Spoorthivani Column: ದೇವತೆಗಳೂ ಅಸೂಯೆಪಟ್ಟ ಗೋಪಿಕೆಯರ ಕೃಷ್ಣಭಕ್ತಿ: ಅವನದೇ ಧ್ಯಾನ, ಅವನಲ್ಲೇ ಲೀನ
ಗೋಪಗೋಪಿಕೆಯರ ಕೃಷ್ಣ ಭಕ್ತಿಗಿಂತ ಮಿಗಿಲಾದ ಭಕ್ತಿಯೇ ಇಲ್ಲವೆಂದು ನಾರದರೇ ಹೇಳಿದ್ದಾರೆ. ಹೌದು, ಅವರ ಭಕ್ತಿಯು ನಿರ್ಮಲವಾಗಿ, ಯಾವುದೇ ನಿರೀಕ್ಷೆಗಳಿಲ್ಲದ, ಆಸೆಗಳಿಲ್ಲದ, ಬಯಕೆಗಳಿಲ್ಲದ ಅಥವಾ ಯಾವುದೇ ಬಂಧನಗಳಿಲ್ಲದ ಭಕ್ತಿಯಾಗಿರುತ್ತಿತ್ತು. ಅದೊಂದು ಮುಕ್ತವಾದ ಪ್ರೇಮದ ಸೆಲೆಯಾಗಿರುತ್ತಿತ್ತು. ನಿತ್ಯ, ಶುದ್ಧ, ಬದ್ಧ, ಮುಕ್ತ, ನಿರ್ಮಲ ಪ್ರೇಮವಾಗಿರುತ್ತಿತ್ತು.

-

- ಸದ್ಗುರು ಶ್ರೀ ಮಧುಸೂದನ ಸಾಯಿ
‘ಹೇ ಕೃಷ್ಣಾ, ನೀನೊಂದು ಗಿಡವಾದರೆ, ನಾನು ಒಂದು ಬಳ್ಳಿಯಾಗಿ ನಿನ್ನನ್ನು ಸುತ್ತಿಕೊಳ್ಳುತ್ತೇನೆ. ನಿನ್ನನ್ನು ಅಪ್ಪಿಕೊಳ್ಳುತ್ತೇನೆ. ನೀನೊಂದು ಪುಷ್ಪವಾದರೆ, ನಾನು ದುಂಬಿಯಾಗಿ ನಿನ್ನ ಸುತ್ತ ಸುತ್ತುತ್ತೇನೆ. ನೀನು ಅನಂತವಾದ ಆಕಾಶವಾದರೆ, ನಾನೊಂದು ಸಣ್ಣ ಚುಕ್ಕೆಯಾಗಿ ನಿನ್ನ ನಡುವೆ ಮಿನುಗುತ್ತೇನೆ. ನೀನು ವಿಶಾಲವಾದ ಸಾಗರವಾದರೆ, ನಾನೊಂದು ಚಿಕ್ಕ ತೊರೆಯಾಗಿ ನಿನ್ನೊಳಗೆ ಸೇರಿಕೊಳ್ಳುತ್ತೇನೆ’ -ಬೃಂದಾವನದ ಗೋಪ ಗೋಪಿಕೆಯರು ಶ್ರೀಕೃಷ್ಣನನ್ನು ಪ್ರಾರ್ಥಿಸಿದ ಪರಿಯಿದು.
