ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ(India Squad For West Indies Tests) ಭಾರತ ತಂಡವನ್ನು ಇಂದು(ಬುಧವಾರ) ಪ್ರಕಟಿಸುವ ಸಾಧ್ಯತೆ ಇದ್ದು, ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ. ತಂಡದಲ್ಲಿ ಸ್ಥಾನವು ಗಂಭೀರ ಅಪಾಯದಲ್ಲಿರುವ ಆಟಗಾರರಲ್ಲಿ ಒಬ್ಬರು ಕರುಣ್ ನಾಯರ್(Karun Nair), ದೇಶೀಯ ಕ್ರಿಕೆಟ್‌ನಲ್ಲಿ ರನ್ ಹೊಳೆಯನ್ನೇ ಹರಿಸಿ 8 ವರ್ಷದ ಬಳಿಕ ಮತ್ತೆ ತಂಡದಲ್ಲಿ ಅವಕಾಶ ಪಡೆದಿದ್ದ ಕರುಣ್, ಇಂಗ್ಲೆಂಡ್ ಪ್ರವಾಸದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ವಿಂಡೀಸ್ ಎದುರಿನ ಟೆಸ್ಟ್ ಸರಣಿಯಲ್ಲಿ ಅವರಿಗೆ ಸ್ಥಾನ ಸಿಗಲಿದೆಯಾ ಎಂದು ಕಾದು ನೋಡಬೇಕಿದೆ.
ಇಂಗ್ಲೆಂಡ್ ಪ್ರವಾಸದ ಐದು ಟೆಸ್ಟ್ ಪಂದ್ಯಗಳಲ್ಲಿ ನಾಲ್ಕರಲ್ಲಿ ಕರುಣ್ ನಾಯರ್‌ಗೆ ಅವಕಾಶ ಸಿಕ್ಕಿತು. ಆದರೆ, ಕರುಣ್‌ಗೆ ಸ್ಥಿರವಾದ ಸ್ಥಾನ ಸಿಗಲಿಲ್ಲ. ಲೀಡ್ಸ್ ಮತ್ತು ಓವಲ್‌ನಲ್ಲಿ ಐದನೇ ಕ್ರಮಾಂಕದಲ್ಲಿ, ಬರ್ಮಿಂಗ್‌ಹ್ಯಾಮ್ ಮತ್ತು ಲಾರ್ಡ್ಸ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದರು. ನಾಲ್ಕು ಪಂದ್ಯಗಳಿಂದ ಒಂದು ಅರ್ಧಶತಕ ಸೇರಿದಂತೆ ಕರುಣ್ ಇಂಗ್ಲೆಂಡ್‌ನಲ್ಲಿ ಗಳಿಸಿದ್ದು ಕೇವಲ 205 ರನ್ ಮಾತ್ರ. ಕರುಣ್ ಅವರ ಸ್ಕೋರ್‌ಗಳು ಹೀಗಿದ್ದವು, 0, 20, 57, 17, 31, 26, 40, 14 ರನ್.
ಭಾರತವು ಕರುಣ್‌ಗಿಂತ ಮುಂದೆ ಯೋಚಿಸಲು ಸಿದ್ಧವಾದರೆ, ಹಲವು ಆಯ್ಕೆಗಳಿವೆ. ಶ್ರೇಯಸ್ ಅಯ್ಯರ್, ದೇವದತ್ ಪಡಿಕ್ಕಲ್, ಮತ್ತು ಎನ್. ಜಗದೀಶನ್ ಮುಂಚೂಣಿಯಲ್ಲಿದ್ದಾರೆ. ಶ್ರೇಯಸ್‌ಗೆ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿರಲಿಲ್ಲ. ಹೀಗಾಗಿ ಅವರಿಗೆ ವಿಂಡೀಸ್ ಸರಣಿಯಲ್ಲಿ ಸ್ಥಾನ ಸಿಗುವುದು ಖಚಿತ.
ಇದನ್ನೂ ಓದಿ Asia Cup 2025: ಈ ಬಾರಿ ಪ್ರಶಸ್ತಿ ಗೆಲ್ಲುವ ತಮ್ಮ ನೆಚ್ಚಿನ ತಂಡವನ್ನು ಆರಿಸಿದ ಜೋನಾಥನ್ ಟ್ರಾಟ್!
ಇನ್ನೊಂದೆಡೆ ಕರ್ನಾಟಕದ ದೇವದತ್ತ ಪಡಿಕ್ಕಲ್ ಹೆಸರು ಕೂಡ ಕೇಳಿಬಂದಿದೆ. ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ 'ಎ' ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ಪರ ಪಡಿಕ್ಕಲ್ ಮಿಂಚಿದ್ದರು. 150 ರನ್ ಗಳಿಸಿ ಪಡಿಕ್ಕಲ್ ಭಾರತದ ಟಾಪ್ ಸ್ಕೋರರ್ ಆಗಿದ್ದರು.
ಸಂಭಾವ್ಯ ತಂಡ
ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ನಿತೀಶ್ ರೆಡ್ಡಿ, ಎನ್. ಜಗದೀಶನ್.