ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಟ್ಕಳದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ 8 ಮಂದಿ ಸಾವು, ಮಥುರಾ ದೋಣಿ ದುರಂತದಲ್ಲಿ 10 ಮಂದಿ ನೀರುಪಾಲು; ಈ ವರ್ಷದ ಭೀಕರ ಜಲ ದುರಂತಗಳಿವು

ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ಜಲ ದುರಂತವೊಂದು ಸಂಭವಿಸಿದ್ದು, ಕಪ್ಪೆಚಿಪ್ಪು (ಚಪ್ಪೆಕಲ್ಲು) ಆರಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬಕ್ಕೆ ಸೇರಿದ 8 ಜನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ​ ಭಟ್ಕಳ ತಾಲೂಕಿನ ಶಿರಾಲಿ ಸಮೀಪ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ಭಾನುವಾರ (ಮೇ 24) ಈ ಭೀಕರ ದುರಂತ ಸಂಭವಿಸಿದೆ. ಕಪ್ಪೆಚಿಪ್ಪು ಆರಿಸಲು ಇಳಿದವರು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ಸಾಗುತ್ತಿದ್ದರು ಎನ್ನಲಾಗಿದೆ. ಈ ವೇಳೆ 8 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ತೀವ್ರವಾಗಿತ್ತು. ಇದರೊಂದಿಗೆ ಸಮುದ್ರದ ಅಲೆಗಳ ಅಬ್ಬರವೂ ಹೆಚ್ಚಾಗಿದ್ದರಿಂದ ಹೊಳೆಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಇನ್ನು ಈ ವರ್ಷ ದೇಶದಲ್ಲಿ ನಡೆದ ಪ್ರಮುಖ ಜಲ ದುರಂತಗಳ ವಿವರ ಇಲ್ಲಿದೆ.

ಭಟ್ಕಳದಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ
1/5

ಜಬಲ್ಪುರ ದೋಣಿ ದುರಂತ; 9 ಮಂದಿ ಸಾವು

ಕೆಲವು ದಿನಗಳ ಹಿಂದೆ ಮಧ್ಯ ಪ್ರದೇಶದಲ್ಲಿ ನಡೆದ ದೋಣಿ ದುರಂತದಲ್ಲಿ 9 ಮಂದಿ ಮೃತಪಟ್ಟಿದ್ದರು. ಪ್ರವಾಸೋದ್ಯಮ ಇಲಾಖೆಯಿಂದ ನಿರ್ವಹಿಸಲ್ಪಡುವ ಕ್ರೂಸ್ ದೋಣಿಯೊಂದು ಭೋಪಾಲ್‌ನ ಜಬಲ್ಪುರದ ಬಾರ್ಗಿ ಜಲಾಶಯದಲ್ಲಿ ಬಿರುಗಾಳಿಗೆ ಸಿಲುಕಿ ಮುಳುಗಿ ಈ ದುರಂತ ಸಂಭವಿಸಿತ್ತು. ಈ ವೇಳೆ 28 ಮಂದಿಯನ್ನು ರಕ್ಷಿಸಲಾಗಿತ್ತು.

