ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ZIM vs KEN: ಓವರ್‌ನಲ್ಲಿ ಆರು ಬೌಂಡರಿ ಬಾರಿಸಿ ಇತಿಹಾಸ ನಿರ್ಮಿಸಿದ ಬ್ರಿಯಾನ್‌ ಬೆನೆಟ್‌!

ಜಿಂಬಾಬ್ವೆಯ ಆರಂಭಿಕ ಬ್ಯಾಟ್ಸ್‌ಮನ್ ಬ್ರಿಯಾನ್ ಬೆನೆಟ್ ಕೀನ್ಯಾ ವಿರುದ್ಧ ಏಕೈಕ ಓವರ್‌ನ ಆರೂ ಎಸೆತಗಳಲ್ಲಿ ಆರು ಬೌಂಡರಿಗಳನ್ನು ಬಾರಿಸಿ ಟಿ20ಐ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಇವರ ಸ್ಪೋಟಕ ಅರ್ಧಶತಕದ ಬಲದಿಂದ ಕೀನ್ಯಾ ತಂಡವನ್ನು ಮಣಿಸಿದ ಜಿಂಬಾಬ್ವೆ ಟಿ20ಐ ವಿಶ್ವಕಪ್‌ಗೆ ಅರ್ಹತೆಯನ್ನು ಪಡೆದಿದೆ.

ಓವರ್‌ಗೆ 6 ಬೌಂಡರಿ ಬಾರಿಸಿ ವಿಶ್ವ ದಾಖಲೆ ಬರೆದ ಬೆನೆಟ್‌!

ಏಕೈಕ ಓವರ್‌ನಲ್ಲಿ 6 ಬೌಂಡರಿ ಬಾರಿಸಿ ವಿಶ್ವ ದಾಖಲೆ ಬರೆದ ಬ್ರಿಯಾನ್‌ ಬೆನೆಟ್‌. -

Profile Ramesh Kote Oct 3, 2025 11:23 PM

ನವದೆಹಲಿ: ಗುರುವಾರ ನಡೆದಿದ್ದ 2026ರ ಐಸಿಸಿ ಟಿ20 ವಿಶ್ವಕಪ್‌ (T20I World Cup 2025) ಆಫ್ರಿಕಾ ಕ್ವಾಲಿಫೈಯರ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಕೀನ್ಯಾವನ್ನು ಸೋಲಿಸುವ ಮೂಲಕ ಜಿಂಬಾಬ್ವೆ (Zimbabwe) ತಮ್ಮ ಏಳನೇ ಬಾರಿ ಚುಟುಕು ವಿಶ್ವಕಪ್‌ಗೆ ಅರ್ಹತೆ ಪಡೆಯಿತು. ಆರಂಭಿಕ ಬ್ಯಾಟ್ಸ್‌ಮನ್ ಬ್ರಿಯಾನ್ ಬೆನೆಟ್ (Brian Bennett) ಅವರ 51 ರನ್‌ಗಳ ಭರ್ಜರಿ ಅರ್ಧಶತಕದ ನೆರವಿನಿಂದ ಜಿಂಬಾಬ್ವೆ, ಹರಾರೆಯಲ್ಲಿ ಏಳು ವಿಕೆಟ್‌ಗಳ ಜಯ ಸಾಧಿಸಿತು. ಈ ಗೆಲುವು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ತಮ್ಮ ತಂಡವನ್ನು ಸ್ಥಾನ ಪಡೆಯುವಂತೆ ಮಾಡಿತು. ಈ ಪಂದ್ಯದಲ್ಲಿ ಬ್ರಿಯಾನ್‌ ಬೆನೆಟ್ ಅವರು ಟಿ20ಐ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

ಕೀನ್ಯಾ ನೀಡಿದ್ದ 123 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ಪರ 21ರ ವಯಸ್ಸಿನ ಬ್ರಿಯಾನ್‌ ಬೆನೆಟ್ ಟಿ20ಐ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಏಕೈಕ ಓವರ್‌ನಲ್ಲಿ ಆರು ಬೌಂಡರಿಗಳನ್ನು ಹೊಡೆದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ. ಅವರು ಕೀನ್ಯಾದ ಎಡಗೈ ವೇಗಿ ಲ್ಯೂಕಸ್ ಎನ್‌ಡಾಂಡಾಸನ್‌ ಮೇಲೆ ದಾಳಿ ನಡೆಸಿದರು. ಸತತ ಆರು ಬೌಂಡರಿಗಳನ್ನು ಸಿಡಿಸುವ ಮೂಲಕ ಅವರು ತಮ್ಮ ತಂಡವನ್ನು ಗೆಲ್ಲಿಸಿದರು.

