ನವದೆಹಲಿ: ರೋಜರ್ ಬಿನ್ನಿ (Roger Binny) ಅವರ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯ ಅಧ್ಯಕ್ಷ ಸ್ಥಾನವನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅಲಂಕರಿಸಲಿದ್ದಾರೆಂಬ ಸುದ್ದಿಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಬಿಸಿಸಿಐಗೆ ಮುಂದಿನ ಅಧ್ಯಕ್ಷರಾಗುವ ಸ್ಪರ್ಧೆಯಲ್ಲಿದ್ದಾರೆ ಎಂಬ ಊಹಾಪೋಹಗಳನ್ನು ದಿಗ್ಗಜ ಬ್ಯಾಟ್ಸ್‌ಮನ್ ಮತ್ತು ಭಾರತದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಗುರುವಾರ ತಳ್ಳಿಹಾಕಿದ್ದಾರೆ. ಅವರ ನಿರ್ವಹಣಾ ಸಂಸ್ಥೆಯು ಅಂತಹ ಎಲ್ಲಾ ಮಾತುಕತೆಗಳನ್ನು 'ಆಧಾರರಹಿತ' ಎಂದು ಕರೆದಿದೆ. ತೆಂಡೂಲ್ಕರ್‌ರ ನಿರ್ವಹಣಾ ಸಂಸ್ಥೆಯು ಅವರ ಪರವಾಗಿ ಹೇಳಿಕೆ ನೀಡಿದ್ದು, ರೋಜರ್ ಬಿನ್ನಿ ಅವರ ಸಂಭಾವ್ಯ ಉತ್ತರಾಧಿಕಾರಿಯಾಗಬಹುದು ಎಂಬ ಊಹಾಪೋಹಗಳಿಗೆ ಅಂತ್ಯ ಹಾಡಿದೆ.
ಬಿನ್ನಿ ಅವರಿಗೆ 70 ವರ್ಷ ತುಂಬಿದಾಗ ಅವರ ಅವಧಿ ಜುಲೈನಲ್ಲಿ ಅಂತ್ಯವಾಗಿತ್ತು. ಸಚಿನ್ ತೆಂಡೂಲ್ಕರ್ ಅವರ ಮ್ಯಾನೇಜ್‌ಮೆಂಟ್ ಗ್ರೂಪ್ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ, "ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಹುದ್ದೆಗೆ ಪರಿಗಣಿಸಲಾಗುತ್ತಿದೆ ಅಥವಾ ನಾಮನಿರ್ದೇಶನ ಮಾಡಲಾಗಿದೆ ಎಂಬ ಬಗ್ಗೆ ಕೆಲವು ಸುದ್ದಿಗಳು ಮತ್ತು ವದಂತಿಗಳು ಹರಡುತ್ತಿವೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಆದರೆ, ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ನಾವು ಸ್ಪಷ್ಟವಾಗಿ ಹೇಳಬಯಸುತ್ತೇವೆ," ಎಂದು ತಿಳಿಸಿದೆ.
ಬಾಳೆಹಣ್ಣು ಖರೀದಿಗೆ 35 ಲಕ್ಷ ಖರ್ಚು: ಬಿಸಿಸಿಐಗೆ ಹೈಕೋರ್ಟ್ ನೋಟಿಸ್!
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯು ಸೆಪ್ಟೆಂಬರ್ 28 ರಂದು ನಡೆಯುವ ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚುನಾವಣೆ ನಡೆಸಲಿದೆ. ಬಿನ್ನಿ ಅವರನ್ನು 2022ರ ಅಕ್ಟೋಬರ್‌ನಲ್ಲಿ ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು ಮತ್ತು ಮಂಡಳಿಯ ನಿಯಮವು ಈ ಹುದ್ದೆಗೆ 70 ವರ್ಷಗಳ ವಯಸ್ಸಿನ ಮಿತಿಯನ್ನು ನಿಗದಿಪಡಿಸುತ್ತದೆ. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ಒಂಬುಡ್ಸ್‌ಮನ್ ಮತ್ತು ನಡವಳಿಕೆ ಅಧಿಕಾರಿಯನ್ನು ಸಹ ನೇಮಿಸಲಾಗುತ್ತದೆ ಮತ್ತು ಐಸಿಸಿಯಲ್ಲಿ ಮಂಡಳಿಯ ಪ್ರತಿನಿಧಿಯನ್ನು ಸಹ ನೇಮಿಸಲಾಗುತ್ತದೆ.
ಭಾರತೀಯ ಶ್ರೇಷ್ಠ ಕ್ರಿಕೆಟಿಗರಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಒಬ್ಬರು. ಅವರು ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆ ಸಚಿನ್ ಹೆಸರಿನಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಗಳಿಸಿದ ಏಕೈಕ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. ಕ್ರಿಕೆಟ್ ದೇವರು ತಮ್ಮ ವೃತ್ತಿಜೀವನದಲ್ಲಿ 200 ಟೆಸ್ಟ್, 463 ಏಕದಿನ ಮತ್ತು ಒಂದು ಟಿ20ಐ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಕ್ರಮವಾಗಿ 15921, 18426 ಮತ್ತು 10 ರನ್ ಗಳಿಸಿದ್ದಾರೆ.
ಆಗಸ್ಟ್‌ನಲ್ಲಿ ರೋಜರ್ ಬಿನ್ನಿ ಅವರ ಅಧಿಕಾರಾವಧಿ ಮುಗಿದ ನಂತರ ರಾಜೀವ್ ಶುಕ್ಲಾ ಬಿಸಿಸಿಐನ ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ರೋಜರ್ ಬಿನ್ನಿಗಿಂತ ಮೊದಲು, ಬಿಸಿಸಿಐನ ಉನ್ನತ ಹುದ್ದೆಯನ್ನು ಅಲಂಕರಿಸಿದ ಕೊನೆಯ ಭಾರತೀಯ ಕ್ರಿಕೆಟಿಗ ಸೌರವ್ ಗಂಗೂಲಿ. ಈ ಹಿಂದೆ, ಸುನಿಲ್ ಗವಾಸ್ಕರ್ ಮತ್ತು ಶಿವಲಾಲ್ ಯಾದವ್ ಅವರು ಮಧ್ಯಂತರ ಅಧ್ಯಕ್ಷರಾಗಿದ್ದರು.