Vishwavani Editorial: ಬಳ್ಳಿಗಳಿಗೆ ನೀರೆರೆಯಬೇಕಿದೆ
ಹುಡುಕಿದರೆ ಇಂಥ ಹಲವು ಪ್ರತಿಭೆಗಳು ನಮ್ಮ ನಾಡಿನ ಮೂಲೆಮೂಲೆಯಲ್ಲೂ ಸಿಕ್ಕಾವು. ಆದರೆ ಹೊಟ್ಟೆ ಹೊರೆದುಕೊಳ್ಳುವುದೇ ಕಷ್ಟವಾಗಿರುವ ಕಾರಣಕ್ಕೆ ಇಂಥ ಪ್ರತಿಭೆಗಳಿಗೆ ಉತ್ತೇಜಿಸಲಾಗದ ಸ್ಥಿತಿಯಲ್ಲಿ ಅವರ ಕುಟುಂಬಗಳಿರಬಹುದು. ಇಂಥ ‘ಪ್ರತಿಭಾ- ಬಳ್ಳಿಗಳಿಗೆ’ ನೀರೆರೆಯಬೇಕಾದ ಕೆಲಸ ಆಗಬೇಕಿದೆ...


ಇದು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ನಿಜಕ್ಕೂ ರೋಚಕ ಸುದ್ದಿಯೇ. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಬರ್ಮಿಂಗ್‌ಹ್ಯಾಮ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ೩೩೬ ರನ್ನುಗಳ ಭರ್ಜರಿ ಗೆಲುವು ಸಾಧಿಸಿ ಭಾರತ ತಂಡವು ಬೀಗಿದೆ. ಇದು ಬರೋಬ್ಬರಿ ೫೮ ವರ್ಷಗಳ ನಂತರ ಎಡ್ಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ಭಾರತ ಮೊಳಗಿಸಿರುವ ಜಯಭೇರಿ ಎಂಬುದು ಹೆಮ್ಮೆ ಪಡುವ ಸಂಗತಿಯೇ ಸರಿ.
ಈ ಗೆಲುವಿಗೆ ಮಹತ್ತರ ಕೊಡುಗೆ ನೀಡಿದವರು ಎರಡು ಇನ್ನಿಂಗ್ಸ್ ಸೇರಿ ಒಟ್ಟು ೧೦ ವಿಕೆಟ್ಟುಗಳನ್ನು ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡ ಆಕಾಶ್ ದೀಪ್. ಭಾರತೀಯ ಕ್ರಿಕೆಟಿಗರು ಎಂದಾಕ್ಷಣ ಮನ್ಸೂರ್ ಅಲಿಖಾನ್ ಪಟೌಡಿ, ಸುನಿಲ್ ಗಾವಸ್ಕರ್, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಜಿ.ಆರ್.ವಿಶ್ವನಾಥ್, ಅನಿಲ್ ಕುಂಬ್ಳೆ ಎಂಬ ಹೆಸರುಗಳು ಕ್ರೀಡಾಪ್ರೇಮಿಗಳಿಗೆ ಅಪ್ರಯತ್ನವಾಗಿ ನೆನಪಾಗುವುದರಲ್ಲಿ ಅಚ್ಚರಿಯೇನಿಲ್ಲ.
ಇದನ್ನೂ ಓದಿ: Vishwavani Editorial: ರಕ್ಷಕನೇ ಭಕ್ಷನಾದರೆ ಗತಿಯೇನು?
ಇವರೆಲ್ಲ ಸಾಧನೆ ಮೆರೆಯಲು ತಂತಮ್ಮ ನೆಲೆಯಲ್ಲಿ ಸಾಕಷ್ಟು ಬೆವರು ಬಸಿದವರೇ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆಕಾಶ್ ದೀಪ್ ಅವರು ಈ ಹಂತವನ್ನು ತಲುಪಲು ಪಟ್ಟಿರುವ ಪರಿಶ್ರಮ, ಮಾಡಿರುವ ಕಸರತ್ತುಗಳನ್ನು ಒಮ್ಮೆ ಅವಲೋಕಿಸಿದರೆ, ಅವರ ಬಗ್ಗೆ ನಿಜಕ್ಕೂ ಹೆಮ್ಮೆ ಮೂಡುತ್ತದೆ.
ಕಾರಣ, ಬಿಹಾರದ ಅದ್ಯಾವುದೋ ಮೂಲೆಯ ಹಳ್ಳಿಯವರಾದ ಆಕಾಶ್‌ಗೆ ಅವರಿಚ್ಛೆಯ ಕ್ರಿಕೆಟ್ ಆಡುವುದಕ್ಕೂ ಉತ್ತೇಜಿಸಲಾಗದಂಥ ಬಡತನದಲ್ಲಿ ಬಳಲುತ್ತಿತ್ತು ಅವರ ಕುಟುಂಬ. ಆದರೆ, ಅದನ್ನೊಂದು ಕೊರತೆಯೆಂದು ಪರಿಗಣಿಸದೆ, ಶ್ರದ್ಧೆ ಮತ್ತು ಬದ್ಧತೆಯೊಂದಿಗೆ ಆಟದಲ್ಲಿ ತೊಡಗಿಸಿ ಕೊಂಡ ಫಲವಾಗಿ ಇವತ್ತಿನ ಈ ಹಂತವನ್ನು ತಲುಪಿದ್ದಾರೆ ಆಕಾಶ್ ದೀಪ್.
ಹುಡುಕಿದರೆ ಇಂಥ ಹಲವು ಪ್ರತಿಭೆಗಳು ನಮ್ಮ ನಾಡಿನ ಮೂಲೆಮೂಲೆಯಲ್ಲೂ ಸಿಕ್ಕಾವು. ಆದರೆ ಹೊಟ್ಟೆ ಹೊರೆದುಕೊಳ್ಳುವುದೇ ಕಷ್ಟವಾಗಿರುವ ಕಾರಣಕ್ಕೆ ಇಂಥ ಪ್ರತಿಭೆಗಳಿಗೆ ಉತ್ತೇಜಿಸಲಾಗದ ಸ್ಥಿತಿಯಲ್ಲಿ ಅವರ ಕುಟುಂಬಗಳಿರಬಹುದು. ಇಂಥ ‘ಪ್ರತಿಭಾ- ಬಳ್ಳಿಗಳಿಗೆ’ ನೀರೆರೆಯಬೇಕಾದ ಕೆಲಸ ಆಗಬೇಕಿದೆ...