- ಸದ್ಗುರು ಶ್ರೀ ಮಧುಸೂದನ ಸಾಯಿ
ನಮ್ಮ ದಿನಚರಿಯ ಅತ್ಯಂತ ಶ್ರೇಷ್ಠವಾದ ಭಾಗವೆಂದರೆ, ಅದು ನಾವು ಮಕ್ಕಳೊಂದಿಗೆ ಕಳೆಯುವ ಕ್ಷಣಗಳು! ಏಕೆಂದರೆ, ಮಕ್ಕಳು ಪರಿಶುದ್ಧ ಹೃದಯದ ಮತ್ತು ಮುಗ್ಧ ಮನಸ್ಸಿನವರು. ಅವರ ಹೃದಯಗಳಲ್ಲಿ ಯಾವುದೇ ಬಯಕೆಗಳಿರುವುದಿಲ್ಲ. ಅವರೆಲ್ಲ ಸ್ವಾಮಿಗಾಗಿ ಸ್ವಾಮಿಯನ್ನೇ ಬಯಸುತ್ತಾರೆ; ಅವರು ಸ್ವಾಮಿಯೊಡನೆ ಬೇರೇನನ್ನೂ ಕೇಳುವುದಿಲ್ಲ. ಅದೇ ನಿಜವಾದ ಭಕ್ತಿ. ಅವರು ಈಗ ಬೆಳೆಸಿಕೊಂಡಿರುವ ಭಕ್ತಿಯನ್ನು ಅವರ ಜೀವನದುದ್ದಕ್ಕೂ ಉಳಿಸಿಕೊಂಡರೆ, ಅವರ ಹೆಸರುಗಳು ಇತಿಹಾಸದ ಪುಟಗಳಲ್ಲಿ ಕಲಿಯುಗದ ಗೋಪಿಕೆಯರೆಂದು ಅಚ್ಚಳಿಯದೆ ಉಳಿದುಬಿಡುತ್ತವೆ. ಜನರು ಕೇವಲ ದ್ವಾಪರಯುಗದ ಗೋಪಿಕೆಯರ ಕುರಿತು ಓದಿದ್ದಾರೆ ಮತ್ತು ಕೇಳಿದ್ದಾರೆ. ಆದರೆ ಅವರ ಈ ಮಕ್ಕಳನ್ನು ಇನ್ನೂ ನೋಡಿಯೂ ಇಲ್ಲ, ಅವರ ಬಗ್ಗೆ ಕೇಳಿಯೂ ಇಲ್ಲ.
ದೇವರ ಕುರಿತಾದ ಆಕಾಂಕ್ಷೆಯ ಹೊರತಾಗಿ ಯಾವುದೇ ಬೇರೆ ಬಯಕೆಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಡಿ. "ನಾನು ಯಾವಾಗಲೂ ಸ್ವಾಮಿಯ ಕುರಿತೇ ಯೋಚಿಸಬೇಕು. ಮಾತನಾಡಬೇಕು, ಸ್ವಾಮಿಯ ಕುರಿತೇ ಕೇಳಬೇಕು, ಸ್ವಾಮಿಗಾಗಿಯೇ ಕೆಲಸ ಮಾಡಬೇಕು, ಸ್ವಾಮಿಗಾಗಿಯೇ ಉಸಿರಾಡಬೇಕು, ಸ್ವಾಮಿಗಾಗಿಯೇ ನಿದ್ರಿಸಬೇಕು, ಸ್ವಾಮಿಗಾಗಿಯೇ ಆಹಾರ ಸೇವಿಸಬೇಕು, ಸ್ವಾಮಿಗಾಗಿಯೇ ನಡೆಯಬೇಕು, ಸ್ವಾಮಿಗಾಗಿಯೇ ನಿಲ್ಲಬೇಕು ಮತ್ತು ಕೂರಬೇಕು" ಎಂದು ಯಾವಾಗಲೂ ನಿಮಗೆ ನೀವೇ ಹೇಳಿಕೊಳ್ಳಬೇಕು.
ನೀವೇನೇ ಮಾಡಿದರೂ ಅದು ದೇವರಿಗೋಸ್ಕರವೇ ಆಗಿರಬೇಕು. ಒಮ್ಮೆ ನೀವು ಆ ವಿಧದ ಭಕ್ತಿಯನ್ನು ವೃದ್ಧಿಸಿಕೊಂಡರೆ, ನಿಮಗೆ ಎಂಥ ಸಮಾಧಾನ ಸಿಗುತ್ತದೆಯೆಂದರೆ, ಜಗತ್ತಿನ ಯಾವುದೇ ಆಮಿಷಗಳು, ಆಕರ್ಷಣೆಗಳು ನಿಮ್ಮನ್ನು ಬಾಧಿಸುವುದಿಲ್ಲ. ಯಾರಾದರೂ ನಿಮಗೆ ಒಂದು ಕೋಟಿ ರೂಪಾಯಿಗಳನ್ನು ಕೊಡುವ ಆಮಿಷವೊಡ್ಡಿದರೂ "ನೀವು ಈ ಕಾಗದದ ಚೂರುಗಳಿಂದ ನನ್ನನ್ನು ಖರೀದಿಸಲಾರಿರಿ; ಅವೆಲ್ಲ ನನಗೆ ಬೆಲೆಯಿಲ್ಲದ ಕಾಗದದ ಚೂರುಗಳು ಅಷ್ಟೇ" ಎಂದು ಅವರಿಗೆ ಮುಖದ ಮೇಲೆಯೇ ಹೇಳುತ್ತೀರಿ. ಯಾಕೆ ಹೀಗೆ? ಏಕೆಂದರೆ, ನೀವು ಈಗಾಗಲೇ ಒಂದು ಶ್ರೇಷ್ಠ ರುಚಿಯನ್ನು ನೋಡಿಬಿಟ್ಟಿದ್ದೀರಿ. ಅನಂತರ, ಬೇರೆ ಯಾವುದೇ ಸಂಗತಿಗಳು ನಿಮಗೆ ರುಚಿಸುವುದಿಲ್ಲ. ನೀವು ಸಂಪೂರ್ಣವಾದ ತೃಪ್ತಿಯನ್ನು ಅನುಭವಿಸಿದ್ದೀರಿ; ನಿಮಗೆ ಎಂಥ ಸಮಾಧಾನ ಸಿಕ್ಕಿದೆಯೆಂದರೆ, ನೀವು ನಿಮ್ಮ ಹೆಜ್ಜೆಗಳನ್ನು ಹಿಂತೆಗೆಯುವ ಅವಕಾಶವೇ ಇಲ್ಲ. ನಿಮಗೆ ಈಗ ಸಿಕ್ಕಿರುವ ತೃಪ್ತಿಯ ಮುಂದೆ ಬೇರೆ ಎಲ್ಲವೂ ಅತ್ಯಂತ ನಿಕೃಷ್ಟವಾಗಿಯೇ ಕಾಣುತ್ತವೆ.
