ದುಬೈ: ಇಂಗ್ಲೆಂಡ್ ವಿರುದ್ಧ ಕೆನಿಂಗ್ಟನ್‌ನ ಓವಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ (IND vs ENG) ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದ ಗೆಲುವಿನಲ್ಲಿ ಭಾರತ ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಪ್ರಮುಖ ಪಾತ್ರವನ್ನು ವಹಿಸಿದ್ದರು. ಈ ಹಿನ್ನಲೆಯಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು 2025ರ ಆಗಸ್ಟ್ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಯನ್ನು ನೀಡಲಾಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಮೊಹಮ್ಮದ್ ಸಿರಾಜ್ ನಿರ್ಣಾಯಕ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು ಒಂಬತ್ತು ವಿಕೆಟ್‌ಗಳನ್ನು ಗಳಿಸುವ ಮೂಲಕ ಭಾರತ ತಂಡ, ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 2-2 ಅಂತರದಲ್ಲಿ ಸಮಬಲ ಮಾಡಿಕೊಳ್ಳಲು ನೆರವು ನೀಡಿದ್ದರು. ಅವರು ವಿಶೇಷವಾಗಿ ದ್ವಿತೀಯ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿ ಟೀಮ್ ಇಂಡಿಯಾಗೆ ಜಯವನ್ನು ತಂದುಕೊಟ್ಟಿದ್ದರು.
Asia Cup 2025: ಸಂಜು ಸ್ಯಾಮ್ಸನ್ ಬದಲು ಜಿತೇಶ್ ಶರ್ಮಾ ಆಡಬೇಕೆಂದ ಕೆ ಶ್ರೀಕಾಂತ್!
ಈ ಟೆಸ್ಟ್ ಪಂದ್ಯದಲ್ಲಿ 46 ಓವರ್‌ಗಳನ್ನು ಬೌಲ್ ಮಾಡಿದ ಬಲಗೈ ವೇಗಿ, ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಆಗಸ್ಟ್ ತಿಂಗಳ ಸ್ಪರ್ಧೆಯಲ್ಲಿ ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಮತ್ತು ವೆಸ್ಟ್ ಇಂಡೀಸ್ ವೇಗಿ ಜೇಡನ್ ಸೀಲ್ಸ್ ಅವರು ಸ್ಪರ್ಧೆಯಲ್ಲಿದ್ದರು. ಆದರೆ ಅವರಿಬ್ಬರನ್ನು ಹಿಂದಿಕ್ಕಿ ಸಿರಾಜ್ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
2025ರ ಆಗಸ್ಟ್ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಸಿರಾಜ್, ಈ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಹೆಮ್ಮೆಯ ಕ್ಷಣ ಎಂದು ಹೇಳಿದರು. "ಐಸಿಸಿ ತಿಂಗಳ ಆಟಗಾರ ಎಂದು ಹೆಸರಿಸಲ್ಪಟ್ಟಿರುವುದು ವಿಶೇಷ ಗೌರವ. ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಒಂದು ಸ್ಮರಣೀಯ ಸರಣಿಯಾಗಿತ್ತು ಮತ್ತು ನಾನು ಭಾಗವಹಿಸಿದ ಅತ್ಯಂತ ತೀವ್ರವಾದ ಸ್ಪರ್ಧೆಗಳಲ್ಲಿ ಇದು ಒಂದಾಗಿತ್ತು. ಕೆಲವು ಪ್ರಮುಖ ಸ್ಪೆಲ್‌ಗಳೊಂದಿಗೆ, ವಿಶೇಷವಾಗಿ ನಿರ್ಣಾಯಕ ಕ್ಷಣಗಳಲ್ಲಿ ಕೊಡುಗೆ ನೀಡಿರುವುದರಿಂದ ನನಗೆ ಹೆಮ್ಮೆ ಇದೆ," ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
"ಪ್ರಶಸ್ತಿಯು ತಂಡದ ಪ್ರಯತ್ನದ ಪ್ರತಿಬಿಂಬವಾಗಿದೆ. ಈ ಪ್ರಶಸ್ತಿಯು ನನ್ನಂತೆಯೇ ನನ್ನ ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಗೂ ಸೇರಿದೆ, ಏಕೆಂದರೆ ಅವರ ನಿರಂತರ ಪ್ರೋತ್ಸಾಹ ಮತ್ತು ನಂಬಿಕೆ ನನ್ನನ್ನು ಮುನ್ನಡೆಸಿತು. ಎದುರಾಳಿ ತಂಡದ ತವರು ಪರಿಸ್ಥಿತಿಯಲ್ಲಿ ಉನ್ನತ ಬ್ಯಾಟಿಂಗ್ ವಿಭಾಗದ ವಿರುದ್ಧ ಬೌಲ್ ಮಾಡುವುದು ಸವಾಲಿನದ್ದಾಗಿತ್ತು, ಆದರೆ ಅದು ನನ್ನಲ್ಲಿರುವ ಒಳ್ಳೆಯದನ್ನು ಹೊರ ತರಲು ನೆರವು ನೀಡಿತ್ತು," ಎಂದು ಅವರು ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಈ ಮೈಲುಗಲ್ಲನ್ನು ಮೀರಿ ಮುನ್ನಡೆಯಲು ದೃಢನಿಶ್ಚಯ ಮಾಡಿದ್ದೇನೆ ಎಂದು ಹೇಳಿದರು. "ನಾನು ಭಾರತದ ಜೆರ್ಸಿಯನ್ನು ಧರಿಸಿದಾಗಲೆಲ್ಲಾ ಕಠಿಣ ಪರಿಶ್ರಮ ಪಡುವುದನ್ನು ಮುಂದುವರಿಸುತ್ತೇನೆ ಮತ್ತು ನನ್ನ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ," ಎಂದು ಹೇಳಿದ್ದಾರೆ.