ನವದೆಹಲಿ: ಕಳೆದ 16 ತಿಂಗಳುಗಳಿಂದ ಸ್ಪರ್ಧಾತ್ಮಕ ಪಂದ್ಯವನ್ನು ಜಯಿಸುವಲ್ಲಿ ವಿಫಲವಾಗುತ್ತಿದ್ದ ಭಾರತೀಯ ಪುರುಷರ ಫುಟ್ಬಾಲ್ ತಂಡಕ್ಕೆ(Indian football team) ನೂತನ ಕೋಚ್ ಆಗಮನವಾಗಿದೆ. ಪೂರ್ವ ಬಂಗಾಳ ಮತ್ತು ಮೋಹನ್ ಬಗಾನ್ ತಂಡದ ಮಾಜಿ ಮ್ಯಾನೇಜರ್ ಖಾಲಿದ್ ಜಮಿಲ್(Khalid Jamil) ಅವರನ್ನು ತಂಡದ ಹೊಸ ಮುಖ್ಯ ತರಬೇತುದಾರರನ್ನಾಗಿ ಘೋಷಿಸಲಾಗಿದೆ. ಉಪಖಂಡದಲ್ಲಿ ಮಾನ್ಯತೆ ಪಡೆದ ಫುಟ್ಬಾಲ್ ಮ್ಯಾನೇಜರ್ ಆಗಿರುವ ಜಮಿಲ್‌ಗೆ, ಭಾರತ ತಂಡವನ್ನು ಮತ್ತೆ ಗೆಲುವಿನ ಹಳಿಗೆ ಮರಳಿಸುವ ಸವಾಲು ಇದೆ.
ಜಮ್ಶೆಡ್‌ಪುರ ಎಫ್‌ಸಿಗೆ ತರಬೇತುದಾರರಾಗಿರುವ ಜಮಿಲ್, ಭಾರತೀಯ ತಂಡದ ಕೋಚ್ ಆಗಿ ಯಾವಾಗ ಕರ್ತವ್ಯಕ್ಕೆ ಹಾಜಾರಾಗುತ್ತಾರೆ ಎಂಬುದನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ನಿಖರವಾಗಿ ತಿಳಿಸಿಲ್ಲ. ಜಮಿಲ್ 13 ವರ್ಷಗಳಲ್ಲಿ ರಾಷ್ಟ್ರೀಯ ತಂಡದಲ್ಲಿ ತರಬೇತುದಾರರಾದ ಮೊದಲ ಭಾರತೀಯ. ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಕೊನೆಯ ಭಾರತೀಯ ತರಬೇತುದಾರ ಸವಿಯೊ ಮೆಡೀರಾ. ಅವರು ಅಕ್ಟೋಬರ್ 2011 ರಿಂದ ಮಾರ್ಚ್ 2012 ರವರೆಗೆ ಅಧಿಕಾರ ವಹಿಸಿಕೊಂಡಿದ್ದರು.
"ತಾಂತ್ರಿಕ ಸಮಿತಿಯ ಸಮ್ಮುಖದಲ್ಲಿ ಎಐಎಫ್‌ಎಫ್ ಕಾರ್ಯಕಾರಿ ಸಮಿತಿಯು, ಸೀನಿಯರ್ ಇಂಡಿಯಾ ಪುರುಷರ ರಾಷ್ಟ್ರೀಯ ತಂಡದ ಹೊಸ ಮುಖ್ಯ ತರಬೇತುದಾರರಾಗಿ ಖಾಲಿದ್ ಜಮಿಲ್ ಅವರನ್ನು ನೇಮಕ ಮಾಡಲು ಅನುಮೋದನೆ ನೀಡಿದೆ" ಎಂದು ಎಐಎಫ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ IND vs ENG 5th Test: ಗಾಯಗೊಂಡ ಕ್ರಿಸ್ ವೋಕ್ಸ್ ಆಡುವುದು ಅನುಮಾನ
ಖಾಲಿದ್ ಜಮೀಲ್ ಯಾರು?
ಭಾರತದ ಮಾಜಿ ಮಿಡ್‌ಫೀಲ್ಡರ್ ಜಮಿಲ್ ಮಹೀಂದ್ರಾ ಯುನೈಟೆಡ್, ಏರ್ ಇಂಡಿಯಾ ಮತ್ತು ಮುಂಬೈ ಎಫ್‌ಸಿಯಂತಹ ತಂಡಗಳಿಗಾಗಿ ಭಾರತದಲ್ಲಿ ಕ್ಲಬ್ ಫುಟ್‌ಬಾಲ್ ಆಡಿದ್ದಾರೆ. ಮತ್ತು 1998 ರಿಂದ 2006 ರವರೆಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಗಾಯದ ಸಮಸ್ಯೆಯಿಂದ ಅವರು ಬೇಗನೆ ನಿವೃತ್ತಿ ಹೊಂದಬೇಕಾಯಿತು. ಬಳಿಕ ಕೋಚಿಂಗ್ ವೃತ್ತಿಜೀವನ ಆರಂಭಿಸಿದ್ದರು.