ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tripti Dimri: ಪ್ರಭಾಸ್‌ ʼಸ್ಪಿರಿಟ್‌ʼಗೆ ಕೊನೆಗೂ ನಾಯಕಿ ಆಯ್ಕೆ; ʼಅನಿಮಲ್‌ʼ ನಟಿಗೆ ಮಣೆ ಹಾಕಿದ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ

Spirit Movie: ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌ ಚಿತ್ರ ಎಂದರೆ ಸಾಕು ಸೆಟ್ಟೇರುವ ಮುನ್ನವೇ ಸದ್ದು ಮಾಡುತ್ತವೆ.ಇತ್ತೀಚಿನ ದಿನಗಳಲ್ಲಿ ಹೀಗೆ ದೇಶಾದ್ಯಂತ ಭಾರಿ ಸುದ್ದಿಯಲ್ಲಿರುವ ಟಾಲಿವುಡ್‌ ಸಿನಿಮಾ ʼಸ್ಪಿರಿಟ್‌ʼ (Spirit Movie). ಮೊದಲ ಬಾರಿಗೆ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ ಮತ್ತು ಪ್ರಭಾಸ್‌ (Prabhas) ಒಂದಾಗುತ್ತಿರುವ ಕಾರಣಕ್ಕೆ ಭಾರಿ ಕುತೂಹಲ ಕೆರಳಿಸಿದ ಈ ಚಿತ್ರ ನಾಯಕಿಯ ವಿಚಾರಕ್ಕೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆರಂಭದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಎಂದು ಹೇಳಲಾಗಿತ್ತು. ಅದಾದ ಬಳಿಕ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಹೆಸರು ಕೇಳಿ ಬಂತು. ನಾಯಕಿ ಪಾತ್ರ ಒಪ್ಪಿಕೊಂಡ ದೀಪಿಕಾ ಬರೋಬ್ಬರಿ 20 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನುವ ವದಂತಿಯೂ ಹಬ್ಬಿತ್ತು. ಅದಾದ ಬಳಿಕ ಚಿತ್ರತಂಡದ ಅಧಿಕೃತ ಘೋಷಣೆಗೂ ಮುನ್ನವೇ ಅವರು ಹೊರ ನಡೆದಿದ್ದಾರೆ ಎನ್ನುವ ಸುದ್ದಿಯೂ ಹರಡಿತು. ಹಾಗಾದರೆ ಬಹು ನಿರೀಕ್ಷಿತ ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಮಿಲಿಯನ್‌ ಡಾಲರ್‌ ಪ್ರಶ್ನೆಯೂ ಎದುರಾಗಿತ್ತು. ಇದೀಗ ಸಿನಿಮಾತಂಡ ಕುತೂಹಲಕ್ಕೆ ತೆರೆ ಎಳೆದಿದ್ದು, ನಾಯಕಿಯ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಾಲಿವುಡ್‌ ನಟಿ ತೃಪ್ತಿ ಡಿಮ್ರಿಗೆ (Tripti Dimri) ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ ಮಣೆ ಹಾಕಿದ್ದಾರೆ.

1/5

ಪ್ರಭಾಸ್‌ಗೆ ಮೊದಲ ಬಾರಿಗೆ ಜೋಡಿ

ʼಸ್ಪಿರಿಟ್‌ ʼ ಚಿತ್ರದಲ್ಲಿ ನಾಯಕಿಯಾಗಿ ತೃಪ್ತಿ ನಟಿಸಲಿದ್ದಾರೆ ಎನ್ನುವ ವಿಚಾರವನ್ನು ಪ್ರಭಾಸ್‌ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಬಹು ದಿನಗಳ ಕುತೂಹಲಕ್ಕೆ, ಚರ್ಚೆಗೆ ತೆರೆ ಎಳೆದಿದ್ದಾರೆ. ಮೊದಲ ಬಾರಿ ಪ್ರಭಾಸ್‌-ತೃಪ್ತಿ ಜತೆಯಾಗಿ ನಟಿಸಲಿದ್ದಾರೆ.

