ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CSK vs SRH: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೋಲಿನ ಬರೆ ಎಳೆದ ಸನ್‌ರೈಸರ್ಸ್‌ ಹೈದರಾಬಾದ್‌!

CSK vs SRH Match Highlights: ಹರ್ಷಲ್‌ ಪಟೇಲ್‌ (28 ಕ್ಕೆ 4) ಪರಿಣಾಮಕಾರಿ ಬೌಲಿಂಗ್‌ ದಾಳಿಯ ಸಹಾಯದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 43ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 5 ವಿಕೆಟ್‌ ಗೆಲುವು ಪಡೆಯಿತು.

ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಸನ್‌ರೈಸರ್ಸ್‌ ಹೈದರಾಬಾದ್‌ಗೆ 5 ವಿಕೆಟ್‌ ಜಯ.

ಚೆನ್ನೈ: ಹರ್ಷಲ್‌ ಪಟೇಲ್‌ (28 ಕ್ಕೆ 4) ಅವರ ಶಿಸ್ತುಬದ್ದ ಬೌಲಿಂಗ್‌ ದಾಳಿಯ ಸಹಾಯದಿಂದ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ, 5 ವಿಕೆಟ್‌ಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡವನ್ನು ಮಣಿಸಿತು. ಆ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಎಸ್‌ಆರ್‌ಎಚ್‌ ಮೂರನೇ ಗೆಲುವು ಪಡೆದಿದೆ. ಆದರೆ, ತವರು ಅಭಿಮಾನಿಗಳ ಎದುರು ಏಳನೇ ಸೋಲು ಅನುಭವಿಸಿದ ಎಂಎಸ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಪ್ಲೇಆಫ್ಸ್‌ ಹಾದಿ ಇನ್ನಷ್ಟು ಕಠಿಣವಾಗಿದೆ.

ಶುಕ್ರವಾರ ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ನೀಡಿದ್ದ 155 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ಇಶಾನ್‌ ಕಿಶನ್‌ (44) ಹಾಗೂ ಕಮಿಂದು ಮೆಂಡಿಸ್‌ (32*) ಅವರ ಬ್ಯಾಟಿಂಗ್‌ ಬಲದಿಂದ 18.4 ಓವರ್‌ಗಳಿಗೆ ಗೆದ್ದು ಬೀಗಿತು. ಸಿಎಸ್‌ಕೆ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿ 4 ವಿಕೆಟ್‌ಗಳನ್ನು ಕಬಳಿಸಿದ್ದ ಎಸ್‌ಆರ್‌ಎಸ್‌ ವೇಗಿ ಹರ್ಷಲ್‌ ಪಟೇಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

IPL 2025: 14ರ ಪೋರ ವೈಭವ್‌ ಸೂರ್ಯವಂಶಿ ಭಯಮುಕ್ತ ಬ್ಯಾಟಿಂಗ್‌ಗೆ ಸುರೇಶ್‌ ರೈನಾ ಫಿದಾ!

ಇಶಾನ್‌ ಕಿಶನ್‌ ನಿರ್ಣಾಯಕ ಬ್ಯಾಟಿಂಗ್‌

ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಹಿಂಬಾಲಿಸಿದ ಸನ್‌ರೈಸರ್ಸ್‌ ತಂಡ ಕೂಡ ಖಾತೆ ತೆರೆಯದೆ ಆರಂಭಿಕ ಅಭಿಷೇಕ್‌ ಶರ್ಮಾ ಅವರ ವಿಕೆಟ್‌ ಅನ್ನು ಕಳೆದುಕೊಂಡಿತ್ತು. ಕೆಲ ಕಾಲ ಬ್ಯಾಟ್‌ ಮಾಡಿದ್ದ ಟ್ರಾವಿಸ್‌ ಹೆಡ್‌ 16 ಎಸೆತಗಳಲ್ಲಿ 19 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಹೆನ್ರಿಚ್‌ ಕ್ಲಾಸೆನ್‌ ನಿರಾಶೆ ಮೂಡಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೆಲ ಕಾಲ ಉತ್ತಮ ಬ್ಯಾಟ್‌ ಮಾಡಿದ ಇಶಾನ್‌ ಕಿಶನ್‌, 34 ಎಸೆತಗಳಲ್ಲಿ 44 ರನ್‌ ಗಳಿಸಿ ತಂಡದ ಮೊತ್ತವನ್ನು 90 ರ ಗಡಿ ದಾಟಿಸಿ ವಿಕೆಟ್‌ ಒಪ್ಪಿಸಿದರು.



ಮಿಂಚಿದ ಕಮಿಂದು-ನಿತೀಶ್‌ ರೆಡ್ಡಿ

ಆದರೆ, ಐದನೇ ವಿಕೆಟ್‌ಗೆ ಜೊತೆಯಾಗಿದ್ದ ನಿತೀಶ್‌ ರೆಡ್ಡಿ ಹಾಗೂ ಕಮಿಂದು ಮೆಂಡಿಸ್‌ 49 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ಹೈದರಾಬಾದ್‌ ತಂಡವನ್ನು ಗೆಲ್ಲಿಸಿದರು. ಬೌಲಿಂಗ್‌ನಲ್ಲಿ ಒಂದು ವಿಕೆಟ್‌ ಕಿತ್ತಿದ್ದ ಕಮಿಂದು, ಬ್ಯಾಟಿಂಗ್‌ನಲ್ಲಿ 22 ಎಸೆತಗಳಲ್ಲಿ ಅಜೇಯ 32 ರನ್‌ ಗಳಿಸಿದರು ಹಾಗೂ ಇವರ ಜೊತೆ ಕೊನೆಯವರೆಗೂ ಬ್ಯಾಟ್‌ ಮಾಡಿದ್ದ ನಿತೀಶ್‌ ರೆಡ್ಡಿ 19 ರನ್‌ ಹಾಗೂ ಇದಕ್ಕೂ ಮುನ್ನ ಅನಿಕೇತ್‌ ವರ್ಮಾ 19 ರನ್‌ ಗಳಿಸಿದ್ದರು.



