ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Navaratri 2025: ನವರಾತ್ರಿಯ ಮೊದಲ ದಿನ: ಶೈಲ ಪುತ್ರಿಯನ್ನು ಏಕೆ ಪೂಜಿಸಲಾಗುತ್ತದೆ?

ಹಿಂದೂಗಳ ಪ್ರಮುಖ ಹಬ್ಬ ನವರಾತ್ರಿಯನ್ನು ದೇಶಾದ್ಯಂತ ಒಂಬತ್ತು ದಿನಗಳ ಕಾಲ ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಈ ಒಂಬತ್ತು ದಿನಗಳ ದೇವಿ ಪಾರ್ವತಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಪ್ರತಿಯೊಂದು ದಿನದ ಪೂಜೆಗೂ ಅತ್ಯಂತ ವಿಶೇಷ ಕಾರಣಗಳೂ ಇವೆ. ಇದರಲ್ಲಿ ಮೊದಲ ದಿನ ಶೈಲಪುತ್ರಿಯನ್ನು ಏಕೆ ಪೂಜಿಸಲಾಗುತ್ತದೆ ಗೊತ್ತೆ?

ಬೆಂಗಳೂರು: ಶಕ್ತಿ ಸ್ವರೂಪಿಣಿ ಪಾರ್ವತಿ ದೇವಿಯ (Parvati devi) ಒಂಬತ್ತು ರೂಪಗಳನ್ನು ಒಂಬತ್ತು ದಿನಗಳ ಕಾಲ ಪೂಜಿಸುವ ಅತ್ಯಂತ ವೈಭವದ ಹಬ್ಬ ನವರಾತ್ರಿ (Navaratri 2025). ಕರ್ನಾಟಕದಲ್ಲಿ ಇದನ್ನು ದಸರಾ (Dasara) ಎನ್ನಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು ರಾತ್ರಿಗಳು ಎಂದರ್ಥ. ಹಿಂದು ಪಂಚಾಂಗದ ಆಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುವ ಈ ಹಬ್ಬದ ಮೊದಲ ದಿನ ಶೈಲಪುತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಈ ದಿನ ಶೈಲ ಪುತ್ರಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸು ದೊರೆಯುತ್ತದೆ ಎನ್ನುವ ನಂಬಿಕೆ ಇದೆ.

ಹಿನ್ನೆಲೆ

ಪರ್ವತ ರಾಜ ಹಿಮವಂತನ ಪುತ್ರಿಯಾದ ಶೈಲಪುತ್ರಿಯು ದಕ್ಷನ ಮಗಳಾದ ದೇವಿ ಸತಿಯ ಪುನರ್ಜನ್ಮ ಎನ್ನಲಾಗುತ್ತದೆ. ನಂದಿ ಮೇಲೆ ಕುಳಿತಿರುವ ಇವಳು ಒಂದು ಕೈಯಲ್ಲಿ ತ್ರಿಶೂಲ, ಇನ್ನೊಂದು ಕೈಯಲ್ಲಿ ಕಮಲವನ್ನು ಹಿಡಿದುಕೊಂಡಿದ್ದಾಳೆ. ಭಕ್ತರಿಗೆ ಶಕ್ತಿ, ಧೈರ್ಯ ಮತ್ತು ಯಶಸ್ಸನ್ನು ನೀಡುವ ದೇವಿ ಎಂದು ನಂಬಲಾಗುತ್ತದೆ.

ಶೈಲಮ್ ಎಂದರೆ ಮಾಣಿಕ್ಯ, ರತ್ನ ಮತ್ತಿತರ ಅಮೂಲ್ಯ ರತ್ನಗಳಿರುವ ಪರ್ವತ. ಬದುಕಿನಲ್ಲಿ ಅತ್ಯಮೂಲ್ಯ ವಸ್ತುಗಳ ನೋಡಿ ಆಕರ್ಷಿತಗೊಳ್ಳದೆ ಎಲ್ಲವನ್ನೂ ತ್ಯಾಗ ಮಾಡಿ ಆತ್ಮಜ್ಞಾನವನ್ನು ಪಡೆದವಳೇ ಶೈಲಪುತ್ರಿ.

