ಪ್ರಧಾನಿ ನರೇಂದ್ರ ಮೋದಿ ಇಂದು 75 ವಸಂತಗಳನ್ನು ಪೂರೈಸಿ 76ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಭಾರತ ಇಂದು ವಿಶ್ವದ ಅಗ್ರಮಾನ್ಯ ರಾಷ್ಟ್ರಗಳ ಸಾಲಿನಲ್ಲಿ ಸರಿಸಮನಾಗಿ ನಿಂತಿದೆ ಎಂದರೆ ಅದರಲ್ಲಿ ಮೋದಿ ಅವರ ಪಾತ್ರ ದೊಡ್ಡದು. 2001ರ ಅಕ್ಟೋಬರ್ ಏಳರಂದು ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೋದಿ 13 ವರ್ಷಗಳ ತಮ್ಮ ಆಡಳಿತದಲ್ಲಿ ಅಭಿವೃದ್ಧಿ ಯ ಹೊಸ ಶಕೆ ಆರಂಭಿಸಿದ್ದರು.
2014ರ ಮೇ 26ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಿಜೆಪಿಯಲ್ಲಾಗಲಿ, ಅನ್ಯ ಪಕ್ಷಗಳಲ್ಲಾಗಲಿ ಮೋದಿಗೆ ಪರ‍್ಯಾಯ ನಾಯಕರೊಬ್ಬರ ಹೆಸರು ಕೇಳಿ ಬಂದಿಲ್ಲ. ರಾಜಕೀಯ ಟೀಕೆ- ಟಿಪ್ಪಣಿಗಳು ಏನೇ ಇರಬಹುದು. ದೇಶ ಕಂಡ ಅತ್ಯಂತ ಪ್ರಭಾವಿ ನಾಯಕರಲ್ಲಿ ಮೋದಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ ಎನ್ನುವುದು ನಿರ್ವಿವಾದ.
ಕಳೆದ 11 ವರ್ಷಗಳಲ್ಲಿ ಅಗಾಧ ಜನಪ್ರಿಯತೆ, ಜನಮನ್ನಣೆ ಪಡೆದರೂ ವಿವಾದ, ದೂರು, ಆರೋಪಗಳು ಅವರ ರಾಜಕೀಯ ಪಯಣದಲ್ಲಿ ಜತೆಯಾಗಿಯೇ ಸಾಗಿವೆ. ಆದರೆ ಇದಾವುದೂ ಮೋದಿ ಅವರ ಧೃತಿಗೆಡಿಸಿಲ್ಲ. ಇಂದು ಮೋದಿ ಜಾಗತಿಕ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿ ದ್ದಾರೆ. ಬಡ ಕುಟುಂಬವೊಂದರಲ್ಲಿ ಜನಿಸಿದ, ಇಂಗ್ಲೀಷ್ ಭಾಷಾ ಪಾಂಡಿತ್ಯವಿಲ್ಲದ, ಸಾಮಾನ್ಯ ಪ್ರಜೆ ವಿಶ್ವದೆತ್ತರಕ್ಕೆ ಬೆಳೆದು ನಿಂತ ಪರಿ ಅಸಾಮಾನ್ಯ ಸಾಧನೆ.
ಕಳೆದ 24 ವರ್ಷಗಳಲ್ಲಿ ಮೋದಿ ಎದುರಿಸಿದ ಸವಾಲುಗಳು, ರಾಜಕೀಯ ಒತ್ತಡಗಳು ಒಂದೆರಡಲ್ಲ. ಅವೆಲ್ಲವನ್ನೂ ಧೈರ್ಯದಿಂದ ಎದುರಿಸಿ ನಿಂತ ಕಾರಣದಿಂದಲೇ ಮೋದಿ ಅವರ ಖ್ಯಾತಿ ಇಂದು ಇಡೀ ವಿಶ್ವಕ್ಕೆ ಪಸರಿಸಿದೆ. ಮೋದಿಯವರಿಂದಾಗಿ ಭಾರತಕ್ಕೆ ವಿಶ್ವಮಾನ್ಯತೆ ದೊರಕಿದೆ ಎಂಬುದನ್ನು ಅವರ ರಾಜಕೀಯ ವಿರೋಽಿಗಳೂ ಒಪ್ಪುತ್ತಾರೆ.
ಬಡ ರಾಷ್ಟ್ರ, ಅಲಿಪ್ತ ರಾಷ್ಟ್ರ, ಅಭಿವೃದ್ಧಿಶೀಲ ದೇಶವೆಂಬ ಹಣೆಪಟ್ಟಿ ಕಳಚಿ ವಿಶ್ವದ ಪ್ರಭಾವಿ ರಾಷ್ಟ್ರ, ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿ, ವಿಜ್ಞಾನ, ತಂತ್ರಜ್ಞಾನದಲ್ಲಿ ಮುಂಚೂಣಿ ರಾಷ್ಟ್ರ ಎಂಬ ಹೊಸ ಅಭಿದಾನಕ್ಕೆ ಕಾರಣವಾಗಿದ್ದು ಮೋದಿ ಅವರ ಆಡಳಿತ ಎನ್ನುವುದರಲ್ಲಿ ಅನುಮಾನವಿಲ್ಲ.
ವಿಶ್ವದ ಶಕ್ತಿಶಾಲಿ ರಾಷ್ಟ್ರಗಳು ಮೋದಿ ಅವರನ್ನು ಸ್ನೇಹಿತನ ಬಳಗಕ್ಕೆ ಸೇರಿಸಿಕೊಂಡರೆ, ತೃತೀಯ ವಿಶ್ವದ ಪಾಲಿಗೆ ಮೋದಿ ಮಾರ್ಗದರ್ಶಕನ ಸಾಲಿನಲ್ಲಿ ನಿಂತಿದ್ದಾರೆ. ಮೋದಿ ಬಗೆಗಿರುವ ಟೀಕೆಗಳೆಲ್ಲ ವನ್ನು ಗಾಳಿಯಲ್ಲಿ ತೂರಿ ಬಿಡಬೇಕಾಗಿಲ್ಲ. ಆದರೆ ಮೋದಿ ಮಾಡಿದ ಮೋಡಿಯನ್ನು ಸ್ಮರಿಸಲೇ ಬೇಕು.