- ಸದ್ಗುರು ಶ್ರೀ ಮಧುಸೂದನ ಸಾಯಿ
ಸಮಾಜದಲ್ಲಿ ಬಹಳಷ್ಟು ಜನರು ದೇವರ ಕುರಿತಾಗಿ ಯೋಚಿಸದೆ, ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುವುದು ಕಂಡುಬರುತ್ತದೆ. ಜನರಿಗೆ ಮಾರ್ಗದರ್ಶನ ಸಿಗಬೇಕು ಎನ್ನುವ ಉದ್ದೇಶದಿಂದಲೇ ನಾವು ‘ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಮ್’ ವಿದ್ಯಾಸಂಸ್ಥೆಗಳನ್ನು ನಿರ್ಮಿಸಿದ್ದೇವೆ. ಮಕ್ಕಳು ಮತ್ತು ಶಿಕ್ಷಕರು ದೇವರಿಗೆ ಹತ್ತಿರವಾಗುತ್ತಾರೆ ಎನ್ನುವುದು ವಿದ್ಯಾಸಂಸ್ಥೆಗಳನ್ನು ರೂಪಿಸುವ ಹಿಂದಿರುವ ಉದ್ದೇಶ. ಅದೇ ರೀತಿ ಆಸ್ಪತ್ರೆಗಳನ್ನು ಏಕೆ ನಿರ್ಮಿಸಬೇಕಾಗಿತ್ತು ಎನ್ನುವ ಪ್ರಶ್ನೆಗೆ ‘ರೋಗಿಗಳು ಮತ್ತು ವೈದ್ಯರು ದೇವರಿಗೆ ಹತ್ತಿರವಾಗುತ್ತಾರೆ’ ಎನ್ನುವ ಉತ್ತರ ಸಿಗಬಹುದು (Spoorthivani Column). ಅನ್ನಪೂರ್ಣಾ (ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಬೆಳಗಿನ ಉಪಾಹಾರವನ್ನು ಪೂರೈಸುವುದು) ಸೇವೆಯನ್ನು ಅಥವಾ ಯಾವುದೇ ಸೇವಾ ಕಾರ್ಯವನ್ನು ಏಕೆ ಹಮ್ಮಿಕೊಳ್ಳಬೇಕಾಗುತ್ತದೆ?
ಹೌದು, ಆಹಾರವು ಮಕ್ಕಳ ಹೊಟ್ಟೆಯನ್ನು ತುಂಬಿಸುತ್ತದೆ. ಆದರೆ ಈ ಸೇವೆಯ ಉದ್ದೇಶವು ಅದೊಂದೇ ಅಲ್ಲ. ಮಕ್ಕಳಿಗೆ ಆಹಾರವನ್ನು ಕೊಡುವುದರ ಜೊತೆಗೇ ‘ದೇವರು ನಮಗೆ ಆಹಾರವನ್ನು ಕೊಡುತ್ತಿದ್ದಾನೆ, ಆದ್ದರಿಂದ, ನಾವು ಅವನಿಗೆ ಋಣಿಯಾಗಿರಬೇಕು. ನಾವು ಅವನೊಂದಿಗೆ ಪ್ರೇಮಭಾವನೆಯನ್ನು ಬೆಳೆಸಿಕೊಳ್ಳಬೇಕು’ ಎಂದು ಯೋಚಿಸುವ ಹಾಗೆ ಮಾಡಲು ಬಯಸುತ್ತೇವೆ. ಮಕ್ಕಳು ಇಂಥ ವಿಚಾರಗಳನ್ನು ಬೆಳೆಸಿಕೊಳ್ಳಬೇಕು. ಸೇವೆಗಳ ಹಿಂದಿರುವ ಉದ್ದೇಶವೇ ಇದು.
