ಮುಂಬಯಿ: ಮಹಿಳಾ ಏಕದಿನ ವಿಶ್ವಕಪ್‌ನ(Women's World Cup 2025) ನಿರ್ಣಾಯಕ ಪಂದ್ಯದಲ್ಲಿ, ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಡೆಕ್ವರ್ಥ್ ಲೂಯಿಸ್ ನಿಯಮದಂತೆ 53 ರನ್‌ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು. ಇದರೊಂದಿಗೆ ಸೆಮೀಸ್ ರೇಸ್ ಕೊನೆಗೊಂಡಿತು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ಭಾರತ ಸೆಮಿಫೈನಲ್ ತಲುಪಿದವು. ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹೊರಬಿದ್ದವು. ಭಾರತ ಇನ್ನೊಂದು ಪಂದ್ಯ ಗೆದ್ದರೂ 4ನೇ ಸ್ಥಾನಿಯಾಗಿ ಲೀಗ್ ಹಂತ ಕೊನೆಗೊಳಿಸಲಿದೆ.
ಸೆಮಿಫೈನಲ್ ಪಂದ್ಯಗಳು ಅ.29ರಿಂದ ಆರಂಭಗೊಳ್ಳಲಿದೆ. ಭಾರತಕ್ಕೆ ಸೆಮಿಯಲ್ಲಿ ಆಸ್ಟ್ರೇಲಿಯಾ ಎದುರಾಗುವ ಸಾಧ್ಯತೆ ಇದೆ. ಗುವಾಹಟಿ ಮತ್ತು ನವೀ ಮುಂಬೈನಲ್ಲಿ ಎರಡು ಸೆಮಿ ಪಂದ್ಯ ನಡೆಯಲಿದೆ. ಫೈನಲ್ ನ.2ರಂದು ನಡೆಯಲಿದೆ.
ಗುರುವಾರ ನಡೆದ ಮಳೆಯಿಂದಾಗಿ ಓವರ್ ಕಡಿತಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 49 ಓವರಲ್ಲಿ 340 ರನ್ ಕಲೆಹಾಕಿತು. ಪ್ರತೀಕಾ ರಾವಲ್ 134 ಎಸೆತಗಳಲ್ಲಿ 122, ಸ್ಮೃತಿ ಮಂಧನಾ 95 ಎಸೆತಗಳಲ್ಲಿ 109, ಜೆಮಿಮಾ ರೋಡ್ರಿಗ್ 76 ರನ್ ಸಿಡಿಸಿದರು. ಭಾರತದ ಇನ್ನಿಂಗ್ಸ್ ಬಳಿಕವೂ ಮಳೆ ಸುರಿದ ಕಾರಣ, ಕಿವೀಸ್ 44 ಓವರ್‌ಗಳಲ್ಲಿ 325 ರನ್ ಗುರಿ ನೀಡಲಾಯಿತು. ಆದರೆ ತಂಡ 8 ವಿಕೆಟ್‌ಗೆ 271 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ Women's World Cup: ನ್ಯೂಜಿಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಭಾರತ ವನಿತೆಯರು!
ಕಿವೀಸ್ ಪರ ಬ್ರೂಕ್ ಹಾಲಿಡೇ 81, ಇಸಾಬೆಲ್ಲ ಗೇಜ್ ಔಟಾಗದೆ 65 ರನ್ ಸಿಡಿಸಿದರು. ಆದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಪ್ರತೀಕಾ ರಾವಲ್ ಏಕದಿನದ 23 ಇನ್ನಿಂಗ್ಸ್ ಗಳಲ್ಲೇ 1000 ರನ್ ಕಲೆಹಾಕಿ ಜಂಟಿ ದಾಖಲೆ ನಿರ್ಮಿಸಿದರು. ಆಸ್ಟ್ರೇಲಿಯಾದ ಲಿಂಡ್ಸ್ ರೀಲರ್ ಕೂಡಾ 1000 ರನ್‌ಗೆ 23 ಇನ್ನಿಂಗ್ಸ್ ತೆಗೆದುಕೊಂಡಿದ್ದರು.