ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಕ್ರಿಕೆಟ್‌ ಆಡುವಾಗ ಗಾಯಕ್ಕೆ ತುತ್ತಾಗಿದ್ದ ರಾಹುಲ್‌ ದ್ರಾವಿಡ್‌ ರಾಜಸ್ಥಾನ್‌ ರಾಯಲ್ಸ್‌ಗೆ ಸೇರ್ಪಡೆ!

Rahul Dravid Joins Rajasthan Royals: ಬೆಂಗಳೂರಿನಲ್ಲಿ ಕೆಎಸ್‌ಸಿಎ ಲೀಗ್‌ ಕ್ರಿಕೆಟ್‌ ಪಂದ್ಯವಾಡುಯತ್ತಿದ್ದ ವೇಳೆ ಗಾಯಕ್ಕೆ ತುತ್ತಾಗಿದ್ದ ರಾಜಸ್ಥಾನ ರಾಯಲ್ಸ್‌ ತಂಡದ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ಮಾರ್ಚ್‌ 12 ರಂದು ರಾಜಸ್ಥಾನ್‌ ರಾಯಲ್ಸ್‌ ಶಿಬಿರಕ್ಕೆ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ರಾಜಸ್ಥಾನ್‌ ರಾಯಲ್ಸ್‌ ತಂಡ ತನ್ನ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ತಿಳಿಸಿದೆ.

ರಾಹುಲ್‌ ದ್ರಾವಿಡ್‌ಗೆ ಗಾಯ

ನವದೆಹಲಿ: ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಗೂ ಮುನ್ನ ರಾಜಸ್ಥಾನ ರಾಯಲ್ಸ್ (Rajasthan Royals) ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು ಬೆಂಗಳೂರಿನಲ್ಲಿ ಕ್ರಿಕೆಟ್‌ ಆಡುವಾಗ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್ 12 ರಂದು ಬುಧವಾರ ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್ ರಾಜಸ್ಥಾನ್‌ ರಾಯಲ್ಸ್‌ ತಂಡದ ತರಬೇತಿ ಶಿಬಿರಕ್ಕೆ ಸೇರಲಿದ್ದಾರೆ ಎಂದು ರಾಜಸ್ಥಾನ್ ಫ್ರಾಂಚೈಸಿ ಸ್ವತಃ ದೃಢಪಡಿಸಿದೆ. ಆದರೆ, ಋತುವಿನ ಆರಂಭಕ್ಕೂ ಮುನ್ನ ದ್ರಾವಿಡ್ ಗಾಯಗೊಂಡಿರುವುದು ರಾಜಸ್ಥಾನ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಆದರೆ, ಅವರು ವೇಗವಾಗಿ ಗುಣಮುಖರಾಗುತ್ತಿದ್ದಾರೆಂದು ಕೂಡ ಇದೇ ವೇಳೆ ರಾಜಸ್ಥಾನ್‌ ರಾಯಲ್ಸ್‌ ತಿಳಿಸಿದೆ.

"ಬೆಂಗಳೂರಿನಲ್ಲಿ ಕ್ರಿಕೆಟ್ ಆಡುವಾಗ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಎಡಗಾಲಿಗೆ ಗಾಯವಾಗಿದೆ. ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಇಂದು (ಮಾರ್ಚ್‌ 12) ಜೈಪುರದಲ್ಲಿ ತಂಡದ ತರಬೇತಿ ಶಿಬಿರವನ್ನು ಸೇರಲಿದ್ದಾರೆ," ಎಂದು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ, ದ್ರಾವಿಡ್ ಎಡಗಾಲಿಗೆ ಪ್ಲಾಸ್ಟರ್ ಹಾಕಿಕೊಂಡಿರುವುದು ಕಂಡು ಬಂದಿದೆ.

IPL 2025: ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಬರೆಯಲು ವಿರಾಟ್‌ ಕೊಹ್ಲಿಗೆ ಒಂದು ಶತಕ ಅಗತ್ಯ!

ರಾಹುಲ್ ದ್ರಾವಿಡ್ ಅವರ ಹೆಡ್‌ ಕೋಚ್‌ ಅವಧಿಯಲ್ಲಿ ಭಾರತ ತಂಡ 2024ರ ಟಿ20 ವಿಶ್ವಕಪ್ ಗೆದ್ದಿತು. ಇದಾದ ನಂತರ, ಮೆಗಾ ಹರಾಜಿಗೂ ಮುನ್ನ ದ್ರಾವಿಡ್ ಅವರನ್ನು ಐಪಿಎಲ್ 2025ಕ್ಕೆ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಹೆಡ್‌ ಕೋಚ್‌ ಆಗಿ ನೇಮಿಸಲಾಗಿತ್ತು. ಮುಂಬರುವ ಋತುವಿನಲ್ಲಿ ದ್ರಾವಿಡ್, ನಾಯಕ ಸಂಜು ಸ್ಯಾಮ್ಸನ್ ಮತ್ತು ರಾಜಸ್ಥಾನದ ಕ್ರಿಕೆಟ್ ನಿರ್ದೇಶಕ ಕುಮಾರ್ ಸಂಗಕ್ಕಾರ ಅವರೊಂದಿಗೆ ಕಾರ್ಯ ನಿರ್ವಹಿಸಲಿದ್ದಾರೆ.



ರಾಜಸ್ಥಾನ್‌ ರಾಯಲ್ಸ್‌ ತಂಡದ ಮೊದಲ ಪಂದ್ಯ ಯಾವಾಗ?

2025ರ ಐಪಿಎಲ್‌ ಟೂರ್ನಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ, ಮಾರ್ಚ್ 23 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ತನ್ನ ಎರಡನೇ ಪಂದ್ಯವನ್ನು ಮಾರ್ಚ್ 26 ರಂದು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ರಾಜಸ್ಥಾನ ರಾಯಲ್ಸ್ ತಂಡವು ಐಪಿಎಲ್ 2024ರಲ್ಲಿ ಪ್ಲೇಆಫ್ ತಲುಪಿತ್ತು. ಆದರೆ, ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೋತು ತನ್ನ ಅಭಿಯಾನವನ್ನು ಮುಗಿಸಿತ್ತು. ರಾಜಸ್ಥಾನ್ ಕೊನೆಯ ಬಾರಿಗೆ 2022 ರಲ್ಲಿ ಫೈನಲ್ ತಲುಪಿತ್ತು.



ರಾಜಸ್ಥಾನ್‌ ರಾಯಲ್ಸ್‌ ತಂಡ

ಜೋಫ್ರಾ ಆರ್ಚರ್ , ಮಹೇಶ್ ತೀಕ್ಷಣ, ವಾನಿಂದು ಹಸರಂಗ, ಆಕಾಶ್ ಮಧ್ವಾಲ್, ಕುಮಾರ್ ಕಾರ್ತಿಕೇಯ, ನಿತೀಶ್ ರಾಣಾ, ತುಷಾರ್ ದೇಶಪಾಂಡೆ, ಶುಭಂ ದುಬೆ, ಯುಧ್ವೀರ್ ಸಿಂಗ್, ಫಝಲ್ಹಕ್ ಫಾರೂಕಿ, ವೈಭವ್ ಸೂರ್ಯವಂಶಿ, ಕ್ವೆನಾ ಮಫಾಕ, ಕುಣಾಲ್ ರಾಥೋಡ್, ಅಶೋಕ್ ಶರ್ಮಾ, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಸಂದೀಪ್ ಶರ್ಮಾ, ಶಿಮ್ರಾನ್ ಹೆಟ್ಮಾಯರ್, ಧ್ರುವ್ ಜುರೆಲ್