ಸಿಡ್ನಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) 2036ರ ಒಲಿಂಪಿಕ್(Olympics 2036) ಕ್ರೀಡಾಕೂಟವನ್ನು ಆಯೋಜಿಸುವ ಮಹತ್ವಾಕಾಂಕ್ಷೆಯ ಪ್ರಯತ್ನದಲ್ಲಿರುವಾಗಲೇ, ಆಸ್ಟ್ರೇಲಿಯಾವು ಇಂತಹ ಮಹತ್ವದ ಕಾರ್ಯಕ್ಕೆ ಅಗತ್ಯವಾದ ಸಾಮರ್ಥ್ಯಗಳನ್ನು ನಿರ್ಮಿಸಲು ಭಾರತಕ್ಕೆ(India aims host Olympics) ಸಹಾಯ ಮಾಡುವಲ್ಲಿ ತನ್ನ ಬೆಂಬಲ ನೀಡುವುದಾಗಿ ತಿಳಿಸಿದೆ.
ಮುಂಬರು ಒಲಿಂಪಿಕ್ಸ್ ಕ್ರೀಡಾಕೂಟಗಳ ಆಯೋಜನೆಗಾಗಿ ಕೆಲವೇ ದಿನಗಳಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ನಿಟ್ಟಿನಲ್ಲಿ ಭಾರತಕ್ಕೆ ಏನೇ ಅಗತ್ಯವಿದ್ದರೂ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ಆಸ್ಟ್ರೇಲಿಯಾ ತಿಳಿಸಿದೆ.
ಸ್ಪೋರ್ಟ್ಸ್ ಟುಡೇ ಜತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಹೈಕಮಿಷನರ್ ಫಿಲಿಪ್ ಗ್ರೀನ್, ‘‘ಆಸ್ಟ್ರೇಲಿಯಾ 2032ರ ಒಲಿಂಪಿಕ್ಸ್ ಆಯೋಜಿಸಲಿದೆ. ಮತ್ತೊಂದೆಡೆ, ಭಾರತವು ಅವುಗಳ ಜೊತೆಗೆ ಒಲಿಂಪಿಕ್ಸ್, ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಕ್ರೀಡಾಕೂಟಗಳನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಈ ಕುರಿತು ಎರಡೂ ದೇಶಗಳ ನಡುವಿನ ಚರ್ಚೆಗಳನ್ನು ವಿಸ್ತರಿಸಲು ನಾವು ಬಯಸುತ್ತೇವೆ. ಭಾರತದೊಂದಿಗೆ ಉತ್ತಮ ಪಾಲುದಾರನಾಗಿರಲು ಆಸ್ಟ್ರೇಲಿಯಾ ಬಯಸುತ್ತದೆ" ಎಂದರು.
ಆಸ್ಟ್ರೇಲಿಯಾ ಇದುವರೆಗೆ ಎರಡು ಬಾರಿ ಒಲಿಂಪಿಕ್ಸ್ ಅನ್ನು ಆಯೋಜಿಸಿರುವ ಅನುಭವವಿದೆ. 1956ರಲ್ಲಿ ಮೆಲ್ಬೋರ್ನ್‌ನಲ್ಲಿ ಮತ್ತು 2000 ರಲ್ಲಿ ಸಿಡ್ನಿಯಲ್ಲಿ ಒಲಿಂಪಿಕ್ಸ್ ಆಯೋಜಿಸಿತ್ತು. ಇದೀಗ ಮೂರನೇ ಬಾರಿಗೂ ಆತಿಥ್ಯ ವಹಿಸಿಕೊಳ್ಳಲು ತಯಾರಿ ನಡೆಸುತ್ತಿದೆ. ಇದಲ್ಲದೇ 1982, 2006 ಮತ್ತು 2018 ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಸಹ ಆಸ್ಟ್ರೇಲಿಯಾ ಆಯೋಜಿಸಿತ್ತು.
2036ರಲ್ಲಿ ಭಾರತದಲ್ಲಿ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಮಹದಾಸೆ ಆಗಿದೆ. ಒಲಿಂಪಿಕ್ಸ್ ಆಯೋಜಿಸುವಲ್ಲಿ ಭಾರತಕ್ಕೆ ನೆರವು ನೀಡಲು ಆಸೀಸ್ ಬೆಂಬಲ ವ್ಯಕ್ತಪಡಿಸಿದ ಕಾರಣ ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಎರಡೂ ದೇಶಗಳ ನಡುವಿನ ರಾಜಕೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಇದನ್ನೂ ಓದಿ Olympics in 2036: ಒಲಿಂಪಿಕ್ಸ್ ಆಯೋಜನೆಗೆ ಭಾರತ ಸಿದ್ಧ: ಅಮಿತ್ ಶಾ