ಭಾರತದಲ್ಲಿ ಪ್ರತಿ ಗಂಟೆಗೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇವರಲ್ಲಿ ಹೆಚ್ಚಿನವರು ಮಹಾರಾಷ್ಟ್ರದವರಾಗಿದ್ದರೆ, ನಂತರದ ಸ್ಥಾನದಲ್ಲಿ ಕರ್ನಾಟಕದ ರೈತರಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ವರದಿಯೊಂದು ಬಹಿರಂಗಪಡಿಸಿದೆ. ಇದು ನಮ್ಮ ಸಮಾಜ ಮತ್ತು ಆಳುಗರು ಗಂಭೀರವಾಗಿ ಆಲೋಚಿಸಬೇಕಾದಂಥ ವಿಷಯವೇ.
ರಾಷ್ಟ್ರಕವಿ ಕುವೆಂಪು ಅವರು ತಮ್ಮ ‘ನೇಗಿಲಯೋಗಿ’ ಕವಿತೆಯಲ್ಲಿ, ‘ಯಾರೂ ಅರಿಯದ ನೇಗಿಲ ಯೋಗಿಯೆ ಲೋಕಕೆ ಅನ್ನವನೀಯುವನು, ಹೆಸರನು ಬಯಸದೆ ಅತಿಸುಖಕೆಳಸದೆ ದುಡಿವನು ಗೌರವಕಾಶಿಸದೆ’ ಎಂದಿದ್ದಾರೆ. ಇಂಥ ನಿಸ್ವಾರ್ಥಭಾವದಿಂದ ಕೆಲಸ ಮಾಡುವ, ದೇಶಕ್ಕೇ ಅನ್ನ ಹಾಕುವ ರೈತರು, ಈಗಲೂ ಆತ್ಮಹತ್ಯೆಯೆಡೆಗೆ ಮುಖಮಾಡುವ ಸ್ಥಿತಿಯಲ್ಲಿದ್ದಾರೆ ಎಂದರೆ, ‘ಹಾಕಿದ್ದ ಬಟ್ಟೆ ಹಾಕಿದಲ್ಲೇ ಬಿದ್ದಿದೆ’ ಎಂಬಂತೆ ದಶಕಗಳೇ ಕಳೆದರೂ ನಮ್ಮ ರೈತಬಾಂಧವರ ಕಷ್ಟ-ಕಾರ್ಪಣ್ಯಗಳಿನ್ನೂ ನಿವಾರಣೆಯಾಗಿಲ್ಲ ಎಂದಾಯಿತು.
ಇದನ್ನೂ ಓದಿ: Vishwavani Editorial: ಈ ಶಿಸ್ತು ಮೇಲ್ಪಂಕ್ತಿಯಾಗಲಿ
ಒಮ್ಮೆ ಗಂಭೀರವಾಗಿ ಅವಲೋಕಿಸಿದರೆ ಕೃಷಿ ವಲಯದ ಸಂಕಷ್ಟಗಳು ಅರ್ಥವಾಗುತ್ತವೆ. ಗುಣ ಮಟ್ಟದ ಬಿತ್ತನೆ ಬೀಜ ಸಿಗದಿರುವುದು, ಸಿಕ್ಕರೂ ರಸಗೊಬ್ಬರದ ಅಲಭ್ಯತೆ, ಸಮಯಕ್ಕೆ ಸರಿಯಾಗಿ ಕೈಕೊಡುವ ಮಳೆರಾಯ, ಹಾಗೂ-ಹೀಗೂ ಹರಸಾಹಸ ಪಟ್ಟು ಬೆಳೆ ತೆಗೆದರೂ, ಅದಕ್ಕೆ ‘ಬೆಂಬಲ ಬೆಲೆ’ಯೂ ಸಿಗದಿರುವುದು, ಮಾರುಕಟ್ಟೆಗೆಂದು ತಂದ ಕೃಷಿ ಉತ್ಪನ್ನಗಳಿಗೆ ಕವಡೆಕಾಸಿನ ಬೆಲೆ ಕಟ್ಟಿದ ಕಾರಣಕ್ಕೆ ಆಕ್ರೋಶಗೊಂಡ ರೈತರು ಅಷ್ಟೂ ಉತ್ಪನ್ನವನ್ನು ರಸ್ತೆಗೆ ಚೆಲ್ಲಿ ಮನೆಗೆ ತೆರಳುವುದು- ಇವೆಲ್ಲವೂ ಬಹುತೇಕ ಪ್ರತಿವರ್ಷವೂ ಕಾಣಬರುವ ದೃಶ್ಯಾವಳಿಯೇ ಆಗಿಬಿಟ್ಟಿವೆ.
ಇಷ್ಟಾಗಿಯೂ ತಥಾಕಥಿತ ಆಳುಗರು ಕೃಷಿವಲಯದ ಸಮಸ್ಯೆಗಳಿಗೆ ನಿರ್ಣಾಯಕ ಪರಿಹಾರೋ ಪಾಯಗಳನ್ನು ಸಜ್ಜುಗೊಳಿಸದಿರುವುದು ಬೇಸರ ತರಿಸುವ ಸಂಗತಿ. ಹೀಗಾದಾಗ, ಕೃಷಿಕಾರ್ಯ ಕ್ಕೆಂದು ಮಾಡಿದ ಚಕ್ರಬಡ್ಡಿಯ ಸಾಲವನ್ನು ತೀರಿಸಲಾಗದೆ, ಆತ್ಮಹತ್ಯೆಗೆ ನಿರ್ಧರಿಸುವಂತಾಗಿದೆ ನಮ್ಮ ರೈತರ ಸ್ಥಿತಿ. ರೈತರ ಇಂಥ ಸಾವು ಬರೀ ಸಾವಲ್ಲ, ಅದು ದೇಶದ ಪಾಲಿಗೆ ಎಚ್ಚರಿಕೆಯ ಗಂಟೆ ಎಂಬುದನ್ನು ಸಂಬಂಧಪಟ್ಟವರು ಅರಿಯುವುದು ಯಾವಾಗ?