ಜೈಪುರ: ನೆಹಾಲ್ ವಧೇರಾ (70 ರನ್) ಅರ್ಧಶತಕ ಹಾಗೂ ಹರಪ್ರೀತ್ ಬ್ರಾರ್ (22ಕ್ಕೆ 3) ಅವರ ಸ್ಪಿನ್ ಮೋಡಿಯ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ (PBKS), ರಾಜಸ್ಥಾನ್ ರಾಯಲ್ಸ್(RR) ವಿರುದ್ಧ ಹೈಸ್ಕೋರಿಂಗ್ ಪಂದ್ಯದಲ್ಲಿ 10 ರನ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. 220 ರನ್‌ಗಳ ಬೃಹತ್ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ಪರ ಧ್ರುವ್ ಜುರೆಲ್ ಕೊನೆಯ ಓವರ್‌ವರೆಗೂ ಕಠಿಣ ಹೋರಾಟ ನಡೆಸಿದ್ದರು. ಆದರೂ ಆರ್‌ಆರ್ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಈ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ 10ನೇ ಸೋಲು ಇದಾಗಿದೆ. ಇದರೊಂದಿಗೆ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ 9ನೇ ಸ್ಥಾನಕ್ಕೆ ಕುಸಿದಿದೆ.
ಭಾನುವಾರ ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಬೃಹತ್ ಮೊತ್ತದ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ತಂಡ, ಯಶಸ್ವಿ ಜೈಸ್ವಾಲ್ (50) ಹಾಗೂ ಧ್ರುವ್ ಜುರೆಲ್ (53) ಅವರ ಅರ್ಧಶತಕಗಳ ಹೊರತಾಗಿಯೂ ಕೇವಲ 10 ರನ್‌ಗಳಿಂದ ಸೋಲು ಒಪ್ಪಿಕೊಂಡಿತು. ತನ್ನ ಪಾಲಿನ 20 ಓವರ್‌ಗಳಿಗೆ ರಾಜಸ್ಥಾನ್ ರಾಯಲ್ಸ್, 7 ವಿಕೆಟ್‌ಗಳ ನಷ್ಟಕ್ಕೆ 209 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ತವರು ಅಭಿಮಾನಿಗಳ ಎದುರು ಮತ್ತೊಂದು ಸೋಲು ಅನುಭವಿಸಿತು.
IPL 2025: ʻಕೆಕೆಆರ್‌ನ ಐಪಿಎಲ್ ಗೆಲುವಿನ ಶ್ರೇಯ ಶ್ರೇಯಸ್ ಅಯ್ಯರ್‌ಗೆ ಸಿಕ್ಕಿರಲಿಲ್ಲʼ-ಸುನೀಲ್ ಗವಾಸ್ಕರ್!
ಆರಂಭದಲ್ಲಿ ಅಬ್ಬರಿಸಿದ್ದ ಜೈಸ್ವಾಲ್-ವೈಭವ್
ಸವಾಲಿನ ಗುರಿ ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕೇವಲ 4.5 ಓವರ್‌ಗಳಿಗೆ 76 ರನ್ ಗಳಿಸುವ ಮೂಲಕ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಸ್ಪೋಟಕ ಬ್ಯಾಟ್ ಮಾಡಿದ್ದ ವೈಭವ್, ಕೇವಲ 15 ಎಸೆತಗಳಲ್ಲಿ 40 ರನ್ ಗಳಿಸಿದ ಬಳಿಕ ಹರಪ್ರೀತ್ ಬ್ರಾರ್‌ಗೆ ಔಟ್ ಆದರು. ನಂತರ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿದ್ದ ಜೈಸ್ವಾಲ್, 25 ಎಸೆತಗಳಲ್ಲಿ 50 ರನ್ ಸಿಡಿಸಿದ್ದರು. ಆ ಮೂಲಕ ಆರ್‌ಆರ್ ತಂಡದ ಗೆಲುವಿನ ಹಾದಿಗೆ ಭದ್ರ ಅಡಿಪಾಯವನ್ನು ಹಾಕಿದ್ದರು. ಆದರೆ, ಹರಪ್ರೀತ್ ಬ್ರಾರ್ ಸ್ಪಿನ್ ಮೋಡಿಗೆ ಜೈಸ್ವಾಲ್ ವಿಕೆಟ್ ಒಪ್ಪಿಸಿದರು.
