ನವದೆಹಲಿ: ಕಳೆದ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿಶೇಷ ನೋಟ್ಬುಕ್ ಸೆಲೆಬ್ರೇಷನ್ ಹಾಗೂ ಎದುರಾಳಿ ತಂಡದ ಆಟಗಾರರ ಜತೆ ವಾಗ್ಯುದ್ಧ ನಡೆಸಿ ಭಾರೀ ಟೀಕೆ, ದಂಡ ಮತ್ತು ಒಂದು ಪಂದ್ಯದ ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಯುವ ಸ್ಪಿನ್ನರ್ ದಿಗ್ವೇಶ್ ರಾಥಿ ಮತ್ತೊಮ್ಮೆ ದಂಡಕ್ಕೆ ಗುರಿಯಾಗಿದ್ದಾರೆ.
ದೆಹಲಿ ಪ್ರೀಮಿಯರ್ ಲೀಗ್ 2025 (DPL 2025) ರ ಎಲಿಮಿನೇಟರ್ ಪಂದ್ಯದ ಸಮಯದಲ್ಲಿ ಮೈದಾನದಲ್ಲಿ ನಿತೀಶ್ ರಾಣಾ ಅವರೊಂದಿಗೆ ವಾಗ್ವಾದ ನಡೆಸಿದ ಕಾರಣಕ್ಕೆ ದಿಗ್ವೇಶ್ ರಾಥಿಗೆ ಭಾರಿ ದಂಡ ವಿಧಿಸಲಾಗಿದೆ. ನಿತೀಶ್ ರಾಣಾಗೂ ದಂಡ ವಿಧಿಸಲಾಗಿದೆ. ವೆಸ್ಟ್ ಡೆಲ್ಲಿ ಲಯನ್ಸ್ ಮತ್ತು ಸೌತ್ ಡೆಲ್ಲಿ ಸೂಪರ್‌ಸ್ಟಾರ್ಜ್ ನಡುವಿನ ಪಂದ್ಯದಲ್ಲಿ ರಾಥಿ ಮತ್ತು ನಿತೀಶ್ ನಡುವೆ ವಾಗ್ವಾದ ನಡೆದು, ಉಭಯ ಆಟಗಾರರು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಈ ವೇಳೆ ಇತರ ಆಟಗಾರರು ಮತ್ತು ಅಂಪೈರ್‌ಗಳು ಅವರನ್ನು ಬೇರ್ಪಡಿಸಬೇಕಾಯಿತು.
ಆಟದ ಉತ್ಸಾಹಕ್ಕೆ ವಿರುದ್ಧವಾದ ನಡವಳಿಕೆಗಾಗಿ ಆರ್ಟಿಕಲ್ 2.2 (ಹಂತ 2) ರ ಅಡಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಗಾಗಿ ರಾಥಿಗೆ ಪಂದ್ಯ ಶುಲ್ಕದ 80% ದಂಡ ವಿಧಿಸಲಾಗಿದೆ. ಮತ್ತೊಂದೆಡೆ, ಆರ್ಟಿಕಲ್ 2.6 (ಹಂತ 1) ರ ಅಡಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಗಾಗಿ ರಾಣಾಗೆ ಪಂದ್ಯ ಶುಲ್ಕದ 50% ದಂಡ ವಿಧಿಸಲಾಗಿದೆ. ಪಂದ್ಯದ ಸಮಯದಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಅವಮಾನಕರವಾದ ಸನ್ನೆಯನ್ನು ಬಳಸುವುದು ದಂಡಕ್ಕೆ ಗುರಿಯಾಗುತ್ತದೆ.
ಇದೇ ಪಂದ್ಯದ 11 ನೇ ಓವರ್‌ನಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ತಂಡದ ಬ್ಯಾಟ್ಸ್‌ಮನ್ ಕ್ರಿಶ್ ಯಾದವ್ (22 ಎಸೆತಗಳಲ್ಲಿ 31) ಅವರನ್ನು ಔಟ್ ಮಾಡಿದ ಸೌತ್ ಡೆಲ್ಲಿ ಸೂಪರ್‌ಸ್ಟಾರ್ಜ್ ತಂಡದ ವೇಗಿ ಅಮನ್ ಭಾರ್ತಿ ಅವರಿಗೆ ಸೆಂಡ್ ಔಟ್ ನೀಡಿದಾಗ ಪಂದ್ಯದಲ್ಲಿ ಮತ್ತೊಂದು ಬಿಗುವಿನ ವಾತಾವರಣ ಕಂಡುಬಂದಿತು. ಯಾದವ್ ಪ್ರತಿದಾಳಿ ನಡೆಸಿ, ಹಿಂತಿರುಗುವಾಗ ಸೀಮರ್ ಜೊತೆ ಮಾತಿನ ಚಕಮಕಿ ನಡೆಸಿದರು ಆದರೆ ಅಂಪೈರ್ ಅವರನ್ನು ದೂರ ತಳ್ಳಿದರು.
ಎದುರಾಳಿ ತಂಡದ ಆಟಗಾರನಿಂದ ನಿಂದನೆ ಮತ್ತು ಆಟಗಾರನ ಕಡೆಗೆ ಬ್ಯಾಟ್ ತೋರಿಸಿದ ಕಾರಣಕ್ಕೆ ಸಂಬಂಧಿಸಿದ ಆರ್ಟಿಕಲ್ 2.3 (ಹಂತ 2) ಅಡಿಯಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಿಶ್ ಯಾದವ್ ಅವರಿಗೆ ಪಂದ್ಯ ಶುಲ್ಕದ 100% ದಂಡ ವಿಧಿಸಲಾಗಿದೆ. ಸುಮಿತ್ ಮಾಥುರ್ ಅವರಿಗೆ ಆರ್ಟಿಕಲ್ 2.5 (ಹಂತ 1) ರ ಅಡಿಯಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯ ಶುಲ್ಕದ 50% ದಂಡ ವಿಧಿಸಲಾಗಿದೆ.