ಈ ಸುದ್ದಿಯನ್ನೂ ಓದಿ: Spoorthivani Column: ದೇವತೆಗಳೂ ಅಸೂಯೆಪಟ್ಟ ಗೋಪಿಕೆಯರ ಕೃಷ್ಣಭಕ್ತಿ: ಅವನದೇ ಧ್ಯಾನ, ಅವನಲ್ಲೇ ಲೀನ
ಜಗತ್ತು ನಿಮಗೆ ತೋರಿಸುವ ಯಾವುದೇ ಆಮಿಷಗಳಿಂದ ನೀವು ವಿಚಲಿತರಾಗದಿರುವಾಗ ಮಾತ್ರವೇ ನಿಮಗೆ ನಿಜವಾದ ಭಕ್ತಿಯು ಸಾಧ್ಯವಾಗುತ್ತದೆ. ಜಗತ್ತು ನೀಡುವ ಯಾವುದೇ ಮೌಲ್ಯಯುತ ವಸ್ತುವೂ ಈ ಆನಂದದ ಮುಂದೆ, ದೇವರನ್ನು ಪೂಜಿಸುವುದರಿಂದ ನಿಮಗೆ ಸಿಗುವ ಭಕ್ತಿಯ ಮುಂದೆ, ಅರ್ಥಹೀನವಾಗುತ್ತದೆ. ‘ತೃಪ್ತೋ ಭವತಿ’ (ನಾರದ ಭಕ್ತಿಸೂತ್ರಗಳು 1.4), ನಿಮಗೆ ಸಂಪೂರ್ಣವಾದ ತೃಪ್ತಿಯು ದೊರಕುತ್ತದೆ. ‘ಆತ್ಮನ್ಯೇವಾತ್ಮನಾ ತುಷ್ಟಃ’ (ಭಗವದ್ಗೀತೆ 2.55), ನೀವು ನಿಮ್ಮೊಳಗೆಯೇ ಸಂತೃಪ್ತರಾಗುತ್ತೀರಿ. ನಿಮ್ಮ ಆಂತರಿಕ ಆನಂದವು ತುಂಬಿ ತುಳುಕುವುದರಿಂದ ನಿಮಗೆ ಯಾವುದೇ ಬಾಹ್ಯ ಸಂತೋಷಗಳು ಬೇಕಾಗುವುದಿಲ್ಲ.
ಈಗಾಗಲೇ ತುಂಬಿರುವ ಬಾವಿಯಲ್ಲಿ ನೀವು ಹೆಚ್ಚು ನೀರನ್ನು ಹೇಗೆ ತುಂಬಲು ಸಾಧ್ಯ? ‘ಮತ್ತೋ ಭವತಿ’ (ನಾರದ ಭಕ್ತಿಸೂತ್ರಗಳು 1.6), ನೀವು ಆ ದಿವ್ಯ ಪ್ರೇಮದಲ್ಲಿ ಉನ್ಮತ್ತರಾಗುತ್ತೀರಿ. ನೋವು ಯಾತನೆಗಳು, ತೊಂದರೆಗಳು, ಪ್ರತಿಕೂಲತೆಗಳು, ದೈನಂದಿನ ಸಮಸ್ಯೆಗಳು, ಕಲಹ ಮತ್ತು ಹೋರಾಟಗಳು ನಿಮ್ಮನ್ನು ಸ್ಪರ್ಶಿಸಲಾರವು. ನಿಮಗೆ ಈ ಯಾವುದರಿಂದಲೂ ಪರಿಣಾಮ ಉಂಟಾಗುವುದಿಲ್ಲ. ನೀವು ನಿಮ್ಮ ದೇಹದ ನೋವುಗಳಿಂದಾಚೆಗೆ ಹೋಗುತ್ತೀರಿ. ನಿಮಗೆ ಪ್ರತಿಕೂಲತೆಗಳನ್ನು ಮತ್ತು ಯಾತನೆಗಳನ್ನು ತರುವ ಮಮಕಾರಗಳಿಂದಾಚೆಗೆ ಹೋಗುತ್ತೀರಿ.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.