ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಒಂದೊಂದೇ ಸಿಪ್ಪೆಗಳು ಸುಲಿದುಕೊಳ್ಳುತ್ತಿವೆ. ಈ ಪ್ರಕರಣದ ಶಂಕಿತ ಉಗ್ರರು ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ದೇವಾಲಯದಲ್ಲಿ ಬಾಂಬ್ ಇರಿಸಿ ಸ್ಫೋಟಿಸಲು ಸಂಚು ಹೂಡಿದ್ದರು; ಆದರೆ ಬಾಂಬ್‌ನ ಟೈಮರ್ ಅನ್ನು ನಿಗದಿತ ಗಳಿಗೆಗೆ ಸಜ್ಜುಗೊಳಿಸುವಲ್ಲಿ ಆದ ಎಡವಟ್ಟಿನಿಂದಾಗಿ ಅದು ಮಾರ್ಗ ಮಧ್ಯೆಯೇ ಆಟೋರಿಕ್ಷಾದಲ್ಲಿ ಸ್ಫೋಟಗೊಂಡಿತು ಎಂಬ ಸ್ಫೋಟಕ ಮಾಹಿತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಯಲು ಮಾಡಿದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿಯೇ.
ಇದನ್ನೂ ಓದಿ: Vishwavani Editorial: ತಾನು ಮಳ್ಳ, ಪರರನ್ನು ನಂಬ!
ಉಗ್ರರು ಮತ್ತು ಕಿಡಿಗೇಡಿಗಳು ತಮ್ಮ ಗುಪ್ತ ಹಿತಾಸಕ್ತಿಯ ನೆರವೇರಿಕೆಗೆ ದೇಗುಲದಂಥ ಶ್ರದ್ಧಾಭಕ್ತಿ ಕೇಂದ್ರಗಳನ್ನು ಬಳಸಿಕೊಳ್ಳುವುದಕ್ಕೂ ಹಿಂದು-ಮುಂದು ನೋಡುವುದಿಲ್ಲ ಎಂಬುದು ಈ ಮಾಹಿತಿಯಿಂದ ಸಾಬೀತಾಗಿದೆ. ನಮ್ಮದೇ ನೆಲದಲ್ಲಿ ಬೀಡುಬಿಟ್ಟು, ಇಲ್ಲಿ ಗಾಳಿ-ನೀರು-ಆಹಾರ ವನ್ನೇ ಸೇವಿಸಿ, ನಮ್ಮ ಧಾರ್ಮಿಕ ಶ್ರದ್ಧೆ-ನಂಬಿಕೆಗಳಿಗೆ, ಕೋಮು ಸೌಹಾರ್ದಕ್ಕೆ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಕೊಳ್ಳಿ ಯಿಡಲು ಮುಂದಾಗುವ ಇಂಥ ಕಿಡಿಗೇಡಿಗಳಿಗೆ ಕಠಿಣಾತಿಕಠಿಣ ಶಿಕ್ಷೆಯನ್ನೇ ನೀಡಬೇಕು. ಇಂಥವರ ನಾಯಕತ್ವ ವಹಿಸಿದವರ ಹೆಡೆಮುರಿ ಕಟ್ಟಿ ಬಲಿ ಹಾಕಬೇಕು.
‘ತಲೆ’ಗಳಿಗೆ ಹೀಗೆ ಇಕ್ಕಳ ಹಾಕಿದರೆ, ಆಗ ‘ಬಾಲಂಗೋಚಿ’ಗಳು ತಾವಾಗೇ ದಾರಿಗೆ ಬರುತ್ತವೆ. ಇಲ್ಲವಾದಲ್ಲಿ ದುರುಳರಿಗೆ, ದುರಾತ್ಮರಿಗೆ ಕಾನೂನಿನ ಭಯವೇ ಇಲ್ಲದಂತಾಗುತ್ತದೆ. ಉಗ್ರವಾದಕ್ಕೆ ಇಂಬುಕೊಡುವವರನ್ನು ಮೊಳಕೆಯಲ್ಲೇ ಚಿವುಟಿಹಾಕದಿದ್ದರೆ, ಅವರು ಮುಂದೆ ಬೆಳೆದು ಹೆಮ್ಮರ ವಾದಾಗ ಮತ್ತು ಎಲ್ಲೆಡೆ ಹಬ್ಬಿಕೊಂಡಾಗ ಲಗಾಮು ಹಾಕುವುದು ಕಷ್ಟವಾಗಬಹುದು.
ಮಾತ್ರವಲ್ಲದೆ, ಇಂಥವರಿಗೆ ನೆರೆಯ ಶತ್ರುರಾಷ್ಟ್ರಗಳಿಂದ ಚಿತಾವಣೆ ಸಿಗುತ್ತಿದೆಯೇ ಮತ್ತು ಸಂಪನ್ಮೂಲ ಪೂರೈಕೆ ಆಗುತ್ತಿದೆಯೇ ಎಂಬುದರ ಕುರಿತೂ ಮಾಹಿತಿಗಳನ್ನು ಕಲೆ ಹಾಕಿ, ಜಾಗತಿಕ ಸಮುದಾಯದ ಸಮ್ಮುಖದಲ್ಲಿ ಅವನ್ನು ಹರವಿಡಬೇಕು. ತನ್ಮೂಲಕ, ಉಗ್ರವಾದವನ್ನು ಬೆಂಬಲಿಸು ವವರಿಗೆ ಛೀಮಾರಿ ಹಾಕುವಂತಾಗಬೇಕು. ಅದು ಈ ಕ್ಷಣದ ಅನಿವಾರ್ಯತೆಯೂ ಹೌದು.