ನವದೆಹಲಿ: ಸಂಪೂರ್ಣವಾಗಿ ಫಿಟ್ ಇದ್ದರೂ ಭಾರತ ತಂಡಕ್ಕೆ(India's ODI Squad) ಆಯ್ಕೆ ಮಾಡದ ಬಗ್ಗೆ ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಬಿಸಿಸಿಐ ಆಯ್ಕೆದಾರರ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ಬಗ್ಗೆ ಖಾಸಗಿ ಕಾರ್ಯಕ್ರಮವೊಂದಲ್ಲಿ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ (Ajit Agarkar) ಪ್ರತಿಕ್ರಿಯೆ ನೀಡಿದ್ದಾರೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಳಿಕ ಶಮಿ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ, ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಹಾಗೂ ಆಸ್ಟ್ರೇಲಿಯಾ ಪ್ರವಾಸದ ಭಾರತ ತಂಡದಲ್ಲಿಯೂ ಸ್ಥಾನ ಪಡದಿಲ್ಲ. ಈ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಪಂದ್ಯವನ್ನು ಆಡುವ ನನಗೆ, 50 ಓವರ್‌ಗಳ ಏಕದಿನ ಪಂದ್ಯವನ್ನು ಆಡುವ ಫಿಟ್‌ನೆಸ್ ಇಲ್ಲವಾ ಎಂದು ಪ್ರಶ್ನೆ ಮಾಡಿದ್ದರು.
"ಇದನ್ನು ನಾನು ಈ ಹಿಂದೆಯೂ ಹೇಳಿದ್ದೆ. ಆಯ್ಕೆಯು ನನ್ನ ಕೈಯಲ್ಲಿ ಇಲ್ಲ. ಫಿಟ್‌ನೆಸ್ ಸಮಸ್ಯೆ ಇದ್ದಿದ್ದರೆ, ನಾನು ಬಂಗಾಳ ತಂಡದ ಪರ ಆಡಲು ಇಲ್ಲಿ ಇರುತ್ತಿರಲಿಲ್ಲ. ಇದರ ಬಗ್ಗೆ ನಾನು ಮಾತನಾಡುವ ಅಗತ್ಯವಿಲ್ಲ ಹಾಗೂ ವಿವಾದ ಸೃಷ್ಟಿಸಲು ನನಗೆ ಇಷ್ಟವಿಲ್ಲ. ರಣಜಿ ಟ್ರೋಫಿ ಟೂರ್ನಿಯಲ್ಲಿ 4 ದಿನಗಳ ಪಂದ್ಯಗಳನ್ನು ಆಡಬಹುದಾದರೆ, 50 ಓವರ್‌ಗಳ ಕ್ರಿಕೆಟ್ ಅನ್ನು ಕೂಡ ಆಡಬಹುದು," ಎಂದು ಮೊಹಮ್ಮದ್ ಶಮಿ ಹೇಳಿದ್ದರು.
IND vs AUS: ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಮೊಹಮ್ಮದ್ ಶಮಿ ಹೇಳಿಕೆಗೆ ಅಗರ್ಕರ್ ಪ್ರತಿಕ್ರಿಯೆ
ಎನ್‌ಡಿಟಿವಿ ಜೊತೆ ಮಾತನಾಡಿದ ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್, "ಮೊಹಮ್ಮದ್ ಶಮಿ ನನ್ನ ಬಳಿ ಈ ಮಾತನ್ನು ಕೇಳಿದರೆ, ನಾನೇ ನೇರವಾಗಿ ಅವರಿಗೆ ಉತ್ತರ ಕೊಡುತ್ತೇನೆ. ನನ್ನ ಅರ್ಥ, ಅವರು ಇಲ್ಲಿ ಇದ್ದಿದ್ದರೆ, ನಾನೇ ಅವರಿಗೇ ಹೇಳುತ್ತಿದ್ದೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಏನು ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. ಬಹುಶಃ ನಾನು ಅದನ್ನು ಓದಿದ್ದರೆ, ನಾನೇ ಅವರಿಗೆ ಕರೆ ಮಾಡಿ ಮಾತನಾಡುತ್ತಿದ್ದೆ ಆದರೆ, ನನ್ನ ಫೋನ್ ಎಲ್ಲಾ ಆಟಗಾರರಿಗೂ ಲಭ್ಯವಿದೆ. ಕಳೆದ ಹಲವು ತಿಂಗಳುಗಳಿಂದ ನಾನು ಅವರ ಜೊತೆಗೆ ಸಾಕಷ್ಟು ಸಂಭಾಷಣೆಯನ್ನು ನಡೆಸಿದ್ದೇನೆ. ಹಾಗಾಗಿ ನಾನು ಇದೀಗ ನಿಮಗೆ ಹೆಡ್ ಲೈನ್ ನೀಡಲು ಇಷ್ಟವಿಲ್ಲ," ಎಂದು ತಿಳಿಸಿದ್ದಾರೆ.
