ಅಬುದಾಬಿ: ಇಲ್ಲಿನ ಶೇಖ್ ಜಾಯೇದ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಒಮಾನ್ (IND vs OMN) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ದೊಡ್ಡ ಮೊತ್ತವನ್ನು ಕಲೆ ಹಾಕುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದ ಬಳಿಕ ಟೀಮ್ ಇಂಡಿಯಾ ಈಗಾಗಲೇ ಸೂಪರ್-4ಕ್ಕೆ ಪ್ರವೇಶ ಮಾಡಿದೆ. ಹಾಗಾಗಿ ಒಮಾನ್ ವಿರುದ್ಧದ ಪಂದ್ಯದ ಫಲತಾಂಶ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಭಾರತ ಈ ಪಂದ್ಯದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಬಹುದು.
ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆಯನ್ನು ತರಲಾಗಿದೆ. ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿಗೆ ವಿಶ್ರಾಂತಿ ನೀಡಲಾಗಿದೆ. ಇವರಿಬ್ಬರ ಬದಲು ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್‌ಗೆ ಮಣೆ ಹಾಕಲಾಗಿದೆ. ಕಳೆದ ಎರಡೂ ಪಂದ್ಯಗಳಲ್ಲಿ ಇವರು ಆಡಿರಲಿಲ್ಲ. ಆ ಮೂಲಕ ಈ ಪಂದ್ಯದಲ್ಲಿ ಇಬ್ಬರು ಪೂರ್ಣ ಪ್ರಮಾಣದ ವೇಗಿಗಳಿಗೆ ಅವಕಾಶವನ್ನು ನೀಡಲಾಗಿದೆ. ಎದುರಾಳಿ ಒಮಾನ್ ತಂಡದ ಪ್ಲೇಯಿಂಗ್ XIನಲ್ಲಿಯೂ ಎರಡು ಬದಲಾವಣೆಯನ್ನು ತರಲಾಗಿದೆ.
Asia Cup 2025: ಅಂಪೈರ್ ತಲೆಗೆ ಚೆಂಡೆಸೆದು ಗಾಯಗೊಳಿಸಿದ ಪಾಕ್ ಆಟಗಾರ; ವಿಡಿಯೊ ವೈರಲ್
ಕಳೆದ ಎರಡೂ ಪಂದ್ಯಗಳಲ್ಲಿ ಭಾರತ ತಂಡ ಗೆಲುವು ಪಡೆದಿತ್ತು. ಮೊದಲನೇ ಪಂದ್ಯದಲ್ಲಿ ಯುಎಇ ವಿರುದ್ದ 9 ವಿಕೆಟ್‌ಗಳಿಂದ ಗೆದ್ದಿತ್ತು. ನಂತರ ತನ್ನ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಆ ಮೂಲಕ ಟೀಮ್ ಇಂಡಿಯಾ, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸೂಪರ್ -4ಕ್ಕೆ ಪ್ರವೇಶ ಮಾಡಿತ್ತು. ಆದರೆ, ಒಮಾನ್ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಆ ಮೂಲಕ ಟೂರ್ನಿಯಿಂದ ಎಲಿಮಿನೇಟ್ ಆಗಿದೆ. ಹಾಗಾಗಿ ಭಾರತದ ವಿರುದ್ಧ ಗೆದ್ದರೂ ಅಥವಾ ಸೋತರೂ ಯಾವುದೇ ಲಾಭ ನಷ್ಟವಾಗುವುದಿಲ್ಲ. ಟೀಮ್ ಇಂಡಿಯಾ ಎದುರು ಅತ್ಯುತ್ತಮ ಅನುಭವವನ್ನು ಪಡೆಯಲು ಒಮಾನ್ ಎದುರು ನೋಡುತ್ತಿದೆ.
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ (ವಿ.ಕೀ), ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲ್‌ದೀಪ್ ಯಾದವ್
ಒಮಾನ್: ಆಮಿರ್ ಕಲೀಂ, ಜತೀಂದರ್ ಸಿಂಗ್(ನಾಯಕ), ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ(ವಿ.ಕೀ), ಶಾ ಫೈಝಲ್, ಝಿಕ್ರಿಯಾ ಇಸ್ಲಾಂ, ಆರ್ಯನ್ ಬಿಶ್ತ್, ಮೊಹಮ್ಮದ್ ನದೀಮ್, ಶಕೀಲ್ ಅಹ್ಮದ್, ಸಮಯ್ ಶ್ರೀವಾಸ್ತವ, ಜಿತೇನ್ ರಮಾನಂದಿ