Kerala Assembly Election 2026: ದೇವರ ನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚಿನ ಪ್ರಚಾರ; ಎಲ್‌ಡಿಎಫ್-ಯುಡಿಎಫ್ ವಿರುದ್ಧ ಗುಡುಗು
ಕೇರಳಂ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ದೇಶದ ಕುತೂಹಲ ಕೆರಳಿಸಿದೆ. ಎಲ್‌ಡಿಎಫ್ ಮತ್ತು ಯುಡಿಎಫ್‌ಗೆ ಟಕ್ಕರ್ ಕೊಟ್ಟು ಈ ಬಾರಿ ಬಿಜೆಪಿ ಕೆಲವು ಕ್ಷೇತ್ರಗಳಲ್ಲಾದರೂ ಜಯ ಗಳಿಸಲಿದೆ ಎನ್ನುವ ಲೆಕ್ಕಾಚಾರ ಅರಂಭವಾಗಿದೆ. 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 1 ಕ್ಷೇತ್ರದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕೇರಳಂನ ಜನತೆ ಕೇಸರಿ ಪಕ್ಷದತ್ತ ಒಲವು ತೋರಿಸುತ್ತಿರುವುದು ಎನ್‌ಡಿಎಯ ನಿರೀಕ್ಷೆ ಮೂಡುವಂತೆ ಮಾಡಿದೆ. ಅಲ್ಲದೆ ಭಾನುವಾರ (ಮಾರ್ಚ್ 29) ಪ್ರಧಾನಿ ನರೇಂದ್ರ ಮೋದಿ ಕೇರಳಂಗೆ ಆಗಮಿಸಿ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ಪಾಲಕ್ಕಾಡ್ ಮತ್ತು ತ್ರಿಶೂರ್‌ನಲ್ಲಿ ಸಂಚರಿಸಿ ಮಿಂಚು ಹರಿಸಿದರು.
ಪಾಲಕ್ಕಾಡ್‌ನಲ್ಲಿ ಮೋದಿ ಗುಡುಗು
ಪಾಲಕ್ಕಾಡ್‌ಗೆ ಬಂದಿಳಿದ ನರೇಂದ್ರ ಮೋದಿ ಆಡಳಿತ ರೂಢ ಎಡಪಕ್ಷದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಿರುದ್ಧ ಕಿಡಿಕಾರಿದರು. ಈ ಎರಡೂ ಒಕ್ಕೂಟಗಳು ಕೇರಳಂ ಅನ್ನು ಲೂಟಿ ಮಾಡುತ್ತಿವೆ ಎಂದರು. ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದ ನಿಜವಾದ ಎ ಟೀಂ. ಇದು ಯಾವುದೇ ಪಕ್ಷದ ಬಿ ಟೀಂ ಅಲ್ಲ ಎಂದು ಕಿಡಿಕಾರಿದರು. ಆ ಮೂಲಕ ಎನ್‌ಡಿಎಯನ್ನು ಟೀಕಿಸಿದ ಎಲ್‌ಡಿಎಫ್, ಯುಡಿಎಫ್ ನಾಯಕರಿಗೆ ತಿರುಗೇಟು ನೀಡಿದರು.
ಚೆಂಡೆ ಬಾರಿಸುವ ಮೂಲಕ ರಣ ಕಹಳೆ
ಬಿಜೆಪಿ ನಾಯಕರೊಂದಿಗೆ ವೇದಿಕೆಗೆ ಆಗಮಿಸಿದ ಮೋದಿ ಕೇರಳಂನ ಸಾಂಪ್ರದಾಯಿಕ ಚೆಂಡೆಯನ್ನು ಬಾರಿಸುವ ಮೂಲಕ ರಣ ಕಹಳೆ ಮೊಳಗಿಸಿದರು. ಕೇರಳಂ ಜನತೆಯ ಆಶೀರ್ವಾದ ಇದ್ದರೆ ಇಲ್ಲಿ ಸರ್ಕಾರ ರಚಿಸುವುದಾಗಿ ತಿಳಿಸಿದರು.
ಸಾವಿರಾರು ಕಾರ್ಯಕರ್ತರು ಭಾಗಿ
ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಬೆಂಬಲ ನೀಡಿದರೆ ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಾಯಿಸುವುದಾಗಿ ಭರವಸೆ ನೀಡಿದರು.
ಬದಲಾವಣೆಗೆ ಮತ ಚಲಾಯಿಸಲು ಕರೆ
ಇದೇ ವೇಳೆ ಮೋದಿ, ʼʼಕೇರಳಂನ ಯುವ ಜನತೆ ಬಿಜೆಪಿ ಮತ್ತು ಎನ್‌ಡಿಎಯತ್ತ ಒಲವು ವ್ಯಕ್ತಪಡಿಸುತ್ತಿದೆ. ಜತೆಗೆ ಮಹಿಳೆಯರೂ ನಮ್ಮ ಪಕ್ಷದತ್ತ ಆಕರ್ಷಿತರಾಗುತ್ತಿದ್ದಾರೆ. ಮಾತ್ರವಲ್ಲ ಕೃಷಿಕರೂ ಬಿಜೆಪಿಯ ಮೇಲೆ ಭರವಸೆ ಇಡುತ್ತಿದ್ದಾರೆʼʼ ಎಂದು ತಿಳಿಸಿದರು.
ಎಲ್‌ಡಿಎಫ್-ಯುಡಿಎಫ್‌ಗೆ ಭಯ ಕಾಡುತ್ತಿದೆ
ʼʼಯುಡಿಎಫ್ ಮತ್ತುಎಲ್‌ಡಿಎಫ್ ಮಧ್ಯೆ ಮೊದಲಿನಿಂದಲೂ ರಹಸ್ಯ ಒಪ್ಪಂದವಿದೆ. ಸರ್ಕಾರ ನಡೆಸುತ್ತಿರುವ ಎಲ್‌ಡಿಎಫ್ ಈಗ ಜನರ ಹಣ ದೋಚುತ್ತಿದೆ. ಯುಡಿಎಫ್ ಬಂದರೆ ಅದನ್ನೇ ಮುಂದುವರಿಸಲಿದೆ. ಬಿಜೆಪಿಗೆ ದೊರೆಯುತ್ತಿರುವ ಜನ ಬೆಂಬಲ ನೋಡಿ ಎರಡೂ ಒಕ್ಕೂಟಗಳು ಬೆಚ್ಚಿಬಿದ್ದಿವೆʼʼ ಎಂದು ಮೋದಿ ವಾಗ್ದಾಲಿ ನಡೆಸಿದರು. ಬಳಿಕ ಮೋದಿ ತ್ರಿಶೂರ್‌ನಲ್ಲೂ ನಡೆದ ರ‍್ಯಾಲಿಯಲ್ಲಿ ಪಾಲ್ಗೊಂಡರು.