ಧ್ರುವ್ ಜುರೆಲ್ ಹೋರಾಟ ವ್ಯರ್ಥ
ನಂತರ ರಿಯಾನ್ ಪರಾಗ್ ಹಾಗೂ ಸಂಜು ಸ್ಯಾಮ್ಸನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟ್ ಮಾಡಿದ್ದ ಧ್ರುವ್ ಜುರೆಲ್ 31 ಎಸೆತಗಳಲ್ಲಿ 53 ರನ್ ಗಳಿಸಿ ಆರ್‌ಆರ್ ತಂಡವನ್ನು ಗೆಲುವಿನ ಹಾದಿಯಲ್ಲಿರಿಸಿದ್ದರು. ಆದರೆ, ಮತ್ತೊಂದು ತುದಿಯಲ್ಲಿ ಯಾರೂ ಸರಿಯಾಗಿ ಸಾಥ್ ನೀಡದ ಕಾರಣ ಜುರೆಲ್ 19ನೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್ ಆದರು. ಪಂಜಾಬ್ ಪರ ಹರಪ್ರೀತ್ ಬ್ರಾರ್ 3 ವಿಕೆಟ್ ಕಿತ್ತರೆ, ಅಝಮತ್‌ವುಲ್ಲಾ ಒಮರ್ಜಾಯ್ ಮತ್ತು ಮಾರ್ಕೊ ಯೆನ್ಸನ್ ತಲಾ ಎರಡೆರಡು ವಿಕೆಟ್ ಕಿತ್ತರು.
219 ರನ್ ಕಲೆ ಹಾಕಿದ್ದ ಪಂಜಾಬ್ ಕಿಂಗ್ಸ್
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡ, ನೆಹಾಲ್ ವಧೇರಾ (70) ಹಾಗೂ ಶಶಾಂಕ್ ಸಿಂಗ್ (59) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 219 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ರಾಜಸ್ಥಾನ್‌ಗೆ 220 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು.
ಪಂಜಾಬ್‌ಗೆ ಆರಂಭಿಕ ಆಘಾತ
ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಪ್ರಿಯಾಂಶ್ ಆರ್ಯ (9), ಮಿಚೆಲ್ ಒವೆನ್ (0) ಹಾಗೂ ಪ್ರಭ್ ಸಿಮ್ರಾನ್ (21) ಅವರು ಬಹುಬೇಗ ವಿಕೆಟ್ ಒಪ್ಪಿಸಿದರು. ಆ ಮೂಲಕ ಪಂಜಾಬ್ ಕೇವಲ 34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.
ಮಿಂಚಿದ ವಧೆರಾ, ಶಶಾಂಕ್
ಶ್ರೇಯಸ್ ಅಯ್ಯರ್ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ನೆಹಾಲ್ ವದೇರಾ ಹಾಗೂ ಶಶಾಂಕ್ ಸಿಂಗ್. ಸ್ಪೋಟಕ ಬ್ಯಾಟ್ ಮಾಡಿದ ನೆಹಾಲ್, ಕೇವಲ 37 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 70 ರನ್‌ಗಳನ್ನು ಬಾರಿಸಿ, ತಂಡದ ಮೊತ್ತವನು150 ರ ಗಡಿ ದಾಟಿಸಿ ವಿಕೆಟ್ ಒಪ್ಪಿಸಿದರು. ನಂತರ ಕೊನೆಯವರೆಗೂ ಸ್ಪೋಟಕ ಬ್ಯಾಟ್ ಮಾಡಿದ ಶಶಾಂಕ್ ಸಿಂಗ್, 30 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 59 ರನ್ ಸಿಡಿಸಿದರು. ಆ ಮೂಲಕ ಪಂಜಾಬ್ ಮೊತ್ತವನ್ನು 200ರ ಗಡಿ ದಾಟಿಸಲು ನೆರವು ನೀಡಿದರು. ಕೊನೆಯಲ್ಲಿ ಒಮರ್ಜಾಯ್ 9 ಎಸೆತಗಳಲ್ಲಿ ಅಜೇಯ 21 ರನ್‌ಗಳ ಕೊಡುಗೆಯನ್ನು ನೀಡಿದ್ದರು.