ಆರಾಧನೆಯಿಂದ ಏನು ಫಲ?

ಜೀವನದಲ್ಲಿ ಎದುರಾಗುವ ತೊಂದರೆಗಳನ್ನು ಶೈಲಪುತ್ರಿ ದೂರ ಮಾಡುತ್ತಾಳೆ ಎನ್ನುವ ನಂಬಿಕೆ ಇದೆ. ವಿಶೇಷವಾಗಿ ನವರಾತ್ರಿಯ ಮೊದಲ ದಿನ ಈಕೆಯನ್ನು ಪೂಜಿಸುವುದರಿಂದ ಎಲ್ಲಾ ರೋಗ ಮತ್ತು ದುಃಖಗಳು ನಿವಾರಣೆಯಾಗುವುದು. ಮೋಕ್ಷವನ್ನು ಕರುಣಿಸುವ ದೇವಿಯಾದ್ದರಿಂದ ಇವಳನ್ನು ಪೂಜಿಸುವುದರಿಂದ ಯಶಸ್ಸು ದೊರೆಯುತ್ತದೆ.

ಶೈಲಪುತ್ರಿ ದೇವಿಯನ್ನು ಪೂಜಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಶೈಲಪುತ್ರಿಯನ್ನು ಆರಾಧಿಸುವವರು ನವರಾತ್ರಿಯ ಮೊದಲ ದಿನ ಘಟಸ್ಥಾಪನೆ ಮಾಡಿ ಕಲಶದಲ್ಲಿ ಜವೆಗೋಧಿಯನ್ನು ಬಿತ್ತುತ್ತಾರೆ. ಇದು ಜೀವನದಲ್ಲಿ ಸಮೃದ್ಧಿ ಮತ್ತು ಹೊಸತನದ ಪ್ರತೀಕವಾಗಿದೆ. ಇದು ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.

ಭಾರತದಲ್ಲಿರುವ ಶೈಲಪುತ್ರಿಯ ದೇವಾಲಯ

ಶೈಲಪುತ್ರಿಯ ಹಲವು ದೇವಾಲಯಗಳು ಭಾರತದಲ್ಲಿವೆ. ಇದರಲ್ಲಿ ಪ್ರಮುಖವಾದವುಗಳೆಂದರೆ ವಾರಣಾಸಿ ಮತ್ತು ಬಾರಾಮುಲ್ಲಾದಲ್ಲಿರುವ ಆರಾಧನಾ ಕ್ಷೇತ್ರ. ವಾರಣಾಸಿಯ ಮರ್ಹಿಯಾ ಘಾಟ್‌ನಲ್ಲಿ ದೇವಿಗೆ ಬಳೆ, ಕುಂಕುಮ, ಮತ್ತು ಸಿಂಧೂರವನ್ನು ಸಮರ್ಪಿಸಿ ಪೂಜಿಸಲಾಗುತ್ತದೆ. ಇದರಿಂದ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: World One Family Mission: ಸದ್ಗುರು ಶ್ರೀ ಮಧುಸೂದನ್ ಸಾಯಿ ನೇತೃತ್ವದ ‘ಒಂದು ಜಗತ್ತು ಒಂದು ಕುಟುಂಬ' ವತಿಯಿಂದ ನವರಾತ್ರಿ ಉತ್ಸವ

ಜಮ್ಮು ಮತ್ತು ಕಾಶ್ಮೀರದಲ್ಲಿರುವ ಶೈಲಪುತ್ರಿ ದೇವಾಲಯದ ಶತಮಾನಗಳ ಹಿಂದಿನದು. ಈ ದೇವಾಲಯವನ್ನು ಕಾಶ್ಮೀರಿ ರಾಜ ಅಶೋಕ ನ ಕಾಲದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಕಾಶ್ಮೀರದ ಸಾಂಸ್ಕೃತಿಕ ಪರಂಪರೆಯಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.

ವಿದ್ಯಾ ಇರ್ವತ್ತೂರು

View all posts by this author