IPL 2025: ಆರ್‌ಸಿಬಿಗೆ ಮರಳಿದ ಲಿಯಾಮ್ ಲಿವಿಂಗ್‌ಸ್ಟೋನ್, ರೊಮ್ಯಾರಿಯೊ ಶೆಫರ್ಡ್!
ಮೇ 17 ರಂದು ಆರಂಭವಾಗಲಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಪುನರಾರಂಭವವಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳಿಗೂ ವಿದೇಶಿ ಆಟಗಾರರು ಮರಳುತ್ತಿದ್ದಾರೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಲ್‌ರೌಂಡರ್‌ಗಳಾದ ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ರೊಮ್ಯಾರಿಯೊ ಶೆಫರ್ಡ್ ಅವರು ಮರಳಿದ್ದಾರೆ.

ಲಿಯಾಮ್ ಲಿವಿಂಗ್‌ಸ್ಟೋನ್-ರೊಮ್ಯಾರಿಯೊ ಶೆಫರ್ಡ್

ಬೆಂಗಳೂರು: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಇನ್ನುಳಿದ ಪಂದ್ಯಗಳನ್ನು ಆಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ (Liam Livingstone) ಹಾಗೂ ವೀಂಡೀಸ್ ದೈತ್ಯ ಆಲ್‌ರೌಂಡರ್ ರೊಮ್ಯಾರಿಯೊ ಶೆಫರ್ಡ್ (Romario Shepherd) ಸೇರ್ಪಡೆಯಾಗಿದ್ದಾರೆ. ಆ ಮೂಲಕ ಮೇ 17 ರಂದು ಲಖನೌ ಸೂಪರ್ ಜಯಂಟ್ಸ್ ಎದುರು ಪಂದ್ಯಕ್ಕೂ ಮುನ್ನ ಆರ್‌ಸಿಬಿ ಆನೆ ಬಲ ಸಿಕ್ಕಂತಾಗಿದೆ. ಅದೇ ರೀತಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ವಿಂಡೀಸ್ ಸ್ಟಾರ್‌ಗಳಾದ ಆಂಡ್ರೆ ರಸೆಲ್ ಹಾಗೂ ಸುನೀಲ್ ನರೇನ್ ಕೂಡ ಮರಳಿದ್ದಾರೆ. ಕೆಕೆಆರ್ ಮೆಂಟರ್ ಡ್ವೇನ್ ಬ್ರಾವೊ ಕೂಡ ಕಾಣಿಸಿಕೊಂಡಿದ್ದಾರೆ.
ಈ ಸೀಸನ್‌ನಲ್ಲಿ ಆರ್‌ಸಿಬಿ ಪರ ಶೆಫರ್ಡ್‌ಗೆ ಸೀಮಿತ ಅವಕಾಶಗಳು ಲಭಿಸಿವೆ. ಲಿಯಾಮ್ ಲಿವಿಂಗ್‌ಸ್ಟೋನ್ ಮೊದಲ ಅವಧಿಯ ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿದ ಕಾರಣ, ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ರೊಮ್ಯಾರಿಯೊ ಶೆಫರ್ಡ್‌ಗೆ ಅವಕಾಶವನ್ನು ನೀಡಲಾಗಿತ್ತು. ಈ ಪಂದ್ಯದಲ್ಲಿ ಅವರು ಕೇವಲ 14 ಎಸೆತಗಳಲ್ಲಿ 53 ರನ್‌ಗಳನ್ನು ಸಿಡಿಸಿದ್ದರು. ಐಪಿಎಲ್ ಇತಿಹಾಸದಲ್ಲಿ ವೇಗದ ಅರ್ಧಶತಕ ಸಿಡಿಸಿದ ಆರ್‌ಸಿಬಿ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಶೆಫರ್ಡ್ ಬರೆದಿದ್ದರು. ತಮ್ಮ ಈ ದಾಖಲೆ ಇನಿಂಗ್ಸ್‌ನಲ್ಲಿ ಆರ್‌ಸಿಬಿ ಆಲ್‌ರೌಂಡರ್ 6 ಸಿಕ್ಸರ್ ಹಾಗೂ 4 ಬೌಂಡರಿಗಳನ್ನು ಬಾರಿಸಿದ್ದರು.
ಆರ್‌ಸಿಬಿ ಪಾಲಿಗೆ ಬೇಸರದ ವಿಷಯ ಏನೆಂದರೆ ಅವರು ಟೂರ್ನಿಯ ಸಂಪೂರ್ಣ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನ. ಏಕೆಂದರೆ ಮೇ 29 ರಂದು ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಏಕದಿನ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ಏಕದಿನ ತಂಡದಲ್ಲಿ ಶೆಫರ್ಡ್‌ಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕರೆ, ಅವರು ಪ್ಲೇಆಫ್ಸ್‌ಗೆ ಅಲಭ್ಯರಾಗಲಿದ್ದಾರೆ. ಆ ಮೂಲಕ ಆರ್‌ಸಿಬಿಗೆ ಭಾರಿ ಹಿನ್ನಡೆಯಾಗಲಿದೆ.
