ಲಂಡನ್: ಐಡೆನ್ ಮಾರ್ಕ್ರಮ್(136) ಅವರ ಸೊಗಸಾದ ಶತಕ ಪರಾಕ್ರಮದ ನೆರವು ಪಡೆದ ದಕ್ಷಿಣ ಆಫ್ರಿಕಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು 5 ವಿಕೆಟ್ ಅಂತರದಿಂದ ಮಣಿಸಿ ಕೊನೆಗೂ ವಿಶ್ವಕಪ್ ಟ್ರೋಫಿ ಬರ ನೀಗಿಸಿಕೊಂಡಿದೆ. ಜತೆಗೆ ಚೋಕರ್ಸ್ ಹಣೆಪಟ್ಟಿಯನ್ನು ಕೂಡ ಕಳಚಿಕೊಂಡಿದೆ. ಇದು ದಕ್ಷಿಣ ಆಫ್ರಿಕಾಗೆ 27 ವರ್ಷದ ಬಳಿಕ ಒಲಿದ ಐಸಿಸಿ ಟ್ರೋಫಿಯಾಗಿದೆ. 1998ನೇ ಸಾಲಿನ ಚಾಂಪಿಯನ್ಸ್ ಟ್ರೋಫಿ ಗೆಲುವು ತಂಡದ ಮೊದಲ ಐಸಿಸಿ ಟ್ರೋಫಿಯಾಗಿತ್ತು.
2 ವಿಕೆಟ್‌ಗೆ 213 ರನ್ ಗಳಿಸಿದ್ದಲ್ಲಿಂದ ಶನಿವಾರ ಆಟ ಮುಂದುವರಿಸಿದ ದಕ್ಷಿಣ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 285 ರನ್ ಬಾರಿಸಿ ಇನ್ನೂ ಒಂದುವರೆ ದಿನ ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದು ಬೀಗಿತ್ತು. ಈ ಮೂಲಕ ಸತತ 2ನೇ ಬಾರಿ ಟ್ರೋಫಿ ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿದ್ದ ಆಸೀಸ್‌ನ ಸೊಕ್ಕಡಗಿಸಿತು.
65 ರನ್ ಗಳಿಸಿದ್ದ ನಾಯಕ ಟೆಂಬ ಬವುಮಾ ನಾಲ್ಕನೇ ದಿನದಾಟದಲ್ಲಿ ಕೇವಲ 3 ರನ್ ಬಾರಿಸಿ ಒಟ್ಟು 68 ರನ್‌ಗೆ ವಿಕೆಟ್ ಕಳೆದುಕೊಂಡರು. ಆ ಬಳಿಕ ಬಂದ ಟ್ರಿಸ್ಟಾನ್ ಸ್ಟಬ್ಸ್ (8) ರನ್ ಗಳಿಸಿ ಔಟಾದರು. ಈ ವೇಳೆ ಆಸೀಸ್‌ಗೆ ಗೆಲುವಿನ ಆಸೆ ಚಿಗುರೊಡೆಯಿತು. ಆದರೆ ಮತ್ತೊಂದು ತುದಿಯಲ್ಲಿ ಬೇರೂರಿ ನಿಂತಿದ್ದ ಐಡೆನ್ ಮಾರ್ಕ್ರಮ್ ಅತ್ಯಂತ ತಾಳ್ಮೆಯುತ ಬ್ಯಾಟಿಂಗ್ ಮೂಲಕ ತಂಡಕ್ಕೆ ಜಯ ಒಲಿಯುವಂತೆ ಮಾಡಿದರು. ಗೆಲುವಿನ 5 ರನ್ ಬೇಕಿದ್ದಾಗ ಮಾರ್ಕ್ರಮ್ ವಿಕೆಟ್ ಕಳೆದುಕೊಂಡರು. 102 ರನ್‌ನಿಂದ ಆಟ ಮುಂದುವರಿಸಿದ ಅವರು ಒಟ್ಟು 136 ರನ್ ಗಳಿಸಿದರು. ಅಂತಿಮವಾಗಿ ಬೆಡಿಂಗ್‌ಹ್ಯಾಮ್ ಅಜೇಯ 21 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಂದ್ಯದ ತಿರುವು
ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 212 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 138ರನ್‌ಗೆ ಸರ್ಪತನ ಕಂಡು 74 ರನ್ ಹಿನ್ನಡೆ ಎದುರಿಸಿತು. ದ್ವಿತೀಯ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಅನಿರೀಕ್ಷಿತ ಕುಸಿತ ಕಂಡಿತು. ಲುಂಗಿ ಎನ್‌ಗಿಡಿ, ರಬಾಡ ದಾಳಿಗೆ ತತ್ತರಿಸಿ ಹೋಯಿತು. 207 ರನ್ ಗಳಿಸಲಷ್ಟೇ ಶಕ್ತವಾಯಿತು. ಗೆಲುವಿಗೆ 282ರನ್ ಪಡೆದ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ ಆಡಿದ ರೀತಿ ನೋಡುವಾಗ ಈ ಮೊತ್ತವನ್ನು ಪೇರಿಸುವುದು ಅಸಾಧ್ಯ ಎನ್ನಲಾಯಿತು. ಆದರೆ ಯಾರೂ ಕೂಡ ನಿರೀಕ್ಷೆ ಮಾಡದಂತೆ ಐಡೆನ್ ಮಾರ್ಕ್ರಮ್ ಮತ್ತು ನಾಯಕ ಟೆಂಬ ಬವುಮಾ ಆಸೀಸ್‌ನ ಪ್ರಚಂಡ ವೇಗಿಗಳನ್ನು ದಿಟ್ಟವಾಗಿ ಎದುರಿಸಿ ಮೂರನೇ ವಿಕೆಟ್‌ಗೆ 147 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಇದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತು.
ಭಾರತದ ದಾಖಲೆ ಪತನ
282 ರನ್‌ಗಳನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಐಸಿಸಿ ಫೈನಲ್‌ನಲ್ಲಿ ಗರಿಷ್ಠ ಮೊತ್ತದ ಚೇಸಿಂಗ್ ನಡೆಸಿದ ದಾಖಲೆ ನಿರ್ಮಿಸಿತು. ಈ ಮೂಲಕ 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಲಂಕಾದ 278 ರನ್ ಸವಾಲನ್ನು ಬೆನ್ನಟ್ಟಿದ ಭಾರತದ ದಾಖಲೆಯನ್ನು ಮುರಿಯಿತು.
113 ವರ್ಷಗಳ ಸೇಡು ತೀರಿಸಿಕೊಂಡ ಹರಿಣ ಪಡೆ
1912ರ ಜುಲೈಯಲ್ಲಿ ಇತ್ತಂಡಗಳು ಇಲ್ಲಿ ಎದುರಾಗಿದ್ದವು. ಅದು ಇಂಗ್ಲೆಂಡನ್ನು ಒಳಗೊಂಡ, 9 ಟೆಸ್ಟ್ ಪಂದ್ಯಗಳ ತ್ರಿಕೋನ ಸರಣಿ ಆಗಿತ್ತು. ಆಗ ಅಂತಿಮ ಸುತ್ತಿನ ಪಂದ್ಯವನ್ನು ಈ ತಂಡಗಳು ಲಾರ್ಡ್ಸ್‌ನಲ್ಲಿ ಆಡಿದ್ದವು. ಆಸ್ಟ್ರೇಲಿಯ 10 ವಿಕೆಟ್ ಜಯ ಸಾಧಿಸಿತ್ತು. ಇದೀಗ ಅಂದಿನ ಸೋಲಿಗೆ 113 ವರ್ಷಗಳ ಬಳಿಕ ಹರಿಣ ಪಡೆ ಸೇಡು ತೀರಿಸಿಕೊಂಡಿದೆ.