Caste Census: ಸಿಎಂ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಜಾತಿ ಸಮೀಕ್ಷೆ: ಬೊಮ್ಮಾಯಿ ಟೀಕೆ
Basavaraj Bommai: ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಜಾತಿ ಏಕೆ ಬೇಕು? ಡಿಸೆಂಬರ್‌ನಲ್ಲಿ ಜಾತಿ ಜನಗಣತಿ ವರದಿ ಕೊಡಿ ಅಂತ ಆಯೋಗಕ್ಕೆ ಸಿಎಂ ಹೇಳಿದ್ದಾರೆ. ಈ ಕಡೆ ಡಿಸೆಂಬರ್‌ನಲ್ಲಿ ನಾಯಕತ್ವ ಬದಲಾವಣೆ ಆಗಬೇಕು ಅಂತ ಡಿ.ಕೆ.ಶಿವಕುಮಾರ ಬಣ ಹೇಳುತ್ತಿದೆ. ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಸಿಎಂ ಜಾತಿ ಸಮೀಕ್ಷೆ ವರದಿಯನ್ನು ರಾಜಕೀಯವಾಗಿ ಬಳಸಲು ಮುಂದಾಗಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

-

ಬೆಂಗಳೂರು: ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಜಾತಿ ಏಕೆ ಬೇಕು? ಡಿಸೆಂಬರ್‌ನಲ್ಲಿ ಜಾತಿ ಜನಗಣತಿ ವರದಿ ಕೊಡಿ ಅಂತ ಆಯೋಗಕ್ಕೆ ಸಿಎಂ ಹೇಳಿದ್ದಾರೆ. ಈ ಕಡೆ ಡಿಸೆಂಬರ್‌ನಲ್ಲಿ ನಾಯಕತ್ವ ಬದಲಾವಣೆ ಆಗಬೇಕು ಅಂತ ಡಿ.ಕೆ.ಶಿವಕುಮಾರ ಬಣ ಹೇಳುತ್ತಿದೆ, ಡಿಕೆಶಿ ಸಿಎಂ ಆಗುತ್ತಾರೆ ಅಂತಿದ್ದಾರೆ. ಹೀಗಾಗಿ ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಸಿಎಂ ಜಾತಿ ಸಮೀಕ್ಷೆ ವರದಿಯನ್ನು ರಾಜಕೀಯವಾಗಿ ಬಳಸಲು ಮುಂದಾಗಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಜಾತಿ ಜನಗಣತಿ ಮೂಲಕ ಕ್ರೈಸ್ತ ಧರ್ಮಕ್ಕೆ ಮತಾಂತರದ ಆರೋಪದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸಂವಿಧಾನದಲ್ಲಿ ಕೇವಲ ಆರು ಧರ್ಮಗಳು ಇವೆ, ಅಷ್ಟೇ ಧರ್ಮಗಳ ಹೆಸರು ಬರೆಯಬೇಕು. ರಾಜ್ಯದಲ್ಲಿ ಮತಾಂತರಗೊಂಡ ಕ್ರೈಸ್ತರು ಅನ್ನುವ ಹೊಸ ಕಾಲಂ ಮಾಡಿದ್ದಾರೆ. ಇದೊಂದು ಧರ್ಮದ ರೀತಿ ಕಾಲಂ ಮಾಡಿದ್ದಾರೆ. ಇದು ಕಾನೂನು ಬಾಹಿರ, ಸಂವಿಧಾನ ಬಾಹಿರ, ರಾಜಕೀಯ ಪ್ರೇರಿತವಾಗಿದೆ. ಎರಡೂ ಕಡೆಯೂ ಮತಾಂತರ ಆಗಿರುತ್ತದೆ. ಆದರೆ, ಸಿಎಂ ಕ್ರೈಸ್ತ ಧರ್ಮದ ಮತಾಂತರಕ್ಕೆ ಮಾತ್ರ ಮನ್ನಣೆ ಕೊಟ್ಟಿರೋದೇಕೆ? ಎಂದು ಪ್ರಶ್ನಿಸಿದರು.
