ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ತಾನು ಮಳ್ಳ, ಪರರನ್ನು ನಂಬ!

‘ಅಮೆರಿಕ ಈಗಲೂ ಯುರೇನಿಯಂ ಮತ್ತು ರಸಗೊಬ್ಬರವನ್ನು ರಷ್ಯಾದಿಂದ ಖರೀದಿಸು ತ್ತಿದೆಯಲ್ಲಾ?’ ಎಂಬ ಅಮೆರಿಕದ ಮಾಧ್ಯಮಗಳ ಪ್ರಶ್ನೆಗೆ, ‘ನನಗೆ ಈ ವಿಚಾರವೇ ಗೊತ್ತಿಲ್ಲ, ಈಗ ನಿಮ್ಮಿಂದ ಮಾಹಿತಿ ಸಿಕ್ಕಿರುವುದರಿಂದ ಈ ಬಗ್ಗೆ ಪರಿಶೀಲಿಸಬೇಕಿದೆ’ ಎಂಬ ಜಾಣ ಉತ್ತರವನ್ನು ನೀಡಿ ಟ್ರಂಪ್ ಜಾರಿಕೊಂಡಿ ದ್ದಾರೆ.

Vishwavani Editorial: ತಾನು ಮಳ್ಳ, ಪರರನ್ನು ನಂಬ!

Ashok Nayak Ashok Nayak Aug 8, 2025 4:49 AM

ತಮ್ಮ ವಿರೋಧದ ನಡುವೆಯೂ ಭಾರತವು ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸುತ್ತಿದೆ ಎಂಬ ಕುಂಟುನೆಪವನ್ನು ಮುಂದು ಮಾಡಿಕೊಂಡು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದೆಡೆಗೆ ಕೆಂಗಣ್ಣು ಬೀರಿದ್ದಾರೆ. ಭಾರತದಿಂದ ಅಮೆರಿಕಕ್ಕೆ ಬಂದು ಬೀಳುವ ಸರಕುಗಳಿಗೆ ಕೆಲ ದಿನಗಳ ಹಿಂದೆ ಶೇ.25ರಷ್ಟು ಸುಂಕವನ್ನು ವಿಧಿಸಿದ್ದ ಅವರು, ಈ ನಿರ್ಣಯದಿಂದ ಭಾರತ ಮೆತ್ತಗಾಗಿಲ್ಲ ಎಂಬ ಕಾರಣಕ್ಕೆ ಸುಂಕದ ಪ್ರಮಾಣವನ್ನು ಶೇ.50ಕ್ಕೆ ಏರಿಸುವ ಹುಂಬ ನಿರ್ಧಾರ ವನ್ನು ಕೈಗೊಂಡಿದ್ದಾರೆ.

ಆದರೆ, ‘ಅಮೆರಿಕ ಈಗಲೂ ಯುರೇನಿಯಂ ಮತ್ತು ರಸಗೊಬ್ಬರವನ್ನು ರಷ್ಯಾದಿಂದ ಖರೀದಿಸು ತ್ತಿದೆಯಲ್ಲಾ?’ ಎಂಬ ಅಮೆರಿಕದ ಮಾಧ್ಯಮಗಳ ಪ್ರಶ್ನೆಗೆ, ‘ನನಗೆ ಈ ವಿಚಾರವೇ ಗೊತ್ತಿಲ್ಲ, ಈಗ ನಿಮ್ಮಿಂದ ಮಾಹಿತಿ ಸಿಕ್ಕಿರುವುದರಿಂದ ಈ ಬಗ್ಗೆ ಪರಿಶೀಲಿಸಬೇಕಿದೆ’ ಎಂಬ ಜಾಣ ಉತ್ತರವನ್ನು ನೀಡಿ ಟ್ರಂಪ್ ಜಾರಿಕೊಂಡಿದ್ದಾರೆ.

ಇದನ್ನೂ ಓದಿ: Vishwavani Editorial: ದೇವಭೂಮಿಯ ಘೋರ ದುರಂತ

ಇದು ಹುಚ್ಚೋ, ಬೆಪ್ಪೋ ಶಿವಲೀಲೆಯೋ?! ‘ವಿಶ್ವದ ದೊಡ್ಡಣ್ಣ’ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ಅಮೆರಿಕದಂಥ ದೇಶದ ಅಧ್ಯಕ್ಷ ಗದ್ದುಗೆಯಲ್ಲಿ ಕೂತಿರುವ ವ್ಯಕ್ತಿಗೆ, ಇಂಥದೊಂದು ಮಹತ್ವದ ಸಂಗತಿಯ ಬಗ್ಗೆ ಅರಿವಿರುವುದಿಲ್ಲವೇ? ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಬಾರದು ಎನ್ನುವುದಾದರೆ, ಯುರೇನಿಯಂ ಮತ್ತು ರಸಗೊಬ್ಬರವನ್ನು ಖರೀದಿಸುತ್ತಿರುವ ಅಮೆರಿಕಕ್ಕೂ ಆ ಮಾತು ಅನ್ವಯವಾಗುತ್ತದೆಯಲ್ಲವೇ? ಇಂಥ ಪ್ರಶ್ನೆಗಳಿಗೆ ಟ್ರಂಪ್ ಉತ್ತರಿಸುತ್ತಾರೆ ಎಂದು ಯಾರೇನೂ ನಿರೀಕ್ಷಿಸುತ್ತಿಲ್ಲ.

ಆದರೆ, ಟ್ರಂಪ್ ದಿನದಿಂದ ದಿನಕ್ಕೆ ತಮ್ಮ ಹುದ್ದೆಗಿರುವ ಘನತೆ ಮತ್ತು ಗೌರವವನ್ನು ಕಳೆದು ಕೊಳ್ಳುತ್ತಿರುವುದಂತೂ ನಿಜ. ಮೊದಲ ಅಧಿಕಾರಾವಧಿಗೆ ಹೋಲಿಸಿದಾಗ, ಎರಡನೇ ಅವಧಿಯಲ್ಲಿ ಟ್ರಂಪ್‌ರ ಹುಚ್ಚಾಟಗಳು ಕೊಂಚ ಜಾಸ್ತಿಯೇ ಆಗಿವೆ ಎನ್ನಲಡ್ಡಿಯಿಲ್ಲ.

ಅಂತಾರಾಷ್ಟ್ರೀಯ ವ್ಯಾಪಾರ- ವ್ಯವಹಾರಗಳಿಗೆ ಸಂಬಂಧಿಸಿ ಪ್ರತಿಯೊಂದು ದೇಶಕ್ಕೂ ತನ್ನದೇ ಆದ ನಿಲುವುಗಳಿರುತ್ತವೆ, ಹೊಂದಾಣಿಕೆಯ ಪ್ರವೃತ್ತಿ ಅಲ್ಲಿ ಮೂಲವಸ್ತುವಾಗಿ ಕೆಲಸ ಮಾಡುತ್ತದೆ. ಹೀಗಾಗಿ, ತನಗೆ ಮಿತವ್ಯಯಕಾರಿಯಾಗಿ ಪರಿಣಮಿಸುವ ದ್ವಿಪಕ್ಷೀಯ ವ್ಯಾಪಾರ ಚಟುವಟಿಕೆಗಳಿಗೆ ಅದು ಇಂಬುಕೊಡುತ್ತದೆ. ಈ ಸತ್ಯವನ್ನು ಟ್ರಂಪ್ ಅರಿತರೆ ಒಳಿತು.