ಉಕ್ರೇನ್ ವಿರುದ್ಧದ ಯುದ್ಧವನ್ನು ಮುಂದುವರಿಸಿರುವ ರಷ್ಯಾದ ಜತೆಗಿನ ವ್ಯಾಪಾರ-ವ್ಯವಹಾರ ಗಳನ್ನು ಕಡಿದುಕೊಳ್ಳುವಂತೆ ಭಾರತ, ಬ್ರೆಜಿಲ್ ಮತ್ತು ಚೀನಾ ದೇಶಗಳ ಮೇಲೆ ಒತ್ತಡ ಹಾಕಿರುವ ‘ನ್ಯಾಟೊ’ ಒಕ್ಕೂಟ, ‘ಒಂದೊಮ್ಮೆ ರಷ್ಯಾದ ಜತೆಗಿನ ವ್ಯಾಪಾರ ಚಟುವಟಿಕೆಗಳನ್ನು ಮುಂದು ವರಿಸಿದರೆ ತೀವ್ರ ಸ್ವರೂಪದ ಆರ್ಥಿಕ ನಿರ್ಬಂಧಗಳನ್ನು ಹೇರಲಾಗುತ್ತದೆ’ ಎಂದು ಬೆದರಿಕೆ ಹಾಕಿದೆ.
ಇದು, ‘ಹರಿವ ನೀರಿಗೆ ದೊಣೆ ನಾಯಕನ ಅಪ್ಪಣೆಯೇಕೆ?’ ಎಂಬ ಗಾದೆಮಾತನ್ನು ನೆನಪಿಸುವಂತಿದೆ. ಒಂಥರದಲ್ಲಿ ಇದು, ಊರಿನ ಅಂಗಡಿ ಮಾಲೀಕರೊಬ್ಬರು, ‘ನಮ್ಮ ಬೀದಿಯಲ್ಲಿರುವ ನೀವು ನಮ್ಮ ಅಂಗಡಿಯಲ್ಲೇ ವಸ್ತುಗಳನ್ನು ಖರೀದಿಸಬೇಕು; ಬದಲಿಗೆ ಪಕ್ಕದ ಬೀದಿಯ ಅಂಗಡಿಯಿಂದ ಖರೀದಿಸಿ ದರೆ, ಈ ಬೀದಿಯಲ್ಲಿ ನಿಮಗೆ ಓಡಾಡಲಿಕ್ಕೆ ಬಿಡುವುದಿಲ್ಲ’ ಎಂದು ಗ್ರಾಹಕರೊಬ್ಬರಿಗೆ ಗೊಡ್ಡು ಬೆದರಿಕೆ ಹಾಕಿದಂತಾಗುತ್ತದೆ ಅಷ್ಟೇ!
ಇದನ್ನೂ ಓದಿ: Vishwavani Editorial: ಬಳ್ಳಿಗಳಿಗೆ ನೀರೆರೆಯಬೇಕಿದೆ
ವಿಶ್ವದ ಉದ್ದಗಲಕ್ಕೂ ಮೈಚಾಚಿಕೊಂಡಿರುವ ರಾಷ್ಟ್ರಗಳು ತಮ್ಮ ಅಗತ್ಯದ ಕಚ್ಚಾತೈಲ, ಅದಿರು, ಆಹಾರ ಪದಾರ್ಥ, ಹಣ್ಣು-ತರಕಾರಿ, ಔಷಧಿ ಇತ್ಯಾದಿ ವಸ್ತುಗಳನ್ನು ತಮ್ಮ ಅನುಕೂಲ ಹಾಗೂ ಲಭ್ಯ ಸಂಪನ್ಮೂಲಕ್ಕೆ ತಕ್ಕಂತೆ, ತಮ್ಮ ಧೋರಣೆಗೆ ಹೊಂದುವಂತಿರುವ ದೇಶದಿಂದ ಖರೀದಿಸಲು ಸರ್ವತಂತ್ರ ಸ್ವತಂತ್ರವಾಗಿರುತ್ತವೆ.
ಇಂಥ ಚಟುವಟಿಕೆಗೂ ನ್ಯಾಟೊ ನಿರ್ಬಂಧ ವಿಧಿಸುವುದಾದರೆ, ಅದು ಅಂಗಡಿಯ ಮಾಲೀಕ ರೊಬ್ಬರು ಹಾಕಿದ ಗೊಡ್ಡು ಬೆದರಿಕೆಯಂತಾಗದೇ? ಇಲ್ಲಿ ಉಕ್ರೇನ್ ಜತೆಗಿನ ರಷ್ಯಾದ ಯುದ್ಧ ಧರ್ಮಸಮ್ಮತವಾದದ್ದೋ ಅಲ್ಲವೋ ಎಂಬುದು ಪ್ರಶ್ನೆಯಲ್ಲ. ಇದು ವಾಣಿಜ್ಯಿಕ ಬಾಬತ್ತು. ಅತ್ಯಧಿಕ ಪ್ರಮಾಣದ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುವ ಭಾರತವು, ದೇಶೀಯ ಕಚ್ಚಾ ತೈಲದ ಉತ್ಪಾದನೆ ಸದ್ಯಕ್ಕೆ ಕಡಿಮೆಯಿರುವುದರಿಂದ ಶೇ.85ರಷ್ಟು ಭಾಗವನ್ನು ಅನ್ಯದೇಶ ಗಳಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ.
ಇಂಥ ಭಾರಿ ಅಗತ್ಯವಿದ್ದಾಗ, ಮಿತವ್ಯಯಕಾರಿ ಎನಿಸಿದ ವ್ಯಾಪಾರಿ ಒಡಂಬಡಿಕೆಗೆ ಮಾತ್ರವೇ ಸಮ್ಮತಿಸಬೇಕಾಗುತ್ತದೆ. ಹೀಗಾಗಿ ರಷ್ಯಾ ಜತೆಗಿನ ವ್ಯಾಪಾರ ಅನುಕೂಲಕರ ಎನಿಸಿದಲ್ಲಿ ಆ ನಿಟ್ಟಿನಲ್ಲಿ ಮುಂದುವರಿಯಲು ಭಾರತ ಸ್ವತಂತ್ರವಾಗಿರುತ್ತದೆ. ಇದನ್ನು ನ್ಯಾಟೊ ಅರಿತರೆ ಒಳಿತು.