ಸಿಎಸ್‌ಕೆ 154 ರನ್‌ಗಳಿಗೆ ಆಲ್‌ಔಟ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ಹರ್ಷಲ್‌ ಪಟೇಲ್‌ ಪರಿಣಾಮಕಾರಿ ಬೌಲಿಂಗ್‌ ದಾಳಿಗೆ ನಲುಗಿ 19.5 ಓವರ್‌ಗಳಿಗೆ 154 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಎದುರಾಳಿ ಸನ್‌ರೈಸರ್ಸ್‌ ಹೈದರಾಬಾದ್‌ಗೆ 155 ರನ್‌ಗಳ ಗುರಿಯನ್ನು ನೀಡಿತು. 25 ಎಸೆತಗಳಲ್ಲಿ 42 ರನ್‌ಗಳನ್ನು ಗಳಿಸಿದ ಡೆವಾಲ್ಡ್‌ ಬ್ರೆವಿಸ್ ಸಿಎಸ್‌ಕೆ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

IPL 2025: ರಾಜಸ್ಥಾನ್‌ ಎದುರು ರೂಪಿಸಿದ್ದ ಬ್ಯಾಟಿಂಗ್‌ ರಣತಂತ್ರ ರಿವೀಲ್‌ ಮಾಡಿದ ವಿರಾಟ್‌ ಕೊಹ್ಲಿ!

ಮೊದಲು ಬ್ಯಾಟ್‌ ಮಾಡುವಂತಾದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಪಂದ್ಯದ ಮೊಟ್ಟ ಮೊದಲ ಎಸೆತದಲ್ಲಿಯೇ ಮೊಹಮ್ಮದ್‌ ಶಮಿ, ಆರಂಭಿಕ ಶೇಖ್‌ ರಶೀದ್‌ರನ್ನು ಔಟ್‌ ಮಾಡಿದರು. ಆ ಮೂಲಕ ಶೂನ್ಯ ಸಂಪಾದನೆಯಲ್ಲಿಯೇ ಸಿಎಸ್‌ಕೆ ಒಂದು ವಿಕೆಟ್‌ ಕಳೆದುಕೊಂಡಿತ್ತು. ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಸ್ಯಾಮ್‌ ಕರನ್‌ ಕೂಡ 9 ರನ್‌ ಗಳಿಸಿ ಔಟ್‌ ಆದರು. 19 ಎಸೆತಗಳಲ್ಲಿ 30 ರನ್‌ ಗಳಿಸಿ ಆಡುತ್ತಿದ್ದ ಆಯುಷ್‌ ಮ್ಹಾತ್ರೆ ಕೂಡ ವಿಕೆಟ್‌ ಒಪ್ಪಿಸಿದರು.



ಅಬ್ಬರಿಸಿದ ಡೆವಾಲ್ಡ್‌ ಬ್ರೆವಿಸ್‌

ರವೀಂದ್ರ ಜಡೇಜಾ (21), ಶಿವಂ ದುಬೆ (12), ದೀಪಕ್‌ ಹೂಡ (22) ಹಾಗೂ ಎಂಎಸ್‌ ಧೋನಿ (6) ಅವರು ಬಹುಬೇಗ ವಿಎಕಟ್‌ ಒಪ್ಪಿಸಿದರು. ಆದರೆ, ಸಿಎಸ್‌ಕೆ ಪರ ಮೊದಲನೇ ಪಂದ್ಯವಾಡಿದ ಡೆವಾಲ್ಡ್‌ ಬ್ರೆವಿಸ್‌ ಸ್ಪೋಟಕ ಬ್ಯಾಟ್‌ ಮಾಡಿದರು. ಕೆಲ ಕಾಲ ಹೈದರಾಬಾದ್‌ ಬೌಲರ್‌ಗಳನ್ನು ದಂಡಿಸಿದ ಬ್ರೆವಿಸ್‌, ಕೇವಲ 25 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ 42 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಹರ್ಷಲ್‌ ಪಟೇಲ್‌ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ಕೊಟ್ಟರು. ಆ ಮೂಲಕ ಅರ್ಧಶತಕದಂಚಿನಲ್ಲಿವ ವಿಕೆಟ್‌ ಒಪ್ಪಿಸಿದರು.

ಮಿಂಚಿದ ಹರ್ಷಲ್‌ ಪಟೇಲ್‌

ಸನ್‌ರೈಸರ್ಸ್‌ ಹೈದರಾಬಾದ್‌ ಪರ ಮಧ್ಯಮ ಓವರ್‌ಗಳಲ್ಲಿ ಶಿಸ್ತುಬದ್ದ ಬೌಲಿಂಗ್‌ ದಾಳಿ ನಡೆಸಿದ ಹರ್ಷಲ್‌ ಪಟೇಲ್‌, 4 ಓವರ್‌ಗಳಿಗೆ 28 ರನ್‌ಗಳನ್ನು ನೀಡಿ 4 ವಿಕೆಟ್‌ ಕಿತ್ತರು. ಪ್ಯಾಟ್‌ ಕಮಿನ್ಸ್‌ ಹಾಗೂ ಜಯದೇವ್‌ ಉನದ್ಕಟ್‌ ತಲಾ ಎರಡೆರಡು ವಿಕೆಟ್‌ಗಳನ್ನು ಕಿತ್ತರು.