ಸಿಎಂ ಅವರು ಒಂದು ಹೆಜ್ಜೆ ಮುಂದೆ ಹೋಗಿ ಮತಾಂತರ ಅವರ ಹಕ್ಕು ಅಂದಿದ್ದಾರೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ ಅಂತ ಸಿಎಂ ಹೇಳಿದ್ದಾರೆ. ಇದು ಸಮಾನತೆ ಪ್ರಶ್ನೆ ಅಲ್ಲ, ಆಸೆ ಆಮಿಷ ಒಡ್ಡಿ ಮತಾಂತರ ಆಗಿದ್ದಾರೆ. ಅವರ ಬಡತನ, ಶಿಕ್ಷಣ ಇಲ್ಲದಿರುವುದನ್ನು ದುರುಪಯೋಗ ಪಡಿಸಿಕೊಂಡು ಮತಾಂತರ ಮಾಡಲಾಗಿದೆ. ಹಲವರು ಕ್ರೈಸ್ತಧರ್ಮದಿಂದ ವಾಪಸ್ ಬಂದಿದ್ದಾರೆ. ಈ ಮತಾಂತರ ಬಗ್ಗೆಯೇ ಹಲವು ಅನುಮಾನಗಳಿವೆ. ಇವರಿಗೆ ಜಾತಿ ಕಾಲಂನಲ್ಲಿ ಮತಾಂತರಗೊಂಡವರಿಗೆ ಹೊಸ ಕಾಲಂ ಮಾಡಲು ಯಾರು ಅಧಿಕಾರ ಕೊಟ್ಟರು? ಯಾವ ಕಾನೂನಿನಲ್ಲಿದೆ? ತಮ್ಮ ಅಕ್ಕಪಕ್ಕಹಿಂದೆ ಮುಂದೆ ಇರುವವರು ಸಲಹೆ ಪಡೆದು ಅದನ್ನು ಸೇರಿಸಿದ್ದಾರೆ. ಇದು ಧರ್ಮಧರ್ಮ ಗಳ ನಡುವೆ, ವಿಷ ಬೀಜ ಬಿತ್ತುವ, ಗಲಭೆ ಮಾಡಿಸುವ ಕೆಲಸ ಈಗಾಗಲೇ 350 ಕೋಟಿ ರೂ. ಪೋಲು ಮಾಡಿದ್ದರು, ಈಗ 420 ಕೋಟಿ ಮತ್ತೆ ಪೋಲು ಮಾಡಲು ಹೊರಟಿದ್ದಾರೆ.
ರಾಜಕೀಯ ಅಸ್ತ್ರ
ಜಾತಿ ಜನಗಣತಿ ಸಮೀಕ್ಷೆ ಮೂಲಕ ಗ್ಯಾರಂಟಿ ಫಲಾನುಭವಿಗಳ ಡೇಟಾ ಸಂಗ್ರಹಕ್ಕೆ ಸರ್ಕಾರ ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಯೋಜನೆಗಳಿಗೂ ಸಾಮಾಜಿಕ ಆರ್ಥಿಕ ಸಮೀಕ್ಷೆಗೂ ಏನು ಸಂಬಂಧ. ಇದು ರಾಜಕೀಯ ಪ್ರೇರಿತವಾದ ಸಮೀಕ್ಷೆ. ಗ್ಯಾರಂಟಿ ಫಲಾನುಭವಿಗಳ ಪರಿಶೀಲನೆಗೆ ಮಾಹಿತಿ ಸಂಗ್ರಹ ಜಾತಿ ಜನಗಣತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಬಣ ಮುಂದಾಗಿದೆ ಎಂದು ಹೇಳಿದರು.
