Anti Immigration Rally: ಅತ್ತ ನೇಪಾಳ ಹೊತ್ತಿ ಉರಿಯುತ್ತಿದ್ದರೆ... ಇತ್ತ ಲಂಡನ್ ಧಗ ಧಗಿಸುತ್ತಿದೆ!
ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ ನೇತೃತ್ವದಲ್ಲಿ ಲಂಡನ್ ನಲ್ಲಿ ಶನಿವಾರ ನಡೆದ ಬೃಹತ್ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಸುಮಾರು 1,10,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಈ ಪ್ರತಿಭಟನೆಯ ವೇಳೆ ಪೊಲೀಸರು ತಮ್ಮನ್ನು ವಿಂಗಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದರು. ಈ ವೇಳೆ 26 ಮಂದಿ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.

-

ಲಂಡನ್: ತೀವ್ರ ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ (Activist Tommy Robinson) ನೇತೃತ್ವದಲ್ಲಿ ಆಯೋಜಿಸಿದ್ದ ವಲಸೆ ವಿರೋಧಿ ಬೃಹತ್ ಪ್ರತಿಭಟನೆ (Anti Immigration Rally) ಹಿಂಸಾತ್ಮಕ ರೂಪತಾಳಿದ ಘಟನೆ ಶನಿವಾರ ಮಧ್ಯ ಲಂಡನ್ (London) ನಲ್ಲಿ ನಡೆದಿದೆ. ಸುಮಾರು 1,10,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ರಾಲಿಯ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ಉಂಟಾಗಿದ್ದು, 26 ಮಂದಿ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 25 ಮಂದಿಯನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರನ್ನು ಪೊಲೀಸರು ಬೇರ್ಪಡಿಸಲು ಪ್ರಯತ್ನಿಸಿದ್ದು ಈ ಘರ್ಷಣೆಗೆ ಕಾರಣ ಎನ್ನಲಾಗಿದೆ.
ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ ಅವರ ನೇತೃತ್ವದಲ್ಲಿ ಶನಿವಾರ ಲಂಡನ್‌ನಲ್ಲಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಸುಮಾರು 1,10,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ವೇಳೆ ಅವರ ಬೆಂಬಲಿಗರ ಒಂದು ಸಣ್ಣ ಗುಂಪು ಪ್ರತಿಭಟನಕಾರರಿಂದ ತಮ್ಮನ್ನು ಬೇರ್ಪಡಿಸುತ್ತಿದ್ದ ಪೊಲೀಸ್ ಅಧಿಕಾರಿಗಳೊಂದಿಗೆ ಘರ್ಷಣೆ ಇಳಿದಿದೆ. ಇದರಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದೆ.
ಮೆರವಣಿಗೆ ವೇಳೆ ಪ್ರತಿಭಟನಾಕಾರರು ಪೊಲೀಸರ ಮೇಲೆ ಬಾಟಲಿಗಳನ್ನು ಎಸೆದರು, ಒದ್ದು ಹೊಡೆದರು. ಈ ಸಂದರ್ಭದಲ್ಲಿ 1,000ಕ್ಕೂ ಹೆಚ್ಚು ಅಧಿಕಾರಿಗಳ ರಕ್ಷಣೆಗಾಗಿ ಹೆಲ್ಮೆಟ್, ಗುರಾಣಿಗಳನ್ನು ಒದಗಿಸಲಾಯಿತು ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ 26 ಮಂದಿ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಕೆಲವು ಪೊಲೀಸ್ ಅಧಿಕಾರಿಗಳ ಹಲ್ಲು, ಮೂಗು ಮುರಿದಿವೆ, ಬೆನ್ನು ಮೂಳೆಗೆ ಗಾಯಗವಾಗಿವೆ. ಪ್ರಕರಣಕ್ಕೆ ಸಂಬಂಧಿಸಿ ಸುಮಾರು 25 ಮಂದಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫುಟ್ಬಾಲ್ ಪಂದ್ಯಗಳು, ಸಂಗೀತ ಕಚೇರಿಗಳು ಸೇರಿದಂತೆ ಇತರ ಪ್ರಮುಖ ಕಾರ್ಯಕ್ರಮಗಳ ಜೊತೆಗೆ ಪ್ರತಿಭಟನೆಗಳನ್ನು ನಿಯಂತ್ರಿಸಲು ರಾಜಧಾನಿಯಾದ್ಯಂತ 1,600ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಈ ಘಟನೆಯನ್ನು ಸಹಾಯಕ ಆಯುಕ್ತ ಮ್ಯಾಟ್ ಟ್ವಿಸ್ಟ್ ಖಂಡಿಸಿದ್ದಾರೆ. ಪ್ರತಿಭಟನಾಕಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅವರಲ್ಲಿ ಕೆಲವರು ಹಿಂಸಾಚಾರವನ್ನು ನಡೆಸಿದ್ದಾರೆ. ಅಧಿಕಾರಿಗಳನ್ನು ನಿಂದಿಸುತ್ತಿದ್ದರು, ಹೊಡೆಯುತ್ತಿದ್ದರು, ಪೊಲೀಸರು ಹಾಕಿದ್ದ ತಡೆಬೇಲಿಯನ್ನು ಮುರಿಯಲು ಪ್ರಯತ್ನಿಸುತ್ತಿದ್ದರು ಎಂದು ಅವರು ಹೇಳಿದರು.
ಈ ಮೆರವಣಿಗೆಯಲ್ಲಿ ಸುಮಾರು 1,10,000 ರಿಂದ 1,50,000 ಮಂದಿ ಭಾಗವಹಿಸಿದ್ದರು. ಇದು ಯುಕೆಯಲ್ಲಿ ಇತ್ತೀಚೆಗೆ ನಡೆದಿರುವ ಅತಿದೊಡ್ಡ ಬಲಪಂಥೀಯ ಸಭೆ. ಇದನ್ನು ಸಂಘಟಕರು "ಯುನೈಟ್ ದಿ ಕಿಂಗ್ಡಮ್" ಎಂದು ಕರೆದಿದ್ದಾರೆ.
ಇದನ್ನೂ ಓದಿ: Viral Video: ಆಕಾಶದಲ್ಲಿ ತೇಲಾಡಿದ ವಿಚಿತ್ರ ಆಕೃತಿ! ವೈರಲಾಗ್ತಿರುವ ವಿಡಿಯೊ ನೋಡಿ ಜನ ಫುಲ್ ಶಾಕ್
ಈ ಪ್ರತಿಭಟನೆಗೆ ಯುರೋಪಿನಾದ್ಯಂತ ಬಲಪಂಥೀಯರಿಂದ ಬೆಂಬಲ ವ್ಯಕ್ತವಾಗಿದೆ. ಫ್ರೆಂಚ್ ರಾಜಕಾರಣಿ ಎರಿಕ್ ಜೆಮ್ಮೌರ್ ಅವರು ಇದು ಯುರೋಪಿಯನ್ ನ ಮಹಾ ಬದಲಾವಣೆಯ ಪ್ರತೀಕ ಎಂದು ಹೇಳಿದರು.