ಮಕ್ಕಳು ಸಣ್ಣವರಿರುವಾಗ ದೇವರು ತಮ್ಮಿಂದ ದೂರವಿದ್ದಾನೆ ಎಂದು ತಿಳಿದು ಅಳುತ್ತಾರೆ. ಆದರೆ ಅವರು ದೊಡ್ಡವರಾದ ಕೂಡಲೇ, ತನ್ನ ಭಕ್ತರಾಗಿಯೂ ತನ್ನಿಂದ ಅವರು ದೂರವಾಗಿದ್ದಾರಲ್ಲ ಎಂದು ದೇವರು ಬೇಸರಪಟ್ಟುಕೊಳ್ಳುತ್ತಾನೆ. ದೇವರು ಅವರಿಗೆ ಏನು ಮಾಡಿದರೂ, ಅವನ ಪ್ರೇಮದ ಆಳವನ್ನು ತಿಳಿದುಕೊಳ್ಳಲು ನಾವು ವಿಫಲರಾಗುತ್ತೇವೆ. ನಮ್ಮ ಕೃತಿಯಿಂದಾಗಿ ಅವನು ಬೇಸರಿಸಿಕೊಳ್ಳುವಂತೆ ನಾವು ಎಂದಿಗೂ ನಡೆದುಕೊಳ್ಳಬಾರದು. ಇದನ್ನು ಎಲ್ಲರೂ ಅರಿಯಬೇಕು. ದೇವರನ್ನು ಹೇಗೆ ಸುಪ್ರೀತಗೊಳಿಸುವುದು ಮತ್ತು ಅವನ ಹತ್ತಿರಕ್ಕೆ ಹೇಗೆ ಹೋಗುವುದು ಎಂಬುದನ್ನು ಕಲಿಯುವುದೇ ನಿಜವಾದ ವಿದ್ಯೆ. ಈ ರೀತಿಯ ವಿದ್ಯೆಯನ್ನು ಬೋಧಿಸುವ ದೃಷ್ಟಿಯಿಂದಲೇ ನಾವು ನಮ್ಮ ವಿದ್ಯಾಸಂಸ್ಥೆಗಳನ್ನು ನಿರ್ಮಿಸಿದ್ದೇವೆ. ಇವುಗಳಲ್ಲಿ ಇಂಥ ವಿಚಾರವುಳ್ಳ ಶಿಕ್ಷಕರೇ ಇದ್ದು ಈ ವಿಧದ ವಿದ್ಯೆಯನ್ನು ಬೋಧಿಸುತ್ತಿದ್ದಾರೆ. ಇದರ ಹೊರತಾಗಿರುವ ಎಲ್ಲ ವಿದ್ಯೆಗಳು ಕೇವಲ ಪುಸ್ತಕಗಳಿಂದ, ವಾಚನಾಲಯಗಳಿಂದ, ಕಂಪ್ಯೂಟರುಗಳಿಂದ, ಅಂತರ್ಜಾಲಗಳಿಂದ ಪಡೆಯಬಹುದಾದಂಥ ಮಾಹಿತಿಗಳಷ್ಟೇ ಆಗಿರುತ್ತವೆ. ಅಂಥವುಗಳಿಗೆ ತುಂಬಾ ಕಡಿಮೆ ಮೌಲ್ಯವಿರುತ್ತದೆ. ಕೇವಲ ಇಂಥ ಮಾಹಿತಿಗಳನ್ನು ಕೊಡಲು ಮಾತ್ರ ನಾವು ಈ ಸಂಸ್ಥೆಗಳನ್ನು ಸ್ಥಾಪಿಸಿಲ್ಲ.