ಶಮಿಯನ್ನು ಗುಣಗಾನ ಮಾಡಿದ ಅಗರ್ಕರ್
"ಅವರು ಭಾರತಕ್ಕೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಏನಾದರೂ ಹೇಳಿದ್ದರೆ, ಬಹುಶಃ ಅದು ನಾನು ಅವರೊಂದಿಗೆ ಅಥವಾ ಅವರು ನನ್ನೊಂದಿಗೆ ನಡೆಸುವ ಸಂಭಾಷಣೆಯಾಗಿರಬಹುದು. ಆದರೆ ಇಂಗ್ಲೆಂಡ್‌ಗೂ ಮೊದಲೇ, ಅವರು ಫಿಟ್ ಆಗಿದ್ದರೆ, ಅವರು ಆ ವಿಮಾನದಲ್ಲಿ ಇರುತ್ತಿದ್ದರು ಎಂದು ನಾವು ಹೇಳಿದ್ದೆವು. ದುರದೃಷ್ಟವಶಾತ್, ಅವರು ಇರಲಿಲ್ಲ," ಎಂದು ಹೇಳಿದ್ದಾರೆ.
ʻಯಾರೂ ನನ್ನ ಜೊತೆ ಮಾತನಾಡಿಲ್ಲʼ-ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ಮೊಹಮ್ಮದ್ ಶಮಿ ಆಕ್ರೋಶ!
ಮೊಹಮ್ಮದ್ ಶಮಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಳಿಕ ಭಾರತದ ಪರ ಆಡಿಲ್ಲ. ಅವರು ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ತಮ್ಮ ಫಿಟ್‌ನೆಸ್ ಅನ್ನು ಸಾಬೀತುಪಡಿಸಬೇಕಾಗುತ್ತದೆ. ಇದು ಸಾಧ್ಯವಾದರೆ, ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪರ ಆಡಬಹುದು.
ಅಗರ್ಕರ್ ಹೇಳಿಕೆಗೆ ಶಮಿ ಪ್ರತಿಕ್ರಿಯೆ
ಉತ್ತರಾಖಂಡ ಹಾಗೂ ಬಂಗಾಳ ನಡುವಣ ರಣಜಿ ಟ್ರೋಫಿ ಪಂದ್ಯದ ಮೂರನೇ ದಿನದಾಟದಾಂತ್ಯಕ್ಕೆ ಅಜಿತ್ ಅಗರ್ಕರ್ ನೀಡಿದ ಹೇಳಿಕೆಗೆ ಶಮಿ ಪ್ರತಿಕ್ರಿಯೆ ನೀಡಿದರು. "ಅವರಿಗೆ (ಅಜಿತ್ ಅಗರ್ಕರ್) ಏನು ಬೇಕೋ ಅದನ್ನು ಮಾತನಾಡಲು ಬಿಡಿ. ನಾನು ಹೇಗೆ ಬೌಲ್ ಮಾಡಿದ್ದೇನೆಂದು ನೀವು ವೀಕ್ಷಿಸಿದ್ದೀರಿ. ಇದೆಲ್ಲವೂ ನಿಮ್ಮ ಕಣ್ಣ ಮುಂದೆ ನಡೆಯುತ್ತಿದೆ," ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.