ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮುಂದಿನ ಮೂರು ಆವೃತ್ತಿಗಳಾದ 2027, 2029 ಮತ್ತು 2031ರಲ್ಲಿ ನಿಗದಿಯಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC Finals) ಫೈನಲ್ ಪಂದ್ಯವನ್ನು ಇಂಗ್ಲೆಂಡ್‌ನಲ್ಲಿಯೇ ಆಯೋಜಿಸುವುದನ್ನು ಮುಂದುವರಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ. ಇದೇ ವೇಳೆ ಫೈನಲ್ ಆಯೋಜಿಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮನವಿಯನ್ನು ತಿರಸ್ಕರಿಸಿದೆ ಎನ್ನಲಾಗಿದೆ.
2019 ರಲ್ಲಿ ಆರಂಭವಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೂರು ಆವೃತ್ತಿ ಕೂಡ ಇಂಗ್ಲೆಂಡ್‌ನಲ್ಲಿಯೇ ನಡೆದಿದೆ. 2021 ರಲ್ಲಿ ನ್ಯೂಜಿಲೆಂಡ್ ಸೌತಾಂಪ್ಟನ್‌ನಲ್ಲಿ ಮತ್ತು 2023 ರಲ್ಲಿ ಆಸ್ಟ್ರೇಲಿಯಾ ದಿ ಓವಲ್‌ನಲ್ಲಿ ಗೆಲುವು ಸಾಧಿಸಿತ್ತು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ 2025 ರ ಫೈನಲ್ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಬಿಸಿಸಿಐ(BCCI) ವಿವಿಧ ಕ್ರಿಕೆಟ್ ಆಡುವ ರಾಷ್ಟ್ರಗಳ ನಡುವೆ ಫೈನಲ್ ಅನ್ನು ಪರ್ಯಾಯವಾಗಿ ನಡೆಸಬೇಕೆಂದು ಪದೇಪದೆ ಒತ್ತಾಯ ಮಾಡುತ್ತಿದ್ದರೂ ಐಸಿಸಿ ಮಾತ್ರ ಆತಿಥ್ಯವನ್ನು ಇಂಗ್ಲೆಂಡ್‌ಗೆ ನೀಡುತ್ತಿದೆ.
ದಿ ಟೆಲಿಗ್ರಾಫ್ ಯುಕೆ ವರದಿಯ ಪ್ರಕಾರ, ಮುಂದಿನ ಮೂರು ಋತುಗಳ ಫೈನಲ್ ಇಂಗ್ಲೆಂಡ್‌ನಲ್ಲಿ ಮುಂದುವರಿಸುವ ಉದ್ದೇಶವನ್ನು ಐಸಿಸಿ ಈಗಾಗಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ತಿಳಿಸಿದೆ. ಭಾರತದಿಂದ ಗಂಭೀರ ಆಸಕ್ತಿ ಮತ್ತು ಕ್ರಿಕೆಟ್ ರಾಷ್ಟ್ರಗಳಲ್ಲಿ ಸ್ಥಳವನ್ನು ಬದಲಾಯಿಸುವ ಬಗ್ಗೆ ಚರ್ಚೆಗಳ ಹೊರತಾಗಿಯೂ ಈ ನಿರ್ಧಾರ ಬಂದಿದೆ ಎಂದು ವರದಿಯಾಗಿದೆ.
"ಭಾರತವು ಆತಿಥ್ಯದ ಪ್ರಯತ್ನ ಮಾಡಿದರೂ, ಮುಂದಿನ ಮೂರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳನ್ನು ಆಯೋಜಿಸಲು ಇಂಗ್ಲಿಷ್ ಕ್ರಿಕೆಟ್ ಒಪ್ಪಿಗೆ ನೀಡುವ ಹಂತಕ್ಕೆ ತಲುಪಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2019 ರಲ್ಲಿ ಪ್ರಾರಂಭವಾಯಿತು ಇವೆಲ್ಲವೂ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಫೈನಲ್‌ನೊಂದಿಗೆ ಮುಕ್ತಾಯಗೊಂಡಿತು. ಮುಂದಿನ ತಿಂಗಳು ಸಿಂಗಾಪುರದಲ್ಲಿ ನಡೆಯಲಿರುವ ಐಸಿಸಿಯ ವಾರ್ಷಿಕ ಸಮ್ಮೇಳನದಲ್ಲಿ ಆತಿಥ್ಯದ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ WTC Final Day 4: ದಕ್ಷಿಣ ಆಫ್ರಿಕಾ ಐತಿಹಾಸಿಕ ಗೆಲುವಿಗೆ ಮಳೆ ಅಡ್ಡಿ ಆತಂಕ!