ಆದ್ದರಿಂದಲೇ, ಸ್ವತಃ ತಾವೇ ಒಬ್ಬ ಮಹಾ ಭಕ್ತರಾಗಿದ್ದ ನಾರದರು ಗೋಪಗೋಪಿಕೆಯರ ಭಕ್ತಿಗಿಂತ ಮಿಗಿಲಾದ ಭಕ್ತಿಯೇ ಇಲ್ಲವೆಂದು ಹೇಳಿದ್ದಾರೆ. ‘ಯಥಾ ವ್ರಜಗೋಪಿಕಾನಾಮ್’ (ನಾರದ ಭಕ್ತಿಸೋತ್ರಗಳು 21). ಶ್ರೀಕೃಷ್ಣನ ಮೇಲೆ ಗೋಪಿಕೆಯರಿಗೆ ಯಾವ ರೀತಿಯಾದ ಯಾವುದೇ ಸರಿಸಾಟಿಯಿಲ್ಲದ ಭಕ್ತಿ ಇತ್ತೋ, ಅಂಥ ಭಕ್ತಿಯನ್ನು ನೀವು ಸ್ವಾಮಿಯ ಮೇಲೆ ಹೊಂದಿರಬೇಕು. ಕೃಷ್ಣನು ಗೋಪ ಗೋಪಿಕೆಯರೊಂದಿಗೆ ಇರುವಾಗ ತುಂಬಾ ಸಂತೋಷದಿಂದ ಇರುತ್ತಿದ್ದ. ಏಕೆಂದರೆ, ಅವರ ಭಕ್ತಿಯು ನಿರ್ಮಲವಾಗಿ, ಯಾವುದೇ ನಿರೀಕ್ಷೆಗಳಿಲ್ಲದ, ಆಸೆಗಳಿಲ್ಲದ, ಬಯಕೆಗಳಿಲ್ಲದ ಅಥವಾ ಯಾವುದೇ ಬಂಧನಗಳಿಲ್ಲದ ಭಕ್ತಿಯಾಗಿರುತ್ತಿತ್ತು. ಅದೊಂದು ಮುಕ್ತವಾದ ಪ್ರೇಮದ ಸೆಲೆಯಾಗಿರುತ್ತಿತ್ತು. ನಿತ್ಯ, ಶುದ್ಧ, ಬದ್ಧ, ಮುಕ್ತ, ನಿರ್ಮಲ ಪ್ರೇಮವಾಗಿರುತ್ತಿತ್ತು. ಕೃಷ್ಣನೊಂದಿಗೆ ಸುಮ್ಮನೇ ಇರುವುದೂ ಕೂಡ ಅವರಿಗೆ ಸಂತೋಷ ಕೊಡುತ್ತಿತ್ತು. ಅವನೊಂದಿಗಿನ ಈ ಬಾಂಧವ್ಯದಿಂದ ಅವರಿಗೆ ಯಾವುದೇ ಲಾಭವೂ ಇರಲಿಲ್ಲ ಮತ್ತು ನಷ್ಟವೂ ಇರಲಿಲ್ಲ. ಅವರಿಗೆ ಕೇವಲ ಕೃಷ್ಣನ ಸಾಮೀಪ್ಯ ಮತ್ತು ಅವನೊಂದಿಗೆ ಕಾಲ ಕಳೆಯುವ ಭಾಗ್ಯ ಮಾತ್ರ ಬೇಕಾಗಿತ್ತು.
ಪ್ರತಿದಿನವೂ ಕೃಷ್ಣನು ತನ್ನ ಮನೆಯಿಂದ ಹೊರಬಂದು ಕಾಡಿನಲ್ಲಿ ಹಸುಗಳನ್ನು ಮೇಯಿಸಲು ಹೋಗುವುದನ್ನು ಗೋಪ ಗೋಪಿಕೆಯರು ಕಾಯುತ್ತಿದ್ದರು. ಅವನಿಗಾಗಿ ಕಾಯುತ್ತ ಕುಳಿತು ಅವನನ್ನು ನೋಡಿ ಸಂಭ್ರಮಿಸುತ್ತ ನದಿಯ ತೀರದ ಕಾಡಿನಲ್ಲಿ ಅವನೊಂದಿಗೆ ಹೋಗಲು ಅಣಿಯಾಗುತ್ತಿದ್ದರು. ಹಸುಗಳು ಹುಲ್ಲನ್ನು ಮೇಯುತ್ತಿರುವಾಗ ಅವರೆಲ್ಲರೂ, ಹೂವಿಗೆ ಸುತ್ತುವರಿದ ದುಂಬಿಗಳಂತೆ, ಗಿಡವನ್ನು ತಬ್ಬಿಕೊಂಡಿರುವ ಬಳ್ಳಿಯಂತೆ, ಕೃಷ್ಣನ ಸುತ್ತ ಸುತ್ತಿಕೊಳ್ಳುತ್ತಿದ್ದರು. ಅವರೆಲ್ಲರೂ ಆಗಸವನ್ನೆಲ್ಲ ತುಂಬಿಕೊಂಡಿರುವ ತಾರೆಗಳಂತೆ, ಸಾರವನ್ನು ಸೇರಲು ಕಾತರಿಸುತ್ತಿರುವ ನದಿ ತೊರೆಗಳಂತೆ, ಸಕ್ಕರೆಯತ್ತ ಆಕರ್ಷಿಸಿ ಪಯಣಿಸುತ್ತಿರುವ ಇರುವೆಗಳಂತೆ ಕಾಣುತ್ತಿದ್ದರು.