ಮಹಾಸಭೆಯಿಂದ ಗೊಂದಲ ಸೃಷ್ಟಿ
ವೀರಶೈವ ಲಿಂಗಾಯತ ಮಹಾಸಭೆ ಸಂಪೂರ್ಣವಾಗಿ ಕಾಂಗ್ರೆಸ್‌ಮಯ ಆಗಿದೆ. ಮಹಾಸಭೆಗೆ ನನ್ನ ವಿನಂತಿ, ಕಾನೂನು, ಸಂವಿಧಾನ ಪ್ರಕಾರ ಸಲಹೆ ಮಾಡಬೇಕು. ಮಹಾಸಭೆ ಗೊಂದಲ ಸೃಷ್ಟಿಸಬಾರದು. ಒಂದು ಕಡೆ ಹೊಸ ಧರ್ಮ ಅಂತಾರೆ, ಇನ್ನೊಂದು ಕಡೆ ವೀರಶೈವ ಅಂತಾರೆ, ಲಿಂಗಾಯತ ಅಂತಾರೆ, ವೀರಶೈವ ಲಿಂಗಾಯತ ಅಂತಾರೆ. ಈ ಗೊಂದಲ ನಿವಾರಣೆ ಆಗಬೇಕು. ಇಲ್ಲದಿದ್ದರೆ ಜನ ತಮ್ಮ ತೀರ್ಮಾನ ಮಾಡುತ್ತಾರೆ. ನಾವೂ ಕೂಡ ಈ ವಿಚಾರದಲ್ಲಿ ಪಕ್ಷದ ಹಿರಿಯರು ಚರ್ಚೆ ಮಾಡುತ್ತಿದ್ದೇವೆ ಎಂದರು.
ಜಾತಿ ಜನಗಣತಿ ಸಮೀಕ್ಷೆಯಲ್ಲಿ ನಾಸ್ತಿಕ ಕಾಲಂ ಸೇರಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಈ ಕಾಲಂ ಅನ್ನು ಸಿದ್ದರಾಮಯ್ಯಗಾಗಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಜನರ ಭಾವನೆ ಮುಖ್ಯ
ಭಾರತ - ಪಾಕ್ ನಡುವೆ ಇಂದು ಕ್ರಿಕೆಟ್ ಮ್ಯಾಚ್ ನಡೆಯುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಹಲ್ಗಾಮ್ ಹತ್ಯಾಕಾಂಡ, ಆಪರೇಷನ್ ಸಿಂದೂರ, ಭಾರತ ಬಗ್ಗೆ ಪಾಕ್ ಹೇಳಿಕೆಗಳನ್ನು ಪರಿಗಣಿಸಬೇಕು. ಇದೆಲ್ಲದರ ಹಿನ್ನೆಲೆಯಲ್ಲಿ ಈ ಮ್ಯಾಚ್ ಅನ್ನು ನಡೆಸದಿದ್ದರೆ ಚೆನ್ನಾಗಿತ್ತು. ಕ್ರೀಡೆ ಇರಬೇಕು, ಆದರೆ ದೇಶ, ದೇಶದ ಜನರ ಭಾವನೆ ಬಹಳ ಮುಖ್ಯ ಬಿಸಿಸಿಐ ದೇಶದ ಜನರ ಭಾವನೆಗಳಿಗೆ ತಕ್ಕ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.
ಹೆಚ್ಚಿನ ಪರಿಹಾರ ಕೊಡಲಿ
ಹಾಸನ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು. ಹಿಂದೆ ನಡೆದ ಹಲವು ಪ್ರಕರಣಗಳಲ್ಲಿ ಇದೇ ಸಿಎಂ ಹೆಚ್ಚು ಪರಿಹಾರ ಕೊಟ್ಟಿದ್ದಾರೆ. ಹಾಸನದಲ್ಲಿ ಸತ್ತವರು ಅಮಾಯಕರು, ಯುವಕರು ಅವರ ಕುಟುಂಬಗಳು ಕಷ್ಟದಲ್ಲಿದ್ದಾರೆ, ಇದೆಲ್ಲ ನೋಡಿಕೊಂಡು ಹೆಚ್ಚು ಪರಿಹಾರ ಕೊಡಲಿ. ದಾಖಲೆ ಪ್ರಮಾಣದ ಪರಿಹಾರವನ್ನು ಸಿಎಂ ಕೊಡಬೇಕು ಎಂದು ಆಗ್ರಹಿಸಿದರು.