ಈ ಸುದ್ದಿಯನ್ನೂ ಓದಿ: Spoorthi Vani: ಈ ಜಗತ್ತಿನಲ್ಲಿ ಎಲ್ಲವೂ ಪ್ರತಿಫಲನ, ಪ್ರತಿಕ್ರಿಯೆ ಹಾಗೂ ಪ್ರತಿಧ್ವನಿಯೇ ಆಗಿದೆ
ನೀವು ದೇಹ ತ್ಯಜಿಸಿ ಬೇರೆ ಲೋಕಕ್ಕೆ ಹೋದಾಗ, ಚಿತ್ರಗುಪ್ತನು (ಯಮನ ಕಾರ್ಯದರ್ಶಿ) ನಿಮಗೆ ಏನೆಂದು ಪ್ರಶ್ನಿಸುತ್ತಾನೆ. ‘ಎಷ್ಟು ಪದವಿಗಳನ್ನು ನೀನು ಸಂಪಾದಿಸಿದ್ದೀಯಾ?’ ಎಂದು ಕೇಳುತ್ತಾನೆಯೇ. ನೀನು ಬಿಎಸ್‌ಸಿ, ಎಂಎಎಸ್‌ಸಿ, ಪಿಎಚ್‌ಡಿ … ಇವುಗಳಲ್ಲಿ ಏನು ಮಾಡಿದ್ದೀಯಾ ಎಂದು ಕೇಳುವುದಿಲ್ಲ. ಎಷ್ಟು ಪತ್ರಿಕೆಗಳಲ್ಲಿ ಎಷ್ಟು ಲೇಖನಗಳನ್ನು ಪ್ರಕಟಿಸಿದ್ದೀಯಾ ಎಂದು ಕೇಳುವುದಿಲ್ಲ ಅಥವಾ ಎಷ್ಟು ಪ್ರಶಸ್ತಿಗಳು, ಪುರಸ್ಕಾರಗಳು ನಿನಗೆ ಬಂದಿವೆ ಎಂದೂ ಕೇಳುವುದಿಲ್ಲ. "ನೀನು ಮಾಡಿರುವ ಒಳ್ಳೆಯ ಕೆಲಸಗಳೇನು? ಎಷ್ಟು ಜನರಿಗೆ ಸಹಾಯ ಮಾಡಿದ್ದೀಯಾ? ನೀನು ಎಂಥವನು? ಎಂದು ನನಗೆ ಹೇಳು" ಎಂದು ಮಾತ್ರ ಕೇಳಿಯೇ ಕೇಳುತ್ತಾನೆ.
ಈ ಮಾಪಕಗಳಿಂದ ಮಾತ್ರ ಅವನು ನಿಮ್ಮ ವ್ಯಕ್ತಿತ್ವವನ್ನು ಅಳೆಯುತ್ತಾನೆ. ಯಾರನ್ನೂ ಅವನು ಅವರು ಕಟ್ಟಿರುವ ಮನೆಗಳ ಆಧಾರದ ಮೇಲೆ, ಅವರು ಗಳಿಸಿರುವ ಸಂಪತ್ತಿನ ಆಧಾರದ ಮೇಲೆ, ಅವನು ಎಷ್ಟು ದೇಶಗಳಲ್ಲಿ ಆಡಳಿತ ನಡೆಸಿದ್ದಾನೆ ಎಂಬುದರ ಆಧಾರದ ಮೇಲೆ ಅವರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಆದ್ದರಿಂದಲೇ ಈ ಬಾಹ್ಯ ಜಗತ್ತಿನ ಮೋಹಪಾಶದಲ್ಲಿ ಬೀಳಬೇಡಿರಿ. ಇವೆಲ್ಲ ನಿಮಗೆ ಈ ಜಗತ್ತಿನಲ್ಲಿ ನೀವು ಬದುಕಿಕೊಂಡಿರಲು ಮಾತ್ರ ಅಗತ್ಯವಾಗಿವೆ; ಇದಕ್ಕಿಂತ ಮಿಗಿಲಾದ ಮೌಲ್ಯ ಅವುಗಳಿಗೆ ಇರುವುದಿಲ್ಲ. ಆದ್ದರಿಂದ, ನಿಮ್ಮ ಮಾತು, ಯೋಚನೆ ಮತ್ತು ಕೃತಿಗಳ ಕುರಿತು ನಿಮಗೆ ಎಚ್ಚರವಿರಲಿ. ವಿದ್ಯಾಸಂಸ್ಥೆಗಳಲ್ಲಿ ಇವುಗಳನ್ನು ನೀವು ಪಾಲಿಸಿದರೆ, ಮುಂದೆ ಅವು ನಿಮ್ಮ ಜೀವನದಲ್ಲಿ ಶಾಶ್ವತವಾಗಿ ಉಳಿಯುತ್ತವೆ.
