ದುಬೈ: ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ, ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಏಷ್ಯಾ ಕಪ್ ಟಿ20(Asia Cup 2025) ಹೈವೋಲ್ಟೇಜ್ ಪಂದ್ಯ ಸೆ.14(ಭಾನುವಾರ) ರಂದು ನಡೆಯಲಿದೆ. ಪಹಲ್ಗಾಮ್ ಉಗ್ರರ ದಾಳಿ ಮತ್ತು ಆಪರೇಷನ್ ಸಿಂಧೂರ್ ಬಳಿಕ ಇತ್ತಂಡಗಳ ನಡುವೆ ನಡೆಯುತ್ತಿರುವ ಮೊದಲ ಪಂದ್ಯವಾಗಿರುವುದರಿಂದ ಕ್ರಿಕೆಟ್ ಪ್ರೇಮಿಗಳ ಕುತೂಹಲ ಹೆಚ್ಚಿದ್ದರೂ, ಈ ಪಂದ್ಯದ ಟಿಕೆಟ್ ಬೆಲೆ ದುಬಾರಿಯಾದ ಕಾರಣ ಟಿಕೆಟ್‌ಗಳು ಇನ್ನೂ ಸಂಪೂರ್ಣವಾಗಿ ಮಾರಟವಾಗಿಲ್ಲ ಎಂದು ವರದಿಯಾಗಿದೆ.
ಪಂದ್ಯದ ವಿಐಪಿ ಗ್ಯಾಲರಿಯ ಕೇವಲ 2 ಟಿಕೆಟ್‌ಗಳಿಗೆ 2.5 ಲಕ್ಷ ರೂ.ಗೂ ಅಧಿಕ ಬೆಲೆ ಇದೆ. ಇದರಲ್ಲಿ ಆಹಾರ, ಪಾನೀಯ, ಪಾರ್ಕಿಂಗ್ ಪಾಸ್, ಖಾಸಗಿ ಪ್ರವೇಶದ್ವಾರದಂಥ ವ್ಯವಸ್ಥೆಗಳಿವೆ. ರಾಯಲ್ಸ್ ಬಾಕ್ಸ್‌ನ 2 ಟಿಕೆಟ್‌ಗಳಿಗೆ 2.30 ಲಕ್ಷ, ಸ್ಕೈ ಬಾಕ್ಸ್‌ನ 2 ಟಿಕೆಟ್‌ಗಳಿಗೆ 1.67 ಲಕ್ಷ, ಮಧ್ಯಮ ದರ್ಜೆಯ ಪ್ಲಾಟಿನಂ 75 ಸಾವಿರ, ಗ್ರಾಂಡ್ ಲಾಂಜ್ 41 ಸಾವಿರ ಮತ್ತು ಸ್ಟ್ಯಾಂಡ್ ಟಿಕೆಟ್‌ಗಳೂ ಅತ್ಯಂತ ದುಬಾರಿ ಎನಿಸಿದೆ. ಟಿಕೆಟ್ ಮಾತ್ರವಲ್ಲದೆ. ಜಾಹೀರಾತು ಬೆಲೆ ಕೂಡ ಈ ಬಾರಿ ದುಬಾರಿ ಎನಿಸಿದೆ. 10 ಸೆಕೆಂಡ್‌ಗೆ 16 ಲಕ್ಷ ರೂ. ನಿಗದಿಪಡಿಸಲಾಗಿದೆ.
ಭಾರತ ಶುಭಾರಂಭ
ಭಾರತ ತಂಡ ಈಗಾಗಲೇ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ಬುಧವಾರ ರಾತ್ರಿ ನಡೆದಿದ್ದ ಯುಎಇ(UAE vs IND) ವಿರುದ್ಧದ ಪಂದ್ಯದಲ್ಲಿ 9 ವಿಕೆಟ್‌ಗಳ ಸುಲಭ ಜಯ ಸಾಧಿಸಿತ್ತು. ಪಾಕಿಸ್ತಾನ ಶುಕ್ರವಾರ ನಡೆಯುವ ಪಂದ್ಯದಲ್ಲಿ ಒಮಾನ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ Asia Cup 2025: ಆರ್. ಅಶ್ವಿನ್ ದಾಖಲೆ ಮುರಿದ ಕುಲ್‌ದೀಪ್ ಯಾದವ್