು ಪಡೆದುಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಧಾನಿಯಿಂದ ಪೂಜೆ
ಬನಂಗಾವ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಠಾಕೂರ್ಬರಿಯಲ್ಲಿರುವ ಮಾತುವಾ ಮಹಾಸಂಘದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಹರಿ ಚಂದ್ ಠಾಕೂರ್ ಮತ್ತು ಗುರು ಚಂದ್ ಠಾಕೂರ್ ಅವರ ಪರಂಪರೆಯನ್ನು ಹೊಂದಿರುವ ಈ ದೇವಾಲಯವು ಸ್ಥಳೀಯವಾಗಿ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಇದು 19ನೇ ಶತಮಾನದ ಸಾಮಾಜಿಕ-ಧಾರ್ಮಿಕ ಚಳುವಳಿ ಮಾತುವಾ ಮಹಾಸಂಘದ ಆಧ್ಯಾತ್ಮಿಕ ಮತ್ತು ಸಾಂಸ್ಥಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
ಹಳೆಯ ದಿನಗಳ ಮೆಲುಕು
ಇದೇ ವೇಳೆ ಮೋದಿ ದೇಗುಲಕ್ಕೆ ಕೆಲವು ವರ್ಷಗಳ ಹಿಂದೆ ಭೇಟಿ ನೀಡಿದ ನೆನಪು ಹಂಚಿಕೊಂಡರು. ತಾಯಿ ವೀಣಾಪಾಣಿ ಠಾಕೂರ್ ಅಂದು ತಮ್ಮನ್ನು ಆಶೀರ್ವದಿಸಿದ ಕ್ಷಣವನ್ನು ಸ್ಮರಿಸಿದ ಮೋದಿ ಫೋಟೊ ಹಂಚಿಕೊಂಡರು.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡ ಮೋದಿ
"ಇಂದು ಮಾತುವಾ ಠಾಕೂರ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದೆ. ಹರಿಚಂದ್ ಠಾಕೂರ್ ಜಿ ಮತ್ತು ಗುರುಚಂದ್ ಠಾಕೂರ್ ಜಿ ಅವರ ಆದರ್ಶಗಳು ನಮ್ಮ ಸಮಾಜವನ್ನು ಬೆಳಗಿಸುತ್ತಲೇ ಇವೆ" ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಸಂಜೆ ಅವರು ಕೋಲ್ಕತ್ತಾದ ಥಂಥಾನಿಯಾ ಕಾಲಿಬರಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾ ಕಾಳಿಯ ಆಶೀರ್ವಾದ ಪಡೆದರು. ಈ ಪ್ರಾಚೀನ ದೇವಾಲಯವು ಬಂಗಾಳಿ ಸಂಸ್ಕೃತಿಯೊಂದಿಗೆ ಮತ್ತು ವಿಶೇಷವಾಗಿ ಕೋಲ್ಕತ್ತಾದೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದೆ.
ಬೃಹತ್ ರ‍್ಯಾಲಿ
ಬನಂಗಾವ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಬೃಹತ್ ರ‍್ಯಾಲಿಯಲ್ಲಿ ಭಾಗವಹಿಸಿದ ಮೋದಿ ಪಶ್ಚಿಮ ಬಂಗಾಳವು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದು ಹೇಳಿದ್ದಾರೆ.
ಪೌರತ್ವದ ಭರವಸೆ
ಬನಂಗಾವ್‌ನಲ್ಲಿ ನಡೆದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅರ್ಹ ಮಾತುವಾ ನಮಸುದ್ರ ಸದಸ್ಯರಿಗೆ ಪೌರತ್ವ ತಿದ್ದುಪಡಿ ಕಾಯ್ದೆ (CAA) ಅಡಿಯಲ್ಲಿ ಪೌರತ್ವವನ್ನು ನೀಡುವುದಾಗಿ ಭರವಸೆ ಒದಗಿಸಿದರು. ಸಮುದಾಯದ ದೊಡ್ಡ ಭಾಗವು ಬಾಂಗ್ಲಾದೇಶದಿಂದ ವಲಸೆ ಬಂದವರಾಗಿದ್ದು, ಈ ಭರವಸೆ ನಿರ್ಣಾಯಕವಾಗಲಿದೆ.