IPL 2025: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾದ ಮುಸ್ತಾಫಿಝುರ್ ರೆಹಮಾನ್!
ಲಿಯಾಮ್ ಲಿವಿಂಗ್‌ಸ್ಟೋನ್ ಅವರು ಇಂಗ್ಲೆಂಡ್ ವೈಟ್‌ಬಾಲ್ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಆರ್‌ಸಿಬಿಗೆ ಪೂರ್ಣ ಪ್ರಮಾಣದ ಅವಧಿಯಲ್ಲಿ ಲಭ್ಯರಾಗಲಿದ್ದಾರೆ. ಇದು ಆರ್‌ಸಿಬಿ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಇನ್ನು ಇವರ ಸಹ ಆಟಗಾರ ಜಾಕೋಬ್ ಬೆಥೆಲ್ ಅವರು ಈಗಾಗಲೇ ಆರ್‌ಸಿಬಿಗೆ ಸೇರ್ಪಡೆಯಾಗಿದ್ದಾರೆ. ಅವರು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಇಂಗ್ಲೆಂಡ್ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಣ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ನಂತರ ಅವರು ಇಂಗ್ಲೆಂಡ್‌ಗೆ ಮರಳಲಿದ್ದಾರೆ.
ಫಿಲ್ ಸಾಲ್ಟ್, ಟಿಮ್ ಡೇವಿಡ್ ಲಭ್ಯ
ಅಂತಾರಾಷ್ಟ್ರೀಯ ಪಂದ್ಯಗಳ ಕಾರಣ ಹಲವು ಸ್ಟಾರ್ ಆಟಗಾರರು ಜೂನ್ 3ರ ವರೆಗೆ ಆರ್‌ಸಿಬಿಗೆ ದೊರೆಯುವುದು ಅನುಮಾನ. ಆದರೆ, ಇಂಗ್ಲೆಂಡ್ ಆರಂಭಿಕ ಫಿಲ್ ಸಾಲ್ಟ್ ಹಾಗೂ ಆಸ್ಟ್ರೇಲಿಯಾ ಆಲ್‌ರೌಂಡರ್ ಟಿಮ್ ಡೇವಿಸ್ ಕೊನೆಯವರೆಗೂ ಆರ್‌ಸಿಬಿಗೆ ಲಭ್ಯರಾಗಲಿದ್ದಾರೆ. ಫಿಲ್ ಸಾಲ್ಟ್ ಇಂಗ್ಲೆಂಡ್ ಟಿ20 ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಆದರೆ, ಅವರ ಟಿ20 ಸರಣಿ ಜೂನ್ 6 ರಂದು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಅವರು ಆರ್‌ಸಿಬಿ ಪರ ಟೂರ್ನಿಯನ್ನು ಮುಗಿಸಲಿದ್ದಾರೆ.
IPL 2025: ಪ್ಲೇಆಫ್ಸ್‌ಗೆ ಸ್ಟಾರ್ ಆಟಗಾರನನ್ನು ಕಳೆದುಕೊಳ್ಳಲಿರುವ ಆರ್‌ಸಿಬಿ, ಮುಂಬೈಗೂ ಹಿನ್ನಡೆ!
ಜಾಶ್ ಹೇಝಲ್‌ವುಡ್-ಎನ್‌ಗಿಡಿ ಪ್ಲೇಆಫ್ಸ್‌ಗೆ ಅನುಮಾನ
ಜೂನ್ 11 ರಂದು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಜಾಶ ಹೇಝಲ್‌ವುಡ್ ಹಾಗೂ ದಕ್ಷಿಣ ಆಫ್ರಿಕಾದ ಲುಂಗಿ ಎನ್‌ಗಿಡಿ ಅವರು ತಮ್ಮ-ತಮ್ಮ ರಾಷ್ಟ್ರೀಯ ತಂಡಗಳಿಗೆ ಸೇರ್ಪಡೆಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಬ್ಬರೂ ನಾಕೌಟ್ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಪ್ಲೇಯಿಂಗ್ XIಗೆ ನುವಾನ್ ತುಷಾರ ಅವರನ್ನು ಸೇರಿಸಿಕೊಳ್ಳಬಹುದು.
ಪ್ಲೇಆಫ್ಸ್ ಸನಿಹದಲ್ಲಿ ಆರ್‌ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿಯವರೆಗೂ ಆಡಿದ 11 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಪಡೆದಿದೆ ಹಾಗೂ 16 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಆ ಮೂಲಕ ಟೂರ್ನಿಯ ಪ್ಲೇಆಫ್ಸ್‌ಗೆ ಬಹುತೇಕ ಅರ್ಹತೆ ಪಡೆದಿದೆ. ಮೇ 17 ರಂದು ಕೋಲ್ಕತಾ ನೈಟ್ ರೈಡರ್ಸ್ ಎದುರು ಗೆದ್ದರೆ ಆರ್‌ಸಿಬಿ ಅಧಿಕೃತವಾಗಿ ಅರ್ಹತೆ ಪಡೆಯಲಿದೆ.