ಕ್ರಾಂತಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ಅನುಭಾವಿಗಳು ಮತ್ತು ಸಮಾಜ ಸುಧಾರಕರು - ಹೀಗೆ ಹಲವಾರು ಜನರು ಈ ಜಗತ್ತಿನಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರು. ಆದರೆ, ಇವರಲ್ಲಿ ಯಾರೂ ಯಶಸ್ವಿಯಾಗಲಿಲ್ಲ. ನಾವೂ ಕೂಡ ಪ್ರಯತ್ನಿಸಿ ವಿಫಲರಾದರೆ, ಅದಕ್ಕಿಂತ ಬೇರೆ ದುರ್ದೈವ ಇನ್ನೊಂದಿಲ್ಲ. ಮನುಷ್ಯರನ್ನು ಪರಿವರ್ತಿಸಬೇಕು ಎನ್ನುವ ಗುರಿಯನ್ನು ತಲುಪಲು ನಾವೇನು ಮಾಡುತ್ತಿದ್ದೇವೋ ಅದರಲ್ಲಿ ಯಶಸ್ಸು ಸಾಧಿಸುವುದು ನಮಗೆ ಅತ್ಯಗತ್ಯ. ಅದನ್ನು ನಾವು ಹೇಗೆ ಮಾಡಬಹುದು? ಮೊದಲು ನಮ್ಮನ್ನು ನಾವೇ ಪರಿವರ್ತಿಸಿಕೊಳ್ಳಬೇಕು. ನಾವು ದೇವರಿಗೆ ಪ್ರಿಯವಾಗುವ ಹಾಗೆ ನಡೆದುಕೊಂಡರೆ, ಉಳಿದವರು ಅದನ್ನೇ ನೋಡಿ ಕಲಿಯಲು ಸ್ಫೂರ್ತಿ ಹೊಂದುತ್ತಾರೆ.
ನಾವು ಮುಂಚೂಣಿಯಲ್ಲಿದ್ದು ದಾರಿ ತೋರಿಸಬೇಕು. ಆದ್ದರಿಂದ, 'ನಾವು ಏನು ಯೋಚಿಸುತ್ತೋ, ಮಾತನಾಡುತ್ತೇನೋ, ಕೆಲಸ ಮಾಡುತ್ತೇನೋ, ಅದು ದೇವರಿಗೆ ಮೆಚ್ಚುಗೆಯಾಗುವಂತೆ ಇರಬೇಕು‘ ಎಂಬ ಯೋಚನೆಯು ನಿಮ್ಮ ಗಮನದಿಂದ ದೂರಾಗಬಾರದು. ಈ ಯೋಚನೆಯನ್ನೇ ನಿಮ್ಮ ಮನಸ್ಸಿನ ಮುಖ್ಯಭಾಗವಾಗಿರಿಸಿಕೊಂಡು, ಪ್ರತಿನಿಮಿಷವೂ ನೀವು ಜೀವಿಸಿದ್ದಾದರೆ, ನಿಮಗೆ ಸಿಗುವ ಪ್ರಯೋಜನೆಗಳಿಗೆ ಲೆಕ್ಕವೇ ಇರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಜೀವನವು ಶಾಂತಮಯವಾಗುತ್ತದೆ. ನಿಮ್ಮಿಂದಾಗಿ ಇನ್ನೂ ಹಲವಾರು ಜನರು ನಿಮ್ಮಂತೆಯೇ ಸಂತೋಷವನ್ನು ಮತ್ತು ಶಾಂತಿಯನ್ನು ಹೊಂದುತ್ತಾರೆ. ಈ ವಿದ್ಯೆಯು ಅಷ್ಟು ಮುಖ್ಯವಾದುದು.