ಕೃಷ್ಣನು ತನ್ನ ಪ್ರಿಯವಾದ ಕದಂಬ ವೃಕ್ಷದ (ಸದಾ ಹಸಿರಾಗಿರುವ, ಪರಿಮಳಯುಕ್ತ ಹೂವುಗಳನ್ನು ಹೊತ್ತಿರುವ ಗಿಡ) ಕೆಳಗೆ ಕುಳಿತು ತನ್ನ ಕೊಳಲನ್ನು ನುಡಿಸುತ್ತಿದ್ದ. ಎಲ್ಲ ಗೋಪಾಲರೂ ಗೋಪಿಕೆಯರುೂ ಅವನ ಸುತ್ತ ಕುಳಿತು ಅವನ ಕೊಳಲಿನ ಮೋಹನರಾಗವನ್ನು ಆಲಿಸುತ್ತಿದ್ದರು. ಅವರೆಲ್ಲರೂ ಮನೆಯಿಂದ ಹಾಲು ಅನ್ನ, ಕೆನೆ ಮೊಸರನ್ನದ ಬುತ್ತಿಗಳನ್ನು ತಂದು ಆ ಬುತ್ತಿಯಲ್ಲಿನ ಅನ್ನವನ್ನು ತಮಗೆ ಪ್ರಸಾದವಾಗಿ ಬಡಿಸಲು ಕೋರುತ್ತಿದ್ದರು. ಕೃಷ್ಣನು ಅನ್ನವನ್ನು ಸಣ್ಣಸಣ್ಣ ತುತ್ತುಗಳನ್ನಾಗಿ ಮಾಡಿ ಅತೀವ ಪ್ರೇಮದಿಂದ ಅವರೆಲ್ಲರಿಗೂ ಕೊಡುತ್ತಿದ್ದ. ಅವರು ತಂದ ಅನ್ನವು ಎಲ್ಲರಿಗೂ ಸಾಕಾಗದಿದ್ದರೆ, ಅವನು ಅದೇ ಅನ್ನವನ್ನು ಅಭಯವನ್ನಾಗಿ ಮಾಡಿ ಎಲ್ಲರಿಗೂ ಹೊಟ್ಟೆತುಂಬುವ ಹಾಗೆ ಬಡಿಸುತ್ತಿದ್ದ. ಯಾರಿಗೂ ತನ್ನ ಪಾಲಿನ ಅನ್ನವು ಸಿಗಲಾರದ ಸಂದರ್ಭ ಎಂದಿಗೂ ಬರಲೇ ಇಲ್ಲ.
ಈ ಸುದ್ದಿಯನ್ನೂ ಓದಿ: Spoorthivani Column: ಒಂದೇ ದಿನಕ್ಕೆ ನಡಿಗೆ ಕಲಿತಿರಾ? ದೇವರ ದರ್ಶನದ ಪ್ರಯತ್ನವೂ ಹಾಗೆಯೇ
ಗೋಪ-ಗೋಪಿಕೆಯರಿಗೆ ಹಸುಗಳನ್ನು ಮೇಯಿಸುವುದನ್ನು ಬಿಟ್ಟು ಬೇರೆ ಯಾವುದೇ ಕೆಲಸಗಳೂ ಇರಲಿಲ್ಲ. ಇಡೀ ದಿನ ಬೆಳಗಿನಿಂದ ಸಂಜೆಯವರೆಗೆ, ಅವರೆಲ್ಲರೂ ಕೃಷ್ಣನ ಜೊತೆಗೆ ಆಟವಾಡುತ್ತ, ಮಾತನಾಡುತ್ತ ಅವನ ಸಾಂಗತ್ಯದಲ್ಲಿಯೇ ಲೀನವಾಗುತ್ತಿದ್ದರು. ಅವರ ಮನಸ್ಸಿನಲ್ಲಿ ಕೃಷ್ಣನ ಹೊರತಾಗಿ ಬೇರೇನೂ ಇರಲಿಲ್ಲ. ಅವರ ಈ ಕೃಷ್ಣಮಯತ್ವದಲ್ಲಿ, ಅವರು ಕೃಷ್ಣನೆಂಬ ಗೀಳಿಗೆ ಒಳಗಾಗಿ ತಮ್ಮ ಮನಸ್ಸುಗಳಲ್ಲಿ ಕೃಷ್ಣನನ್ನು ತುಂಬಿಸಿಕೊಂಡಿದ್ದರು. ಅವರ ಈ ಅಮರ ಪ್ರೇಮದಿಂದಾಗಿ ದೇವತೆಗಳಿಗೂ ಕೂಡ ಅಸೂಯೆಯಾಯಿತು. ಗೋಪ-ಗೋಪಿಯರ ಭಕ್ತಿಯು ಎಲ್ಲರಿಗೂ ಮಾದರಿ.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.