2/5

ಮಥುರಾದಲ್ಲಿ ದೋಣಿ ಮಗುಚಿ 10 ಯಾತ್ರಿಕರ ಸಾವು

ಕಳೆದ ತಿಂಗಳು ಉತ್ತರ ಪ್ರದೇಶದ ಮಥುರಾದಲ್ಲಿ ಯಮುನಾ ನದಿಯಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ 10 ಜನರು ಮೃತಪಟ್ಟಿದ್ದರು. ಮಾಂತ್ ಪೊಲೀಸ್ ಠಾಣಾ ವ್ಯಾಪ್ತಿಯ ಮಥುರಾದ ವೃಂದಾವನದಲ್ಲಿ ಘಟನೆ ಸಂಭವಿಸಿತ್ತು. ಪಂಜಾಬ್‌ನ ಲೂಧಿಯಾನದಿಂದ ತೀರ್ಥಯಾತ್ರೆಗೆ ಬಂದಿದ್ದ ಯಾತ್ರಿಕರು ಸಂಚರಿಸುತ್ತಿದ್ದ ದೋಣಿ ಮುಳುಗಿ ಈ ದುರಂತ ನಡೆದಿತ್ತು. ಮಾಂಟ್ ಪೊಲೀಸ್ ಠಾಣೆ ಪ್ರದೇಶದ ಕೆ.ಸಿ. ಘಾಟ್ ಬಳಿ ತೆರಳುತ್ತಿದ್ದಾಗ ಬಲವಾದ ಗಾಳಿ ಬೀಸಿದ್ದು, ಈ ವೇಳೆ ದೋಣಿ ನಿಯಂತ್ರಣ ತಪ್ಪಿ, ಪಾಂಟೂನ್ ಸೇತುವೆಗೆ ಡಿಕ್ಕಿ ಹೊಡೆದು ಏಕಾಏಕಿ ಮಗುಚಿ ಬಿದ್ದಿತ್ತು.

3/5

ರಾಜ್‌ಕೋಟ್‌: ನಾಲ್ವರು ಜಲ ಸಮಾಧಿ

ಮೇ ಆರಂಭದಲ್ಲಿ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಅಜಿ ಡ್ಯಾಂನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿತ್ತು. ಅಜಿ ಡ್ಯಾಂಗೆ ಬಳಿ ಇರುವ ಮೊಗಲ್‌ ಮಾತಾ ದೇವಸ್ಥಾನಕ್ಕೆ ಈ ಕುಟುಂಬ ತೆರಳಿತ್ತು. ಈ ವೇಳೆ ಆಟೋ ರಿಕ್ಷಾ ತೊಳೆಯಲು ಡ್ಯಾಂ ಬಳಿ ಬಂದಾಗ ಈ ದುರಂತ ಸಂಭವಿಸಿತ್ತು.

4/5

ಕೆ.ಆರ್‌. ನಗರದಲ್ಲಿ ಕಾವೇರಿ ನದಿಯಲ್ಲಿ ಮುಳುಗಿ 6 ಮಂದಿ ದುರ್ಮರಣ

ಮೈಸೂರು ಜಿಲ್ಲೆಯ ಕೆ.ಆರ್‌. ನಗರದ ಅರ್ಕೇಶ್ವರ ದೇವಸ್ಥಾನದ ಸಮೀಪದ ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಘಟನೆ ಕಳೆದ ತಿಂಗಳು ನಡೆದಿತ್ತು. ದರ್ಗಾಕ್ಕೆ ಭೇಟಿ ನೀಡಲು ಬಂದಿದ್ದ ಪ್ರವಾಸಿಗರು, ಅರ್ಕೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದರು. ಈ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ನದಿಯಲ್ಲಿ ಮುಳುಗಿದ್ದರು.

5/5

ಬಾತುಕೋಳಿ ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳ ಸಾವು

ಬಾತುಕೋಳಿ ಹಿಡಿಯುವುದಕ್ಕೆ ಹೋದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ಧಾರುಣ ಘಟನೆ ಮೇ ಆರಂಭದಲ್ಲಿ ನಡೆದಿತ್ತು. ಚಿಕ್ಕಮಗಳೂರು ತಾಲೂಕಿನ ಅರಳುಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ಈ ದುರಂತ ಸಂಭವಿಸಿತ್ತು. ಕೆರೆ ಪಾತ್ರದಲ್ಲಿ ಮಕ್ಕಳು ಆಟವಾಡುವಾಡುತ್ತಿದ್ದಾಗ ಬಾತುಕೋಳಿ ನೀರಿಗಿಳಿದಿದೆ ಎಂದು ಅದನ್ನು ಹಿಡಿಯಲು ಹೋದ ಬಾಲಕಿ ನೀರಿಗೆ ಬಿದ್ದಿದ್ದಳು. ಈ ಬಾಲಕಿಯನ್ನು ರಕ್ಷಿಸಲು ಹೋದ ಒಬ್ಬರ ಹಿಂದೊಬ್ಬರಂತೆ ಮಕ್ಕಳು ನೀರಿಗಿಳಿದು ಮೃತಪಟ್ಟಿದ್ದರು.

Ramesh Ballamoole

View all posts by this author