ಚೆನ್ನೈ: 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡವನ್ನು ಮಣಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್(IPL 2025) ಟೂರ್ನಿಯಲ್ಲಿ ದಾಖಲೆಯೊಂದನ್ನು ಸರಿಗಟ್ಟಿದೆ. ಚೆಪಾಕ್ ಮೈದಾನದಲ್ಲಿ ಚೆನ್ನೈ ವಿರುದ್ಧ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದೆ. ಉಭಯ ತಂಡಗಳು ಚೆಪಾಕ್‌ನಲ್ಲಿ ಚೆನ್ನೈ ವಿರುದ್ಧ 9 ಪಂದ್ಯಗಳನ್ನಾಡಿ ತಲಾ 5 ಗೆಲುವು ಸಾಧಿಸಿದೆ. 4 ಗೆಲುವು ಸಾಧಿಸಿದ ಕೆಕೆಆರ್ ದ್ವಿತೀಯ ಸ್ಥಾನದಲ್ಲಿದೆ.
ಬುಧವಾರ ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ ಸೋಲು ಕಂಡ ಚೆನ್ನೈ ಈ ಬಾರಿ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದ ಮೊದಲ ತಂಡ ಎನಿಸಿತು. ಇನ್ನುಳಿದ 4 ಪಂದ್ಯದಲ್ಲಿ ಗೆದ್ದರೂ ನಾಕೌಟ್ ಪ್ರವೇಶಿಸುವುದಿಲ್ಲ. ಸೋಲಿನೊಂದಿಗೆ ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಚೆನ್ನೈ ತಂಡ ತನ್ನ ತವರು ಮೈದಾನದಲ್ಲಿ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸೋಲು ಕಂಡ ಅವಮಾನ ಕೂಡ ಎದುರಿಸಿತು. ಹಾಲಿ ಆವೃತ್ತಿಯಲ್ಲಿ ಧೋನಿ ಪಡೆ ತವರಿನಲ್ಲಿ 5 ಸೋಲು ಕಂಡಿದೆ. 2008 ರಲ್ಲಿ 4 ಸೋಲು ಕಂಡಿದ್ದು ಇದುವರೆಗಿನ ದಾಖಲೆಯಾಗಿತ್ತು.
ಟೂರ್ನಿಯಿಂದ ಹೊರಬೀಳುವ ಮೂಲಕ ಚೆನ್ನೈ ತಂಡ 18 ಆವೃತ್ತಿಗಳ ಪೈಕಿ ಕೇವಲ 4 ಬಾರಿ ಮಾತ್ರ ಪ್ಲೇ-ಆಫ್ ಪ್ರವೇಶಿಸಲು ವಿಫಲವಾಯಿತು. 2020ರಲ್ಲಿ 7ನೇ, 2022ರಲ್ಲಿ 9ನೇ, 2024ರಲ್ಲಿ 5ನೇ ಸ್ಥಾನಿಯಾಗಿತ್ತು. ಉಳಿದಂತೆ ಎಲ್ಲಾ ಬಾರಿ ಪ್ಲೇ-ಆಫ್‌ಗೇರಿರುವ ತಂಡ 5 ಬಾರಿ ಚಾಂಪಿಯನ್ ಆಗಿದ್ದರೆ, 5 ಬಾರಿ ರನ್ನರ್-ಅಪ್ ಆಗಿದೆ.
ಇದನ್ನೂ ಓದಿ IPL 2025: ಎಂಎಸ್ ಧೋನಿಯ ನಿವೃತ್ತಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಡಂ ಗಿಲ್‌ಕ್ರಿಸ್ಟ್!
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಚೆನ್ನೈ ತಂಡ 19.2 ಓವರ್‌ಗಳಲ್ಲಿ 190 ರನ್ ಬಾರಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 19.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 194 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಸ್ಕೋರ್ ಪಟ್ಟಿ
ಚೆನ್ನೈ 19.2 ಓವರಲ್ಲಿ 190/10 (ಕರ್ರನ್ 88, ಬ್ರೆವಿಸ್ 32, ಚಹಲ್ 4-32, ಅರ್ಶ್‌ದೀಪ್ 2-25), ಪಂಜಾಬ್ 19.4 ಓವರಲ್ಲಿ 194/6 (ಶ್ರೇಯಸ್ 72, ಪ್ರಭ್‌ಸಿಮ್ರನ್ 54, ಖಲೀಲ್ 2-28).