Kantara Chapter 1: 'ಕಾಂತಾರ: ಚಾಪ್ಟರ್ 1' ರಿಲೀಸ್‌ಗೆ ದಿನಗಣನೆ; ಕೊಲ್ಲೂರು ದೇಗುಲಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ
ಜಾಗತಿಕ ಸಿನಿಪ್ರಿಯರ ಗಮನ ಸೆಳೆದ ʼಕಾಂತಾರ: ಚಾಪ್ಟರ್ 1' ಅಕ್ಟೋಬರ್ 2ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಕರ್ನಾಟಕದಲ್ಲಿನ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಭರ್ಜರಿ ಪ್ರತಿಕ್ರಿಯೆ ಲಭಿಸಿದೆ. ನಿಧಾನವಾಗಿ ಚಿತ್ರತಂಡ ಪ್ರಚಾರಕ್ಕೆ ಇಳಿದಿದೆ. ಈ ಮಧ್ಯೆ ಚಿತ್ರದ ನಿರ್ದೇಶಕ, ನಾಯಕ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು.
ʼಕಾಂತಾರ: ಚಾಪ್ಟರ್ 1ʼ ಚಿತ್ರದಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಪ್ರಗತಿ ಶೆಟ್ಟಿ ಕಾರ್ಯ ನಿರ್ವಹಿಸಿದ್ದಾರೆ. 4-5 ಶತಮಾನದಲ್ಲಿ ನಡೆಯುವ, ಕದಂಬ ರಾಜಾಡಳಿತ ಕಾಲದಲ್ಲಿ ಕರಾವಳಿಯಲ್ಲಿ ನಡೆಯುವ ಕಥೆ ಇದಾಗಿದ್ದು, ಕಲಾವಿದರ ಉಡುಗೆ-ತೊಡುಗೆಯನ್ನು ಕೂಡ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಚಿತ್ರದ ಕಾಸ್ಟ್ಯೂಮ್‌ಗಾಗಿ ಸೆಟ್‌ನಲ್ಲಿ ಪ್ರತಿದಿನ 40 ಟೈಲರ್, 30 ವಸ್ತ್ರ ವಿನ್ಯಾಸಕರು ಕೆಲಸ ಮಾಡಿದ್ದರು.
ಈಗಾಗಲೇ ಚಿತ್ರತಂಡ ಪ್ರಮೋಷನ್ ಕಾರ್ಯಕ್ಕೆ ಇಳಿದಿದ್ದು, ವಿವಿಧ ನಗರಗಳಲ್ಲಿ ಪ್ರೆಸ್‌ಮೀಟ್ ಆಯೋಜಿಸಲಾಗಿದೆ. ಇದೆಲ್ಲದರ ಮಧ್ಯೆ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ತಮ್ಮ ಮಕ್ಕಳೊಂದಿಗೆ ಕೊಲ್ಲೂರು ದೇಗುಲಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.
2022ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಸೆಟ್ಟೇರಿದಾಗಿನಿಂದಲೇ ಕುತೂಹಲ ಕೆರಳಿಸಿದೆ. ಹೊಂಬಾಳೆ ಫಿಲ್ಮ್ಸ್ ಅದ್ಧೂರಿಯಾಗಿ ನಿರ್ಮಿಸುವ ಈ ಚಿತ್ರದ ಶೂಟಿಂಗ್ ಸುಮಾರು 250 ದಿನಗಳ ಕಾಲ ನಡೆದಿದೆ.
ಕೊಲ್ಲೂರು, ಕುಂದಾಪುರ, ಕೆರಾಡಿ, ತೀರ್ಥಹಳ್ಳಿ ಸುತ್ತಮುತ್ತಲಿನ ಕಾಡುಗಳಲ್ಲಿ, ಗ್ರಾಮಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ನೈಜ ಕಾಡಿನಲ್ಲಿಯೇ ಚಿತ್ರೀಕರಣ ಮಾಡಿದ್ದು ವಿಶೇಷ.
ವಿಶೇಷ ಎಂದರೆ ಅರಮನೆ ಪೂರ್ತಿ ಎಸಿ ಫ್ಲೋರ್ ಸೆಟ್ ಹಾಕಲಾಗಿತ್ತು. ಈ ಅರಮನೆ ಸೆಟ್‌ಗಾಗಿ ಬರೋಬ್ಬರಿ 10 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಸೆಟ್‌ನಲ್ಲಿ ಕೆಲಸ ಮಾಡುವವರಿಗೆ 10 ಲಕ್ಷ ರೂ. ವಿಮೆಯನ್ನೂ ಮಾಡಿಸಲಾಗಿತ್ತು.