IPL 2025: ಎಂಎಸ್ ಧೋನಿಯ ನಿವೃತ್ತಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಡಂ ಗಿಲ್‌ಕ್ರಿಸ್ಟ್!
Adam Gilchrist on MS Dhoni's Future: ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರು ಸದ್ಯ ನಿವೃತ್ತಿ ಹಂಚಿನಲ್ಲಿದ್ದಾರೆ. ಎಂಎಸ್ ಧೋನಿ ಯಾವಾಗ ನಿವೃತ್ತಿ ಪಡೆಯಲಿದ್ದಾರೆಂಬ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲವಿದೆ. ಈ ಬಗ್ಗೆ ಆಸ್ಟ್ರೇಲಿಯಾ ಮಾಜಿ ವಿಕೆಟ್ ಕೀಪರ್ ಆಡಂ ಗಿಲ್‌ಕ್ರಿಸ್ಟ್ ಪ್ರತಿಕ್ರಿಯೆ ನೀಡಿದ್ದಾರೆ.

ಎಂಎಸ್ ಧೋನಿ ಬಗ್ಗೆ ಆಡಂ ಗಿಲ್‌ಕ್ರಿಸ್ಟ್ ಭವಿಷ್ಯ.

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಎಂಎಸ್ ಧೋನಿಯ (MS Dhoni) ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಬಳಿಕ ಎಂಎಸ್ ಧೋನಿ ಐಪಿಎಲ್ ವೃತ್ತಿ ಜೀವನಕ್ಕೆ ವಿದಾಐ ಹೇಳಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಎಂಎಸ್ ಧೋನಿ ಮುಂದಿನ ವರ್ಷವೂ ಆಡುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಇದೀಗ ಆಸ್ಟ್ರೇಲಿಯಾ ಮಾಜಿ ವಿಕೆಟ್ ಕೀಪರ್ ಆಡಂ ಗಿಲ್‌ಕ್ರಿಸ್ಟ್ ಅವರು ಎಂಎಸ್ ಧೋನಿಯ ನಿವೃತ್ತಿ ಬಗ್ಗೆ ಭವಿಷ್ಯ ನುಡಿದಿದ್ದಾರೆ.
"ತಾನು ಏನು ಮಾಡಬೇಕೆಂದು ಎಂಎಸ್ ಧೋನಿಗೆ ಚೆನ್ನಾಗಿ ಗೊತ್ತಿದೆ. ನಾನು ಅವರ ಭವಿಷ್ಯದ ಬಗ್ಗೆ ಹೇಳುತ್ತಿದ್ದೇನೆ. ಇದು ನನಗೆ ದುಬಾರಿಯಾದರೂ ಆಗಬಹುದು ಎಂದು ಗೊತ್ತಿದೆ. ಮುಂದಿನ ವರ್ಷ ಐಪಿಎಲ್ ಆಡಬಾರದೆಂಬ ಅಂಶ ಅವರಿಗೂ ಗೊತ್ತಿದೆ. ನಾನು ನಿಮ್ಮ ಇಷ್ಟಪಡುತ್ತೇನೆ ಎಂಎಸ್. ನೀವು ಚಾಂಪಿಯನ್, ಐಕಾನ್ ಇದ್ದಂತೆ," ಎಂದು ಡೆಕ್ಕನ್ ಚಾರ್ಜರ್ಸ್ (ಈಗಿನ ಸನ್‌ರೈಸರ್ಸ್ ಹೈದರಾಬಾದ್) ಮಾಜಿ ನಾಯಕ ಆಡಂ ಗಿಲ್‌ಕ್ರಿಸ್ಟ್ ಕ್ರಿಕ್‌ಬಝ್‌ಗೆ ತಿಳಿಸಿದ್ದಾರೆ.