ಎಸ್‌ಐಟಿ ಮೇಲೆ ರಾಜಕೀಯ ಒತ್ತಡ
ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಮಾಡಿದವರನ್ನು ಮುಟ್ಟದಂತೆ ಎಸ್‌ಐಟಿ ಮೇಲೆ ರಾಜಕೀಯ ಒತ್ತಡ ಇದೆ. ನಿರೀಕ್ಷೆಗೆ ತಕ್ಕಂತೆ ಎಸ್ಐಟಿ ತನಿಖೆ ನಡೆಯುತ್ತಿಲ್ಲ. ಪೊಲೀಸ್ ಪದ್ಧತಿ ಪ್ರಕಾರ ತನಿಖೆ ನಡೆಯುತ್ತಿಲ್ಲ ಎಂದು ಹೇಳಿದರು.
ಮಾಸ್ಕ್ ಮ್ಯಾನ್‌ನ ದೂರು ಹುಸಿಯಾದ ನಂತರ ಬೇರೆ ಬೇರೆ ದೂರುಗಳು ದಾಖಲಾಗುತ್ತಿವೆ. ಎಸ್ಐಟಿಗೆ ಉತ್ತರದಾಯಿತ್ವ ಇದೆ, ಜವಾಬ್ದಾರಿ ಇದೆ. ಶೀಘ್ರದಲ್ಲೇ ವರದಿ ಕೊಡಲಿ, ಇದುವರೆಗೆ ಆಗಿರುವ ತನಿಖೆ ಬಗ್ಗೆ ವರದಿ ಕೊಡಲಿ ಎಂದು ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ | Caste Census: ರಾಜ್ಯದಲ್ಲಿ ಸೆ.22ರಿಂದ ಅ.7ರವರೆಗೆ ಹೊಸ ಜಾತಿಗಣತಿ, 1.75 ಲಕ್ಷ ಶಿಕ್ಷಕರ ನೇಮಕ: ಸಿಎಂ ಸಿದ್ದರಾಮಯ್ಯ
ಎಸ್ಐಟಿಯವರು ಷಡ್ಯಂತ್ರ ಮಾಡಿದ ಮುಖ್ಯ ವ್ಯಕ್ತಿಗಳನ್ನೇ ಇನ್ನೂ ಮುಟ್ಟಿಲ್ಲ. ಎಸ್ಐಟಿಯವರು ನಮ್ಮನ್ನು ಮುಟ್ಟಲ್ಲ ಅಂತ ಅವರಿಗೂ ಖಾತ್ರಿ ಆಗಿದೆ, ಅದಕ್ಕಾಗಿಯೇ ಅವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹೊಸ ಹೊಸ ದೂರುಗಳು ಬರುತ್ರಿವೆ, ಅವುಗಳನ್ನೂ ತನಿಖೆ ಮಾಡುತ್ತಿದ್ದಾರೆ. ಎಸ್‌ಐಟಿಗೆ ಷಡ್ಯಂತ್ರ ಮಾಡಿದವರನ್ನು ಮುಟ್ಟಬೇಡಿ ಅನ್ನುವ ರಾಜಕೀಯ ಒತ್ತಡ ಇದೆ. ಅದಕ್ಕಾಗಿ ಇನ್ನೂ ಯಾರನ್ನೂ ಬಂಧಿಸದೇ ವಿಚಾರಣೆ ಮಾತ್ರ ಮಾಡುತ್ರಿದೆ ಎಸ್ಐಟಿ ಇಲ್ಲಿವರೆಗೆ ಆಗಿರುವ ತನಿಖೆ ಬಗ್ಗೆ ವರದಿಯನ್ನು ಎಸ್ಐಟಿ ಕೊಡಲಿ ಎಂದು ಹೇಳಿದರು.