ಶ್ರೀರಾಮಚಂದ್ರ ಪ್ರಭು ಹೇಳಿದಂತೆ,
ಸಕೃದ್ ಏವ ಪ್ರಪನ್ನಾಯ ತವಾಸ್ಮಿ ಇತಿ ಚ ಯಾಚತೆ |
ಅಭಯಂ ಸರ್ವ ಭೂತೇಭ್ಯೋ ದದಾಮಿ ಏತದ್ ವ್ರತಂ ಮಮ ||
(ವಾಲ್ಮೀಕಿ ರಾಮಾಯಣ 6.18.33) (ಯಾರೇ ಆಗಲಿ ಒಂದು ಸಲ, 'ನಾನು ನಿನ್ನವನು' ಎಂದು ಹೇಳುತ್ತ, ನನಗೆ ಸಂಪೂರ್ಣ ಶರಣಾಗಿ, ನನ್ನ ಆಶ್ರಯವನ್ನು ಕೋರುತ್ತಾನೋ, ಅವನನ್ನು ನಾನು ಎಲ್ಲ ಜೀವಿಗಳ ಭಯದಿಂದ ರಕ್ಷಿಸುತ್ತೇನೆ. ಇದು ನನ್ನ ಪ್ರತಿಜ್ಞೆ).
ನೀವು ಕೇವಲ ಒಂದೇ ಒಂದು ಸಲ, ಹೃದಯದಾಳದಿಂದ, 'ಪ್ರಭೂ, ನಾನು ನಿನ್ನವನು' ಎಂದು ಹೇಳಿದರೆ, ದೇವರು ನಿಮ್ಮ ಸಂಪೂರ್ಣ ಹೊಣೆಯನ್ನು ಹೊರುತ್ತಾನೆ. ನೀವು ಯಾವಾಗ ಹಾಗೆ ಹೇಳಿದ್ದೀರಿ, ಸಣ್ಣವರಿರುವಾಗಲೋ, ಯುವಕರಾಗಿರುವಾಗಲೋ ಅಥವಾ ವೃದ್ಧಾಪ್ಯದಲ್ಲಿರುವಾಗಲೋ - ಇವ್ಯಾವುದನ್ನೂ ನೋಡದೇ, ಯೋಚಿಸದೇ ದೇವರು ನಿಮ್ಮೊಂದಿಗಿದ್ದು ನಿಮ್ಮನ್ನು ರಕ್ಷಿಸುತ್ತಾನೆ. ನೀವು ಹೇಳಿದ್ದು ನಿಮಗೆ ಮರೆತಿರಬಹುದು. ಆದರೆ ಅವನು ಎಂದಿಗೂ ಮರೆಯುವುದಿಲ್ಲ. ಅವನು ನಿಮ್ಮ ಎಲ್ಲ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ವಹಿಸಿಕೊಂಡು ಜೀವನದುದ್ದಕ್ಕೂ ರಕ್ಷಿಸುತ್ತಾನೆ. ಇದಕ್ಕಾಗಿಯೇ ಭಜನೆಗಳನ್ನು ಹಾಡುವುದರೊಂದಿಗೆ ಭಕ್ತಿಯನ್ನು ವೃದ್ಧಿಸಿಕೊಳ್ಳುವುದು ತುಂಬಾ ಮುಖ್ಯ.
ನೀವು ನಿಮ್ಮ ಹೃದಯಾಂತರಾಳದ ಭಕ್ತಿಯೊಂದಿಗೆ ಸುಶ್ರಾವ್ಯವಾಗಿ ಭಜನೆಗಳನ್ನು ಹಾಡಿದರೆ, ನಿಮ್ಮಲ್ಲಿ ಸ್ವಾಮಿಗಾಗಿ ಆಳವಾದ ಪ್ರೇಮವು ಮೊಳಕೆಯೊಡೆಯುತ್ತದೆ. ನೀವು ಅವುಗಳನ್ನು ಕೇವಲ ಶಬ್ದಗಳಾಗಿ ಉಚ್ಚರಿಸದೇ, ನಿಮ್ಮ ಹೃದಯದಾಳದ ಭಾವನೆಯಾಗಿ, ಒಂದೇ ಒಂದು ಸಲವಾದರೂ ಅನುಭವಿಸಬೇಕು; ಆಗ ಮಾತ್ರ ದೇವರು ನಿಮ್ಮೊಂದಿಗೆ ನಿಮ್ಮ ಜೀವನದ ಕೊನೆಯವರೆಗೂ ಇರುತ್ತಾನೆ.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.