ರಾಜ್‌ಗಿರಿ: ಬಿಹಾರದ ರಾಜ್‌ಗೀರ್‌ನಲ್ಲಿ ನಡೆದ ಏಷ್ಯಾ ಕಪ್ ಹಾಕಿ(Hockey Asia Cup) ಫೈನಲ್‌ನಲ್ಲಿ ಆತಿಥೇಯ ಭಾರತ ತಂಡ ದಕ್ಷಿಣ ಕೊರಿಯಾವನ್ನು(India vs Korea) ಮಣಿಸಿ ನಾಲ್ಕನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿ ಭಾರತ 4-1 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ಮುಂದಿನ ವರ್ಷ ಬೆಲ್ಜಿಯಂ– ನೆದರ್ಲೆಂಡ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್ ಹಾಕಿಗೆ ನೇರ ಟಿಕೆಟ್ ಪಡೆಯಿತು.
ಪಂದ್ಯ ಆರಂಭಗೊಂಡ 31 ಸೆಕೆಂಡುಗಳಲ್ಲಿ ಭಾರತ ಗೋಲಿನ ಖಾತೆ ತೆರೆಯಿತು. ಸುಖ್‌ಜೀತ್ ಗೋಲು ಬಾರಿಸಿದರು. 27ನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ಗೋಲು ಗಳಿಸಿದರು. ಮೊದಲಾರ್ಥ 2-0 ಅಂತರದಿಂದ ಕೊನೆಗೊಂಡಿತು. ದ್ವಿತೀಯಾರ್ಧದಲ್ಲಿಯೂ ಅಮೋಘ ಆಟವಾಡಿದ ಭಾರತಕ್ಕೆ ದಿಲ್‌ಪ್ರೀತ್ ಸಿಂಗ್ ಮತ್ತೊಂದು ಗೋಲು ಬಾರಿಸಿ ಮುನ್ನಡೆ ಹೆಚ್ಚಿಸಿದರು.
ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್‌ನಲ್ಲಿ ಅಮಿತ್ ರೋಹಿದಾಸ್ ಗೋಲು ಬಾರಿಸಿದರು. ಈ ವೇಳೆ ಭಾರತದ ಗೆಲುವು ಕೂಡ ಖಚಿತವಾಯಿತು. ಕೊರಿಯ ಪರ ಸನ್ ಡೈನ್ 51ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
1982ರಲ್ಲಿ ಏಷ್ಯಾಕಪ್ ಹಾಕಿ ಪಂದ್ಯಾವಳಿ ಆರಂಭವಾದಗಿನಿಂದಲೂ ಭಾರತ ತಂಡ ಪಾರಮ್ಯ ಮೆರೆದಿದೆ. ಈ ಬಾರಿಯದ್ದೂ ಸೇರಿ ಒಟ್ಟು ನಾಲ್ಕು ಪ್ರಶಸ್ತಿ ಗೆದ್ದಂತಾಯಿತು. 2003ರಲ್ಲಿ ಪಾಕಿಸ್ತಾನ ವಿರುದ್ಧ, 2007ರಲ್ಲಿ ದಕ್ಷಿಣ ಕೊರಿಯಾ ವಿರುದ್ಧ, 2017ರಲ್ಲಿ ಬಾಂಗ್ಲಾದೇಶ ಮಣಿಸಿ ಪ್ರಶಸ್ತಿ ಗೆದ್ದಿತ್ತು.