2/5

ಅಕ್ಟೋಬರ್‌ನಲ್ಲಿ ಶೂಟಿಂಗ್‌

ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ʼಸ್ಪಿರಿಟ್‌ʼ ಚಿತ್ರದ ಶೂಟಿಂಗ್‌ ಆರಂಭವಾಗಬೇಕಿತ್ತು. ಆದರೆ ಕಾರಣಾಂತಗಳಿಂದ ಚಿತ್ರೀಕರಣ ವಿಳಂಬವಗುತ್ತಾ ಸಾಗಿತ್ತು. ಕೊನೆಗೂ ಈ ವರ್ಷದ ಅಕ್ಟೋಬರ್‌ನಲ್ಲಿ ಸೆಟ್ಟೇರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

3/5

2ನೇ ಬಾರಿ ಒಂದಾದ ಸಂದೀಪ್‌ ರೆಡ್ಡಿ-ತೃಪ್ತಿ

ಹಾಗೆ ನೋಡಿದರೆ ನಟಿ ತೃಪ್ತಿ ಮತ್ತು ನಿರ್ದೇಶಕ ಸಂದೀಪ್‌ ರೆಡ್ಡಿ ಈ ಹಿಂದೆಯೂ ಜತೆಯಾಗಿ ಕೆಲಸ ಮಾಡಿದ್ದಾರೆ. 2023ರಲ್ಲಿ ತೆರೆಕಂಡ ರಣಬೀರ್‌ ಕಪೂರ್‌-ರಶ್ಮಿಕಾ ಮಂದಣ್ಣ ನಟನೆಯ ಬಾಲಿವುಡ್‌ ಚಿತ್ರ ʼಅನಿಮಲ್‌ʼನಲ್ಲಿ ತೃಪ್ತಿ ಪ್ರಮುಖ ಪಾತ್ರವೊದರಲ್ಲಿ ಕಾಣಿಸಿಕೊಂಡಿದ್ದರು.

4/5

ʼಅನಿಮಲ್‌ʼನಲ್ಲಿ ಬೋಲ್ಡ್‌ ಅವತಾರ ತಾಳಿದ್ದ ತೃಪ್ತಿ

ʼಅನಿಮಲ್‌ʼನಲ್ಲಿ ಕೆಲವೇ ಹೊತ್ತು ಕಾಣಿಸಿಕೊಂಡರೂ ತೃಪ್ತಿ ಗ್ಲ್ಯಾಮರ್‌ ಅವತಾರದಿಂದಲೇ ಪ್ರೇಕ್ಷಕರ ಗಮನ ಸೆಳೆದಿದ್ದರು. ರಣಬೀರ್‌ ಕಪೂರ್‌ ಜತೆಗೆ ಹಸಿ ಬಿಸಿ ದೃಶ್ಯದಲ್ಲಿ ಬೋಲ್ದಾಗಿ ನಟಿಸಿದ್ದರು. ತೃಪ್ತಿ ಎಲ್ಲೆ ಮೀರಿ ಕಾಣಿಸಿಕೊಂಡಿದ್ದಾರೆ, ಇಷ್ಟೆಲ್ಲ ಬೋಲ್ಡ್‌ ಆಗಬೇಕಿತ್ತ ಎನ್ನುವ ಮಾತೂ ಕೇಳಿ ಬಂದಿತ್ತು.

5/5

ಮತ್ತೆ ಗ್ಲ್ಯಾಮರ್‌ ಅವತಾರ ತಾಳ್ತಾರಾ?

2017ರಲ್ಲಿ ರಿಲೀಸ್‌ ಆದ ʼಮಾಮ್‌ʼ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ತೃಪ್ತಿ ಇದೇ ಮೊದಲ ಬಾರಿಗೆ ʼಸ್ಪಿರಿಟ್‌ʼ ಮೂಲಕ ತೆಲುಗು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ತೃಪ್ತಿ ಪಾಲಿಗೆ ʼಸ್ಪಿರಿಟ್‌ʼ ಬಹುಮುಖ್ಯ ಪ್ರಾಜೆಕ್ಟ್‌ ಎನಿಸಿಕೊಂಡಿದೆ. ತೃಪ್ತಿ ಮತ್ತೊಮ್ಮೆ ಗ್ಲ್ಯಾಮರಸ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದೇ ಪಡ್ಡೆಗಳು ಲೆಕ್ಕಾಚಾರ ಆರಂಭಿಸಿದ್ದಾರೆ.