ನಾಗ್ಪುರ: ಇತ್ತೀಚೆಗೆ ನಡೆದಿದ್ದ 3ನೇ ಆವೃತ್ತಿಯ ಫಿಡೆ ಮಹಿಳಾ ಚೆಸ್ ವಿಶ್ವಕಪ್(Women's World Cup 2025) ಟೂರ್ನಿಯಲ್ಲಿ ಐತಿಹಾಸಿಕ ಪ್ರಶಸ್ತಿ ಗೆದ್ದಿದ್ದ ಭಾರತದ ಯುವ ಚೆಸ್ ತಾರೆ ದಿವ್ಯಾ ದೇಶ್‌ಮುಖ್(Divya Deshmukh) ಅವರನ್ನು ಮಹಾರಾಷ್ಟ್ರ ಸರ್ಕಾರ ಸನ್ಮಾನಿಸಿದೆ. ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(Devendra Fadnavis) ಅವರು ಗೌರವಿಸಿ, ರಾಜ್ಯ ಸರ್ಕಾರದ ವತಿಯಿಂದ 3 ಕೋಟಿ ರೂ. ಬಹುಮಾನದ ಚೆಕ್ ವಿತರಿಸಿದರು.
ದೇಶ್‌ಮುಖ್ ಅವರ ನಾಗ್ಪುರದ ನಿವಾಸಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಕೂಡ ಭೇಟಿ ನೀಡಿ ಚೆಸ್ ತಾರೆಗೆ ಅಭಿನಂದನೆ ಸಲ್ಲಿಸಿದ್ದಾರೆ. ದಿವ್ಯಾ ಭೇಟಿ ವೇಳೆ ನ್ಯಾ। ಗವಾಯಿ ತಮ್ಮ ಹಳೆ ನಂಟನ್ನು ಮೆಲುಕು ಹಾಕಿಕೊಂಡರು. ಈ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡಿದ ಅವರು, ‘ ನಾವು ಒಂದೇ ಕುಟುಂಬದ ರೀತಿಯಲ್ಲಿ ಬೆಳೆದವರು. ಇಲ್ಲಿಗೆ ಭೇಟಿ ನೀಡುತ್ತಿದ್ದಂತೆ 50-55 ವರ್ಷಗಳ ಹಿಂದಿನ ಸಂತಸದ ವಿಷಯಗಳು ನೆನಪಾಗುತ್ತಿದೆ’ ಎಂದರು.
19 ವರ್ಷದ ದಿವ್ಯಾ, ಇತ್ತೀಚೆಗಷ್ಟೇ ಜಾರ್ಜಿಯಾದ ಬಾಟುಮಿಯಲ್ಲಿ ನಡೆದ ಚೆಸ್ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತದವರೇ ಆದ ಗ್ರ್ಯಾಂಡ್ ಮಾಸ್ಟರ್ ಕೊನೆರು ಹಂಪಿ ಅವರನ್ನು ಸೋಲಿಸಿ ಐತಿಹಾಸಿಕ ಪ್ರಶಸ್ತಿ ಜಯಿಸಿದ್ದರು.
ದಿವ್ಯಾ ವಿಶ್ವಕಪ್ ವಿಜೇತೆಯಾಗಿದ್ದರೂ, ವಿಶ್ವ ಚಾಂಪಿಯನ್ ಅಲ್ಲ. ಹೌದು, ಚೆಸ್‌ನಲ್ಲಿ ವಿಶ್ವಕಪ್ ಬೇರೆ, ವಿಶ್ವ ಚಾಂಪಿಯನ್‌ಶಿಪ್ ಬೇರೆ. ಈ ಎರಡೂ ಟೂರ್ನಿಗಳನ್ನು ಚೆಸ್‌ನ ಜಾಗತಿಕ ಆಡಳಿತ ಮಂಡಳಿ ಫಿಡೆ ಆಯೋಜಿಸಿರೂ ಕೂಡ ಚೆಸ್ ವಿಶ್ವಕಪ್ ಎಂಬುದು ಒಂದು ಟೂರ್ನಿಯಾಗಿದ್ದು, ಇದರಲ್ಲಿ ಅಗ್ರ-3 ಸ್ಥಾನ ಪಡೆದ ಸ್ಪರ್ಧಿಗಳು ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆಯುತ್ತಾರೆ. ಇನ್ನಿತರ ಟೂರ್ನಿಗಳಲ್ಲಿ ಗೆದ್ದವರು ಸೇರಿ ಒಟ್ಟು 8 ಮಂದಿ ನಡುವೆ ಕ್ಯಾಂಡಿಡೇಟ್ಸ್ ಟೂರ್ನಿ ನಡೆಯುತ್ತದೆ. ಕ್ಯಾಂಡಿಡೇಟ್ಸ್ ಗೆದ್ದವರು ಹಾಲಿ ವಿಶ್ವ ಚಾಂಪಿಯನ್ ಜತೆ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದ್ದಾರೆ.
ಇದನ್ನೂ ಓದಿ Divya Deshmukh: ವಿಶ್ವಕಪ್ ಗೆದ್ದರೂ ದಿವ್ಯಾ ವಿಶ್ವ ಚಾಂಪಿಯನ್ ಅಲ್ಲ!