2024ರ ಐಪಿಎಲ್ ಟೂರ್ನಿಯ ಬಳಿಕ ಎಂಎಸ್ ಧೋನಿ ವಿದಾಯ ಹೇಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಚೆನ್ನೈ ಫ್ರಾಂಚೈಸಿ ಎಂಎಸ್ ಧೋನಿಯನ್ನು ಅನ್‌ಕ್ಯಾಪ್ಡ್ ಆಟಗಾರನ ರೀತಿ 4 ಕೋಟಿ ರೂ ಗಳಿಗೆ ಉಳಿಸಿಕೊಳ್ಳಲಾಗಿತ್ತು. ಆದರೆ, ಅವರು ಈ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಸಿಎಸ್‌ಕೆ ಆಡಿದ ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ. ಆ ಮೂಲಕ ಟೂರ್ನಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆ ಮೂಲಕ ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.
IPL 2025: ʻರಿಂಕು ಸಿಂಗ್‌ಗೆ ಕುಲ್ದೀಪ್ ಯಾದವ್ ಕಪಾಳಮೋಕ್ಷʼ-ಸ್ಪಷ್ಟನೆ ಕೊಟ್ಟ ಕೆಕೆಆರ್!
ಋತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಶುಭಾರಂಭ ಕಂಡಿತ್ತು. ಆದರೆ, ನಂತರ ಸತತ ಸೋಲುಗಳನ್ನು ಅನುಭವಿಸಿತ್ತು. ಇದರ ನಡುವೆ ನಾಯಕ ಋತುರಾಜ್ ಗಾಯಕ್ವಾಡ್ ಐಪಿಎಲ್ ಟೂರ್ನಿಯಿಂದ ಹೊರ ನಡೆದಿದ್ದರು. ನಂತರ ಎಂಎಸ್ ಧೋನಿ ಸಿಎಸ್‌ಕೆ ನಾಯಕತ್ವಕ್ಕೆ ಮರಳಿದ್ದರು. ಆದರೂ ಚೆನ್ನೈ ತಂಡ ಸೋಲಿನ ಸರಪಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.
ಈ ಸೀಸನ್‌ನ ಆರಂಭದಲ್ಲಿ ಸಿಎಸ್‌ಕೆ ಹೆಡ್ ಕೋಚ್ ಸ್ಟಿಫನ್ ಪ್ಲೇಮಿಂಗ್, ಎಂಎಸ್ ಧೋನಿಯ ಫಿಟ್‌ನೆಸ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಹಾಗಾಗಿ 2026ರ ಐಪಿಎಲ್ ಟೂರ್ನಿಯನ್ನು ಆಡಬಹುದು ಅಥವಾ ಈ ಆವೃತ್ತಿಯ ಬಳಿಕ ವಿದಾಯ ಹೇಳಬಹುದೆಂದು ಅವರು ಹೇಳಿದ್ದರು. ಆದರೆ, ಎಂಎಸ್ ಧೋನಿ ಅಧಿಕೃತವಾಗಿ ವಿದಾಯ ಹೇಳುವ ಬಗ್ಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
He has nothing to prove to anyone in the game he has achieved it all.
— 𝐀𝐲𝐬𝐡 (@FristSlip) April 30, 2025
~ Adam Gilchrist on MSD
[ Video - CricBuzz 🎥] 🔥 pic.twitter.com/uJTHG8HqOE
2020ರಲ್ಲಿಯೇ ವಿದಾಯ ಹೇಳಿದ್ದ ಎಂಎಸ್‌ಡಿ
2020ರಲ್ಲಿಯೇ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ, ಅವರು ಅಂದಿನಿಂದ ಇಲ್ಲಿಯವರೆಗೂ ಐಪಿಎಲ್ ಟೂರ್ನಿಯಲ್ಲಿ ಮುಂದುವರಿದಿದ್ದರು. 2017ರಲ್ಲಿ ಅವರು ಕೊನೆಯ ಬಾರಿ ದೇಶಿ ಕ್ರಿಕೆಟ್ ಆಡಿದ್ದರು. ಎಂಎಸ್ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಐದು ಬಾರಿ ಚಾಂಪಿಯನ್ ಆಗಿದೆ. ಇಂಟರ್‌ನ್ಯಾಷನಲ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಎಂಎಸ್‌ಡಿ ಎರಡು ಬಾರಿ ಐಪಿಎಲ್ ಗೆದ್ದಿದ್ದಾರೆ.