2026ರ ಐಸಿಸಿ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ನಮೀಬಿಯಾ, ಜಿಂಬಾಬ್ವೆ!

ಜಿಂಬಾಬ್ವೆಯನ್ನು ಅರ್ಹತೆಯ ಹಾದಿಗೆ ತರುವಲ್ಲಿ ಬ್ರಿಯಾನ್‌ ಬೆನೆಟ್‌ ಸಮಯ ವ್ಯರ್ಥ ಮಾಡಲಿಲ್ಲ. ಅವರ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌ಗಳು ಮತ್ತು ಎಂಟು ಬೌಂಡರಿಗಳು ಸೇರಿದ್ದವು. ಇದರಲ್ಲಿ ಲ್ಯೂಕಸ್ ಎನ್‌ಡಾಂಡಾಸನ್ ಎಸೆದ ಒಂದೇ ಓವರ್‌ನಲ್ಲಿ ಆರು ಬೌಂಡರಿಗಳನ್ನು ಬಾರಿಸಿದರು. ಅವರು ಮತ್ತು ತಡಿವಾನಾಶೆ ಮಾರುಮಣಿ (39) ಮೊದಲ ವಿಕೆಟ್‌ಗೆ 76 ರನ್‌ಗಳನ್ನು ಕಲೆ ಹಾಕಿದ್ದರು. ಜಿಂಬಾಬ್ವೆ 123 ರನ್ ಗಳಿಸಿ ಇನ್ನೂ 30 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು. ವಿರಾಜ್ ಪಟೇಲ್ ಕೀನ್ಯಾದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು, 29 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರು.



ಇದಕ್ಕೂ ಮೊದಲು, ಕೀನ್ಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದಾಗ್ಯೂ, ಅವರ ಒಟ್ಟು ಮೊತ್ತ 6 ವಿಕೆಟ್‌ಗೆ 122 ರನ್‌ಗಳು ಸಾಕಾಗಲಿಲ್ಲ. ಆರಂಭಿಕರಾದ ಪುಷ್ಕರ್ ಶರ್ಮಾ (11) ಮತ್ತು ಧಿರೇನ್ ಗೊಂಡಾರಿಯಾ (1) ಅವರ ವಿಕೆಟ್‌ ಒಪ್ಪಿಸಿದ ನಂತರ, ರಾಕೆಪ್ ಪಟೇಲ್ ಬ್ಯಾಟಿಂಗ್‌ಗೆ ಬಂದರು. ಅವರು 47 ಎಸೆತಗಳಲ್ಲಿ 65 ರನ್‌ಗಳೊಂದಿಗೆ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಒಂದು ವೇಳೆ ಇವರು ಅರ್ಧಶತಕ ಗಳಿಸಿಲ್ಲವಾಗಿದ್ದರೆ, ಕೀನ್ಯಾ 100ರ ಗಡಿಯನ್ನು ದಾಟುತ್ತಿರಲಿಲ್ಲ.



ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ನಮೀಬಿಯಾ

ಜಿಂಬಾಬ್ವೆ ಅರ್ಹತೆ ಪಡೆಯುವುದಕ್ಕೂ ಮುನ್ನ ಗುರುವಾರ ಹರಾರೆಯಲ್ಲಿ ನಡೆದಿದ್ದ ಸೆಮಿಫೈನಲ್‌ನಲ್ಲಿ ತಾಂಜಾನಿಯಾವನ್ನು ಸೋಲಿಸುವ ಮೂಲಕ ಆಫ್ರಿಕಾ ಅರ್ಹತಾ ಸುತ್ತಿನ ಪಂದ್ಯಗಳಿಂದ ನಮೀಬಿಯಾ, 2026 ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಂಡಿತು. ದಕ್ಷಿಣ ಆಫ್ರಿಕಾ ತಂಡ ಈಗಾಗಲೇ ನೇರ ಅರ್ಹತೆಯ ಮೂಲಕ ತನ್ನ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಇದು ನಮೀಬಿಯಾ ಟಿ20 ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿ ಕಾಣಿಸಿಕೊಳ್ಳಲಿದೆ, ಈ ಹಿಂದೆ 2021 (ಸೂಪರ್ 12), 2022 (ಗುಂಪು ಹಂತ) ಮತ್ತು 2024 (ಗುಂಪು ಹಂತ)ರಲ್ಲಿ ಆಡಿತ್ತು.