ನವದೆಹಲಿ: ಭಾರತದ ಯುವ ಚೆಸ್ ತಾರೆ, ಮಹಿಳಾ ಚೆಸ್ ವಿಶ್ವಕಪ್ ವಿಜೇತೆ ದಿವ್ಯಾ ದೇಶ್‌ಮುಖ್ ಮತ್ತು ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಫಿಡೆ ಗ್ರ್ಯಾಂಡ್ ಸ್ವಿಸ್ 2025 ರ ಎಂಟನೇ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ. ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆಯುವ 19 ವರ್ಷದ ಇಬ್ಬರು ಭಾರತೀಯ ಗ್ರ್ಯಾಂಡ್‌ಮಾಸ್ಟರ್‌ಗಳ ನಡುವಿನ ರೋಮಾಂಚಕಾರಿ ಹಣಾಹಣಿ ಭಾರೀ ಕುತೂಹಲ ಕೆರಳಿಸಿದೆ.
ಗುರುವಾರ ಏಳನೇ ಸುತ್ತಿನ ಮುಕ್ತಾಯದ ನಂತರ ಸ್ವಿಸ್ ಸ್ವರೂಪವನ್ನು ಅನುಸರಿಸುವ ಜೋಡಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಇದರಲ್ಲಿ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಗುಕೇಶ್ ಸತತ ಮೂರನೇ ಸೋಲನ್ನು ಅನುಭವಿಸಿದರೆ, ಅತ್ಯಂತ ಕಿರಿಯ ಮಹಿಳಾ ವಿಶ್ವಕಪ್ ವಿಜೇತೆ ದಿವ್ಯಾ ಈ ಪಂದ್ಯಾವಳಿಯಲ್ಲಿ ತನ್ನ ಎರಡನೇ ಜಯವನ್ನು ಗಳಿಸಿದರು.
ಡಿ. ಗುಕೇಶ್ (ಬಿಳಿ ಕಾಯಿಗಳು) ಮತ್ತು ದಿವ್ಯಾ ದೇಶಮುಖ್ (ಕಪ್ಪು ಕಾಯಿಗಳು) ನಡುವಿನ FIDE ಗ್ರ್ಯಾಂಡ್ ಸ್ವಿಸ್‌ನ ಎಂಟನೇ ಸುತ್ತಿನ ಹಣಾಹಣಿ ಸೆಪ್ಟೆಂಬರ್ 12 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3:45 ಕ್ಕೆ ಪ್ರಾರಂಭವಾಗಲಿದ್ದು, ಪಂದ್ಯವನ್ನು FIDE ಅಧಿಕೃತ YouTube ಚಾನೆಲ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.
ಗುಕೇಶ್ ಎರಡು ಗೆಲುವುಗಳು ಮತ್ತು ಎರಡು ಡ್ರಾಗಳೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಿದರು. ಆದಾಗ್ಯೂ, ಅಮೆರಿಕದ ಅಭಿಮನ್ಯು ಮಿಶ್ರಾ, ಗ್ರೀಕ್ ನಿಕೋಲಸ್ ಥಿಯೋಡೋರೊ ಮತ್ತು ಟರ್ಕಿಯೆಯ ಎಡಿಜ್ ಗುರೆಲ್ ವಿರುದ್ಧ ಸತತ ಮೂರು ಸೋಲುಗಳ ನಂತರ ಅವರು ಎಂಟನೇ ಸುತ್ತಿಗೆ ಪ್ರವೇಶಿಸಿದರು. ಒಟ್ಟಾರೆಯಾಗಿ, ಅವರು ಮೂರು ಅಂಕಗಳನ್ನು ಹೊಂದಿದ್ದಾರೆ.
ಮತ್ತೊಂದೆಡೆ, ದಿವ್ಯಾ ಎರಡು ಸೋಲುಗಳನ್ನು ಅನುಭವಿಸಿದ್ದಾರೆ, ಮೂರು ಡ್ರಾಗಳನ್ನು ಸಾಧಿಸಿದ್ದಾರೆ. ಅವರು 3.5 ಅಂಕಗಳನ್ನು ಹೊಂದಿದ್ದಾರೆ. ಮತ್ತು ಪ್ರಸ್ತುತ ಗುಕೇಶ್‌ಗಿಂತ ಮುಂದಿದ್ದಾರೆ.
ಇದನ್ನೂ ಓದಿ Divya Deshmukh: ಚೆಸ್ ವಿಶ್ವಕಪ್ ವಿಜೇತೆ ದಿವ್ಯಾ ದೇಶ್‌ಮುಖ್‌ಗೆ 3 ಕೋಟಿ ಬಹುಮಾನ